ನೋಟು ಅಮಾನ್ಯ ನಿರ್ಧಾರಕ್ಕೆ ಇನ್ನೆರಡು ಬಲಿ

ಹೈದರಾಬಾದ್, ನ.17: ನೋಟು ಅಮಾನ್ಯಗೊಳಿಸಿದ ಬಳಿಕ ತಮ್ಮ ಜಮೀನಿನ ಬೆಲೆ ತೀವ್ರವಾಗಿ ಕುಸಿದ ಕಾರಣ ಕಂಗೆಟ್ಟ ರೈತ ಮತ್ತು ಆತನ ತಂದೆ ಆತ್ಮಹತ್ಯೆ ಮಾಡಿಕೊಂಡ ಘಟನೆ ತೆಲಂಗಾಣದಲ್ಲಿ ನಡೆದಿದೆ. ವಿಷ ಸೇವಿಸಿದ ಇನ್ನಿಬ್ಬರು ಸಾವು ಬದುಕಿನ ಮದ್ಯೆ ಹೋರಾಟ ನಡೆಸುತ್ತಿದ್ದಾರೆ.
ತೆಲಂಗಾಣದ ಸಿದ್ದಿಪೇಟೆ ಜಿಲ್ಲೆಯ ಧರ್ಮಾವರಂ ಗ್ರಾಮದಲ್ಲಿ ಬುಧವಾರ ಈ ಘಟನೆ ಸಂಭವಿಸಿದೆ. ರೈತ ವಿ.ಬಾಲಯ್ಯ ಮತ್ತು ಆತನ ತಂದೆ ವಿ.ಗಾಲಯ್ಯ ಮೃತಪಟ್ಟವರು. ಬಾಲಯ್ಯನ ಪತ್ನಿ ಮತ್ತು ಮಗು ಗಂಭೀರಾವಸ್ಥೆಯಲ್ಲಿದ್ಧಾರೆ. ತನ್ನ ಮಗಳ ಮದುವೆಗಾಗಿ ಬಾಲಯ್ಯ ಲೇವಾದೇವಿಗಾರರಿಂದ ದೊಡ್ಡ ಮೊತ್ತದ ಸಾಲ ಪಡೆದಿದ್ದು ತನ್ನ ಜಮೀನು ಮಾರಿ ಸಾಲ ತೀರಿಸುವ ಯೋಜನೆ ಹಾಕಿಕೊಂಡಿದ್ದ. ಈ ಜಮೀನಿಗೆ 12 ಲಕ್ಷಕ್ಕೆ ಬೇಡಿಕೆ ಬಂದಿತ್ತು. ಆದರೆ ನೋಟು ಅಮಾನ್ಯ ನಿರ್ಧಾರ ಹೊರಬೀಳುತ್ತಿದ್ದಂತೆಯೇ ಜಮೀನಿನ ಬೆಲೆ ತೀವ್ರ ಕುಸಿದು 6 ಲಕ್ಷಕ್ಕೆ ಬಂದು ಮುಟ್ಟಿದೆ. ಇದರಿಂದ ಕಂಗೆಟ್ಟ ಬಾಲಯ್ಯ,ಕೋಳಿ ಪದಾರ್ಥಕ್ಕೆ ವಿಷ ಬೆರೆಸಿ ತನ್ನ ತಂದೆ, ಪತ್ನಿ, ಮಗನಿಗೆ ನೀಡಿದ್ದು ತಾನೂ ತಿಂದಿದ್ದಾನೆ. ಪರಿಣಾಮ ಬಾಲಯ್ಯ ಮತ್ತಾತನ ತಂದೆ ಸಾವನ್ನಪ್ಪಿದ್ದು, ಉಳಿದ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಾವಿಗೆ ಕೇಂದ್ರ ಸರಕಾರವೇ ಹೊಣೆ ಎಂದು ಸ್ಥಳೀಯ ವಕೀಲ ರಾಮಲಿಂಗಾ ರೆಡ್ಡಿ ದೂರಿದ್ದಾರೆ. ನೋಟು ಅಮಾನ್ಯ ಘಟನೆಗೆ ಸಂಬಂಧಿಸಿ ತೆಲಂಗಾಣದಲ್ಲಿ ನಾಲ್ಕು ಮಂದಿ ಸಾವನ್ನಪಿದ್ಧಾರೆ.





