ಇಸ್ಲಾಮ್ ವೈಯಕ್ತಿಕ ಕಾನೂನು ಭಾರತದ ಸಂವಿಧಾನಕ್ಕೆ ಪರ್ಯಾಯವಾದ ವ್ಯವಸ್ಥೆ ಅಲ್ಲ: ಅಬ್ದುಸ್ಸಲಾಮ್ ಪುತ್ತಿಗೆ

ಉಡುಪಿ, ನ.17: ಇಸ್ಲಾಮ್ ವೈಯಕ್ತಿಕ ಕಾನೂನು ಎಂಬುದು ಭಾರತದ ಸಂವಿಧಾನಕ್ಕೆ ಪರ್ಯಾಯವಾದ ವ್ಯವಸ್ಥೆ ಅಲ್ಲ. ಇದು ಬಹಳ ಸೀಮಿತವಾಗಿ ಕುಟುಂಬದಲ್ಲಿನ ಸಮಸ್ಯೆಗಳಿಗೆ ಪರಿಹಾರಕ್ಕೆ ಇರುವ ವಿನಾಯತಿಯಾಗಿದೆ ಎಂದು ವಾರ್ತಾಭಾರತಿ ಪತ್ರಿಕೆಯ ಸಂಪಾದಕ ಅಬ್ದುಸ್ಸಲಾಮ್ ಪುತ್ತಿಗೆ ಹೇಳಿದ್ದಾರೆ.
ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ವತಿಯಿಂದ ಗುರುವಾರ ಉಡುಪಿ ದುರ್ಗಾ ಇಂಟರ್‌ನ್ಯಾಶನಲ್ ಹೊಟೇಲಿನ ಸಭಾಂಗಣದಲ್ಲಿ ಆಯೋಜಿಸಲಾದ ಸ್ನೇಹ ಸಂವಾದ ಕಾರ್ಯಕ್ರಮದಲ್ಲಿ ‘ಸಮಾನ ನಾಗರಿಕ ಸಂಹಿತೆ ಮತ್ತು ವೈಯಕ್ತಿಕ ಕಾನೂನು’ ಕುರಿತು ಅವರು ವಿಷಯ ಮಂಡಿಸಿ ದರು.
ಭಾರತದಲ್ಲಿರುವ ಶೇ.99ರಷ್ಟು ಕಾನೂನು ಎಲ್ಲ ನಾಗರಿಕರಿಗೂ ಸಮಾನ ವಾಗಿ ಅನ್ವಯವಾಗುತ್ತದೆ. ಇದರಲ್ಲಿ ವಿವಾಹ, ವಿಚ್ಛೇಧನ, ಆಸ್ತಿ ಹಂಚಿಕೆ ಸೇರಿದಂತೆ ಕೆಲವು ಸೀಮಿತ ವಿಚಾರಗಳನ್ನು ಇಸ್ಲಾಮ್ ಧರ್ಮ ಎಂಬ ಕಾರಣಕ್ಕೆ ಮುಸ್ಲಿಮರಿಗೆ ವಿನಾಯಿತಿ ನೀಡಲಾಗಿದೆ. ಆದರೆ ಇದರ ವ್ಯಾಪ್ತಿ ಮಾತ್ರ ಬಹಳ ಸಣ್ಣದ್ದಾಗಿದೆ ಎಂದರು.
ತಲಾಕ್ ವಿಚಾರದ ಚರ್ಚೆಯಲ್ಲಿ ಇಂದು ಮಹಿಳೆಯರ ಬಗ್ಗೆ ಹೆಚ್ಚು ಹೆಚ್ಚು ಅನುಕಂಪ ವ್ಯಕ್ತವಾಗುತ್ತಿದೆ. ಆದರೆ ಈ ದೇಶದಲ್ಲಿ ಪ್ರತಿ 16ನಿಮಿಷಕ್ಕೆ ಒಂದು ಅತ್ಯಾಚಾರ, ಪ್ರತಿ ನಾಲ್ಕು ನಿಮಿಷಕ್ಕೆ ಮಹಿಳಾ ದೌರ್ಜನ್ಯ ಸೇರಿದಂತೆ ಪ್ರತಿ ಒಂದು ಗಂಟೆಗೆ 26 ಗಂಭೀರ ಅಪರಾಧ ಪ್ರಕರಣಗಳು ಮಹಿಳೆಯರಿಗೆ ಸಂಬಂಧಿಸಿ ನಡೆಯುತ್ತಿದೆ. ಇಷ್ಟಾದರೂ ಇಂದು ಈ ವಿಷಯಗಳ ಬಗ್ಗೆ ಎಲ್ಲೂ ಈ ರೀತಿಯ ಗಂಭೀರ ಚರ್ಚೆಗಳು ನಡೆಯುತ್ತಿಲ್ಲ ಎಂದು ಅವರು ತಿಳಿಸಿದರು.
ಯಾವುದೇ ಸಮಸ್ಯೆಯ ಕುರಿತು ಊಹೆ ಮಾಡದೆ ಅದನ್ನು ಅಧ್ಯಯನದ ಮೂಲಕ ತಿಳಿದುಕೊಳ್ಳಬೇಕು. ಮುಸ್ಲಿಮ್ ಸಮುದಾಯದಲ್ಲಿ ತಲಾಕ್ ಸಮಸ್ಯೆ ಇರುವುದು ನಿಜ. ಆದರೆ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಸರಿಯಲ್ಲ. ತಲಾಕ್ ಸಮಸ್ಯೆ ಇತ್ಯರ್ಥಕ್ಕೆ ಇಸ್ಲಾಮ್ ಧರ್ಮದೊಳಗೆ ಪರಿಹಾರವಿದೆ. ಅದರ ಆಧಾರದಲ್ಲಿ ಅದನ್ನು ಬಗೆಹರಿಸಲು ಸಾಧ್ಯ ಎಂದು ಅವರು ಹೇಳಿದರು.
ತಲಾಕ್‌ನ್ನು ಯಾವುದೇ ಮುಸ್ಲಿಮ್ ಬೆಂಬಲಿಸುವುದಿಲ್ಲ. ಅದು ಅನಿಷ್ಟ ಎಂಬುದಾಗಿ ಒಪ್ಪುತ್ತಾರೆ. ತಲಾಕ್‌ನ್ನು ಮೊತ್ತ ಮೊದಲ ಬಾರಿಗೆ ಪರಿಚಯಿ ಸಿದ್ದು ಇಸ್ಲಾಮ್ ಧರ್ಮ. ಇದು ಮಹಿಳೆಯರನ್ನು ದಂಡಿಸಲು ಬಂದ ಕಾನೂನು ಅಲ್ಲ. ಇಸ್ಲಾಮ್ ಧರ್ಮದಲ್ಲಿ ವಧು ದಕ್ಷಿಣೆಯಂತಹ ವ್ಯವಸ್ಥೆ ಇರುವಾಗ ಇದು ಪುರುಷರನ್ನು ದಂಡಿಸುವ ನಿಯಮ ಎಂಬುದಾಗಿ ನಾವು ಅರ್ಥ ಮಾಡಿಕೊಳ್ಳಬಹುದು ಎಂದರು.
ಮುಸ್ಲಿಮರಲ್ಲಿ ತ್ರಿವಳಿ ತಲಾಕ್‌ಗೆ ತುತ್ತಾಗಿರುವ ಮಹಿಳೆಯರ ಸಂಖ್ಯೆ ಶೇ.1ಕ್ಕಿಂತ ಕಡಿಮೆ. ಇದಕ್ಕಿಂತ ಹೆಚ್ಚು ಬಡತನದ ಕಾರಣಕ್ಕೆ ಭಿಕ್ಷಾಟನೆ, ವ್ಯಭಿಚಾರಕ್ಕೆ ಒಳಗಾಗಿರುವ ಲಕ್ಷಾಂತರ ಮುಸ್ಲಿಮ್ ಮಹಿಳೆಯರು ಇದ್ದಾರೆ. ಮೊದಲು ಅವರಿಗೆ ಘನತೆಯ ಬದುಕು ಕಲ್ಪಿಸುವ ಕೆಲಸ ಮಾಡಬೇಕು. ಮುಸ್ಲಿಮ್ ಮಹಿಳೆಯರ ಆರ್ಥಿಕ, ಸಾಮಾಜಿಕ ಸಮಸ್ಯೆಗೆ ಪರಿಹಾರ ಕಲ್ಪಿಸುವ ಕಾರ್ಯ ಆಗಬೇಕು ಎಂದು ಅವರು ತಿಳಿಸಿದರು. ಸಮಾನ ನಾಗರಿಕ ಸಂಹಿತೆಯನ್ನು ಜಾರಿಗೊಳಿಸಲು ಮುಂದಾಗಿರುವ ಸರಕಾರ ಮೊದಲು ಅದರ ಕರಡು ಪ್ರತಿಯನ್ನು ತಯಾರಿಸಿ ಜನರ ಮುಂದೆ ಇಡಬೇಕು. ಮುಂದೆ ಜನ ಅದಕ್ಕೆ ಪ್ರತಿಕ್ರಿಯಬೇಕು. ಅದು ಸ್ವೀಕಾರ್ಹವಾಗಿ ದ್ದರೆ ಎಲ್ಲರೂ ಒಪ್ಪಿಗೆ ನೀಡುತ್ತಾರೆ. ಅದರಲ್ಲಿ ಸಂಶಯವೇ ಬೇಡ ಎಂದು ಅವರು ತಿಳಿಸಿದರು.
ಬಳಿಕ ನಡೆದ ಪ್ರಶ್ನೋತ್ತರ ಕಾರ್ಯಕ್ರಮದಲ್ಲಿ ಸಭಿಕರ ಪ್ರಶ್ನೆಗೆ ಉತ್ತರಿಸ ಲಾಯಿತು. ಇದೇ ಸಂದರ್ಭದಲ್ಲಿ ಆಯ್ದ ಸಭಿಕರು ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು. ಒಕ್ಕೂಟದ ಜಿಲ್ಲಾಧ್ಯಕ್ಷ ಯಾಸೀನ್ ಮಲ್ಪೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಾಫಿಝ್ ಯೂನುಸ್ ಕುರಾನ್ ಪಠಿಸಿದರು. ಸಲಾವುದ್ದೀನ್ ಶೇಖ್ ಅನುವಾದಿಸಿದರು. ಸ್ನೇಹ ಸಂವಾದದ ಸಂಚಾಲಕ ಸಾದಿಕ್ ಉಡುಪಿ ವಂದಿಸಿದರು. ಪ್ರಧಾನ ಕಾರ್ಯದರ್ಶಿ ಹುಸೈನ್ ಕೋಡಿಬೆಂಗ್ರೆ ಕಾರ್ಯ ಕ್ರಮ ನಿರೂಪಿಸಿದರು.







