ಶಿಕ್ಷಕಿ ಕೊಲೆ ಪ್ರಕರಣದಲ್ಲಿ ನೈಜ ಆರೋಪಿಗಳು ನಾಪತ್ತೆ: ಮಾನವ ಹಕ್ಕುಗಳ ಜಾಗೃತಿ ಸಮಿತಿ ಶಂಕೆ
ಮಡಿಕೇರಿ ನ.17: ಶ್ರೀಮಂಗಲ ಸಮೀಪ ನಡೆದ ಅತಿಥಿ ಶಿಕ್ಷಕಿ ಪ್ರಮೀಳಾ ಅವರ ಕೊಲೆ ಪ್ರಕರಣದಲ್ಲಿ ಇದೀಗ ಬಂಧಿತನಾಗಿರುವ ಆರೋಪಿ ಮಾತ್ರವಲ್ಲದೆ ಇನ್ನೂ ಕೆಲವರು ಭಾಗಿಯಾಗಿದ್ದಾರೆ ಎಂದು ಮಾನವ ಹಕ್ಕುಗಳ ಜಾಗೃತಿ ಸಮಿತಿ ಶಂಕೆ ವ್ಯಕ್ತಪಡಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಮಹಿಳಾ ಘಟಕದ ಅಧ್ಯಕ್ಷೆ ಪಡಿಕಲ್ ಕುಸುಮಾವತಿ ಬಂಧಿತನಾಗಿರುವ ಯುವಕನಲ್ಲದೆ ಇನ್ನೂ ಕೆಲವರು ಭಾಗಿಯಾಗಿರುವ ಶಂಕೆಯಿದ್ದು, ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಬೇಕು ಮತ್ತು ಎಲ್ಲ ಆರೋಪಿಗಳನ್ನು ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಘಟನೆ ನಡೆದ ಸ್ಥಳವನ್ನು ಪರಿಶೀಲಿಸಿದಾಗ, ಈಗ ಬಂಧನಕ್ಕೊಳಗಾದ ಯುವಕನೊಬ್ಬನೇ ಈ ಕೃತ್ಯ ಎಸಗಿರುವ ಸಾಧ್ಯತೆಗಳು ಕಡಿಮೆಯಿದೆ. ಅಲ್ಲದೆ ಈ ಯುವಕ ರಸ್ತೆಯಿಂದ ಅರ್ಧ ಕಿ.ಮೀ.ನಷ್ಟು ದೂರ ಶಿಕ್ಷಕಿಯನ್ನು ಎಳೆದೊಯ್ಯುವಷ್ಟು ಶಕ್ತಿವಂತನಲ್ಲ.
ಈ ಭಾಗದಲ್ಲಿ ಅಸ್ಸಾಂ ಮತ್ತು ಒರಿಸ್ಸಾ ರಾಜ್ಯದ ಕಾರ್ಮಿಕರು ಅಧಿಕ ಸಂಖ್ಯೆಯಲ್ಲಿದ್ದು, ಅನೇಕರು ಮಾದಕ ವಸ್ತುಗಳ ದಾಸರಾಗಿದ್ದಾರೆ. ಅಲ್ಲದೆ ಸಂಜೆ ವೇಳೆ ರಸ್ತೆಬದಿಯಲ್ಲಿ ನಿಂತು ಮಹಿಳೆಯರು, ವಿದ್ಯಾರ್ಥಿನಿಯರನ್ನು ಚುಡಾಯಿಸುವ ಕೃತ್ಯಗಳು ಇವರಿಂದ ನಡೆಯುತ್ತಿವೆೆ ಎಂದು ಆರೋಪಿಸಿದರು.
ಪ್ರಕರಣದ ಹಿಂದೆ ಅಂತಹ ವ್ಯಕ್ತಿಗಳ ಕೈವಾಡವಿರುವ ಬಗ್ಗೆಯೂ ಸಂಶಯವಿದೆ. ಅಲ್ಲದೆ ಶಿಕ್ಷಕಿ ಪ್ರಮೀಳಾ ಅವರಿಗಾಗದ ವ್ಯಕ್ತಿಗಳು ಈ ಕೃತ್ಯ ಎಸಗಿ ಆರೋಪವನ್ನು ಒಪ್ಪಿಕೊಳ್ಳುವಂತೆ ಅಮಾಯಕ ಯುವಕನಿಗೆ ಆಮಿಷಗಳನ್ನು ಒಡ್ಡಿರುವ ಸಾಧ್ಯತೆಯೂ ಇದೆ.
ಕೃತ್ಯ ನಡೆದ ಸ್ಥಳದಲ್ಲಿ ಪುರುಷನೊಬ್ಬನ ಪ್ಯಾಂಟ್ ಸಿಕ್ಕಿದ್ದರೂ, ಆರೋಪಿಯ ಮೊಬೈಲ್ ಬೇರೆ ಸ್ಥಳದಲ್ಲಿ ತೆಂಗಿನ ಗಿಡದಲ್ಲಿ ದೊರೆತಿದೆ ಮತ್ತು ಅದರಲ್ಲಿದ್ದ ಸಿಮ್ ನಾಪತ್ತೆಯಾಗಿದೆ.
ಇವೆಲ್ಲವನ್ನೂ ಗಮನಿಸಿದಾಗ ಈ ಕೃತ್ಯದ ಹಿಂದೆ ಬೇರೆಯವರ ಕೈವಾಡವಿರುವ ಸಂಶಯ ಬಲವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಬಂಧನಕ್ಕೊಳಗಾಗಿರುವ ಆರೋಪಿಯನ್ನು ಮಂಪರು ಪರೀಕ್ಷೆಗೆ ಒಳಪಡಿಸಿ ಸತ್ಯಾಂಶವನ್ನು ಹೊರಗೆಳೆಯಬೇಕು ಎಂದು ಕುಸುಮಾವತಿ ಆಗ್ರಹಿಸಿದರು.
ಹತ್ಯೆ ಪ್ರಕರಣವನ್ನು ಮುಚ್ಚಿ ಹಾಕುವ ಸಾಧ್ಯತೆಗಳಿರುವುದರಿಂದ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು ಮತ್ತು ನೈಜ ಆರೋಪಿಗಳ ಪತ್ತೆಗೆ ಕ್ರಮಕೈಗೊಳ್ಳಬೇಕು ಎಂದು ಕುಸುಮಾವತಿ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಸಮಿತಿಯ ಜಿಲ್ಲಾಧ್ಯಕ್ಷ ಸಂದೇಶ್ ಜೋಸೆಫ್ ಡಿಸೋಜಾ, ಪ್ರಧಾನ ಕಾರ್ಯದರ್ಶಿ ಆರ್ ಉಮೇಶ್ ಹಾಗೂ ಕಾರ್ಯದರ್ಶಿ ಚಟ್ಟಂಗಡ ಲೋಹಿತ್ ಪೂವಯ್ಯ ಹಾಜರಿದ್ದರು.





