‘ಕತೆಗಳೊಂದಿಗೆ ಕಲಿಕೆ’ ಪುಸ್ತಕ ಬಿಡುಗಡೆ

ಉಡುಪಿ, ನ.17: ಡಾ. ಅನಂತಮೂರ್ತಿಯವರ ‘ಮಾತು ಸೋತ ಭಾರತ’ದ ಸ್ಥಿತಿ ಇಂದು ಮತ್ತಷ್ಟು ಗಂಭೀರವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಮಾಡುವ ಟೀಕೆಗಳ ವಿರುದ್ಧ ಹೆಚ್ಚು ಹೆಚ್ಚು ಆಕ್ರಮಣ ಮಾಡಿ ಕೀಳು ಮಟ್ಟದ ಪದಗಳನ್ನು ಬಳಸಿ ದೇಶದ್ರೋಹಿಯ ಪಟ್ಟ ಕಟ್ಟಿ ವ್ಯಕ್ತಿಯ ತೇಜೋವಧೆ ಮಾಡುವ ಕಾರ್ಯ ನಡೆಯುತ್ತಿದೆ ಎಂದು ಲೇಖಕ ಡಾ. ಮಹಾಬಲೇಶ್ವರ ರಾವ್ ಕಳವಳ ವ್ಯಕ್ತಪಡಿಸಿದ್ದಾರೆ.
ಉಡುಪಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಗುರುವಾರ ನಡೆದ ಲೇಖಕ ಹರಿಕೃಷ್ಣ ರಾವ್ ಎ. ಅವರ ‘ಕತೆಗಳೊಂದಿಗೆ ಕಲಿಕೆ’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.
ಪುಸ್ತಕ ಬಿಡುಗಡೆಗೊಳಿಸಿದ ವಿಮರ್ಶಕ ಎ.ಈಶ್ವರಯ್ಯ ಮಾತನಾಡಿ, ಆಂಗ್ಲ ಭಾಷೆಯ ಶಿಶು ಸಾಹಿತ್ಯಕ್ಕೆ ಹೋಲಿಸಿದರೆ ನಾವು ಆ ವಿಚಾರದಲ್ಲಿ ಬಹಳಷ್ಟು ಹಿಂದೆ ಇದ್ದೇವೆ. ಆಂಗ್ಲ ಭಾಷೆಯಲ್ಲಿ 130ಕ್ಕೂ ಹೆಚ್ಚು ಅಗ್ರಪಂಕ್ತಿಯ ಮಕ್ಕಳ ಸಾಹಿತಿಗಳು ನಮಗೆ ಸಿಗುತ್ತಾರೆ. ಆ ನಿಟ್ಟಿನಲ್ಲಿ ನಾವು ಮಕ್ಕಳ ಸಾಹಿತ್ಯವನ್ನು ಬಹಳಷ್ಟು ಗಂಭೀರವಾಗಿ ತೆಗೆದುಕೊಳ್ಳಬೇಕಾಗಿದೆ ಎಂದರು.
ಅಧ್ಯಕ್ಷತೆಯನ್ನು ಎನ್.ತಿರುಮಲೇಶ್ವರ ಭಟ್ ವಹಿಸಿದ್ದರು. ಲೇಖಕ ಹರಿಕೃಷ್ಣ ರಾವ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ನಿರ್ಮಲಾ ಹರಿಕೃಷ್ಣ ರಾವ್ ವಂದಿಸಿದರು. ಜಿ.ಪಿ.ಪ್ರಭಾಕರ ತಮರಿ ಕಾರ್ಯಕ್ರಮ ನಿರೂಪಿಸಿದರು.







