ಇಂದಿನಿಂದ ‘ಆಳ್ವಾಸ್ ನುಡಿಸಿರಿ-2016’

ಮೂಡುಬಿದಿರೆ, ನ.17: ಸಾಹಿತ್ಯಕ, ಸಾಂಸ್ಕೃತಿಕ ರಾಷ್ಟ್ರೀಯ ಸಮ್ಮೇಳನ ನುಡಿಜಾತ್ರೆ 13ನೆ ವರ್ಷದ ‘ಆಳ್ವಾಸ್ ನುಡಿಸಿರಿ’ ನ.18ರಿಂದ ಆರಂಭಗೊಳ್ಳಲಿದೆ. ಮೂರು ದಿನಗಳ ಕಾಲ ಹಲವು ಸಿರಿಗಳ ಕೂಡುವಿಕೆಯಲ್ಲಿ ‘ಕರ್ನಾಟಕ: ನಾಳೆಗಳ ನಿರ್ಮಾಣ’ ಎಂಬ ಪರಿಕಲ್ಪನೆಯೊಂದಿಗೆ ಅನಾವರಣಗೊಳ್ಳಲಿದೆ.
ಮೂಡುಬಿದಿರೆಯ ವಿದ್ಯಾಗಿರಿಯ ರತ್ನಾಕರವರ್ಣಿ ವೇದಿಕೆಯ ಪುಂಡಲೀಕ ಹಾಲಂಬಿ ಸಭಾಂಗಣದಲ್ಲಿ ಖ್ಯಾತ ವಿಮರ್ಶಕರು ಮತ್ತು ಸಂಸ್ಕೃತಿ ಚಿಂತಕಿ ಡಾ.ಬಿ.ಎನ್.ಸುಮಿತ್ರಾಬಾಯಿ ಸರ್ವಾಧ್ಯಕ್ಷತೆಯಲ್ಲಿ ಸಮ್ಮೇಳನ ನಡೆಯಲಿದ್ದು, ಬೆಳಗ್ಗೆ 8ರಿಂದ ಸಂಜೆ 6ರವರೆಗೆ ಸಾಹಿತ್ಯ, ಸಂಸ್ಕೃತಿ, ಭಾಷೆ, ಸಮಾಜ, ನೆಲ-ಜಲ, ಆರೋಗ್ಯ-ಆಹಾರ, ಸಂಸ್ಮರಣೆ, ಹಿರಿಯರ ಸ್ಮರಣೆ, ನಮ್ಮ ಕತೆ ನಿಮ್ಮ ಜೊತೆ ಮುಂತಾದುವುಗಳ ಕುರಿತು ಚಿಂತನ-ಮಂಥನ ನಡೆಯಲಿದೆ.
*ದಶ ವೇದಿಕೆಗಳಲ್ಲಿ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು.
ರತ್ನಾಕರವರ್ಣಿ ವೇದಿಕೆ, ಕೆ.ವಿ.ಸುಬ್ಬಣ್ಣ ಬಯಲು ರಂಗಮಂದಿರ, ಸಿದ್ಧಕಟ್ಟೆ ವಿಶ್ವನಾಥ ಶೆಟ್ಟಿ ವೇದಿಕೆ, ಡಾ.ಶಿವರಾಮ ಕಾರಂತ ವೇದಿಕೆ, ಮಿಜಾರು ಅಣ್ಣಪ್ಪ ವೇದಿಕೆ, ಬೋಲ ಚಿತ್ತರಂಜನದಾಸ್ ಶೆಟ್ಟಿ ವೇದಿಕೆ, ಸುಬಾಶ್ಚಂದ್ರ ಪಡಿವಾಳ್ ವೇದಿಕೆ, ಕು.ಶಿ.ಹರಿದಾಸ ಭಟ್ಟ ವೇದಿಕೆ, ಸಿದ್ಧಕಟ್ಟೆ ಚೆನ್ನಪ್ಪ ಶೆಟ್ಟಿ ವೇದಿಕೆ ಮತ್ತು ಕುವೆಂಪು ಸಭಾಂಗಣದಲ್ಲಿ ಹೀಗೆ ಒಟ್ಟು ಹತ್ತು ವೇದಿಕೆಗಳಲ್ಲಿ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಲಿವೆ.
ಡಾ.ಬಿ.ಎನ್.ಸುಮಿತ್ರಾಬಾಯಿ ಸರ್ವಾಧ್ಯಕ್ಷತೆಯಲ್ಲಿ ಡಾ.ಜಯಂತ ಕಾಯ್ಕಿಣಿ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ.
*ವಿಚಾರಗೋಷ್ಠಿ, ವಿಶೇಷೋಪನ್ಯಾಸಗಳು:
ಪ್ರತಿ ವರ್ಷದಂತೆ ಈ ಬಾರಿಯು ಅತ್ಯುತ್ತಮ ನಾಲ್ಕುಗೋಷ್ಠಿಗಳು, ಐದು ವಿಶೇಷೋಪನ್ಯಾಸಗಳು ನಡೆಯಲಿವೆ. *ನಮ್ಮ ಕತೆ ನಿಮ್ಮ ಜೊತೆ: ಈ ಬಾರಿ ಹೊಸದಾಗಿ ‘ನಮ್ಮ ಕತೆ ನಿಮ್ಮ ಜೊತೆ’ ಎಂಬ ಶೀರ್ಷಕೆಯೊಂದಿಗೆ ಡಾ.ಬಿ.ಜಯಶ್ರೀ ಮತ್ತು ಜಬ್ಬರ್ ಸಮೋ ಮಾತುಗಳನ್ನು ಹಂಚಿಕೊಳ್ಳಲಿದ್ದಾರೆ. ಉಳಿದಂತೆ ಸಂಸ್ಮರಣೆ, ಕವಿಸಮಯ-ಕವಿನಮನ, ಶತಮಾನ ನಮನ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ನುಡಿಸಿರಿಯಲ್ಲಿ ಸಿನಿಸಿರಿ: ಈ ಬಾರಿಯ ನುಡಿಸಿರಿಯಲ್ಲಿ ಇದೇ ಮೊದಲನೆಯ ಬಾರಿ ನಾಲ್ಕು ದಿನಗಳ ಕಾಲ ಗುಬ್ಬಚ್ಚಿ ಗಳು, ನಾನು ನನ್ನ ಕನಸು, ಸಿಂಹದ ಮರಿ ಸೈನ್ಯ, ಬಂಗಾರದ ಮನುಷ್ಯ, ಅಮೇರಿಕಾ ಅಮೇರಿಕಾ, ದ್ವೀಪ, ಡಿಸೆಂಬರ್-1, ಅಮೃತಧಾರೆ, ಪುಷ್ಪಕ ವಿಮಾನ, ಕಸ್ತೂರಿ ನಿವಾಸ, ಸತ್ಯಹರೀಶ್ಚಂದ್ರ ಮತ್ತು ನಾಗರಹಾವು 12 ಸಿನೆಮಾಗಳು ಪ್ರದರ್ಶನಗೊಳ್ಳಲಿದ್ದು, ಸಿನಿಪ್ರಿಯರ ಮನಸೂರೆಗೊಳ್ಳಲಿದೆ.
ಈ ಬಾರಿಯ ಕೃಷಿಸಿರಿಯಲ್ಲಿ ಶ್ವಾನ ಮತ್ತು ಫಲಪುಷ್ಪ ಪಶುಗಳ ಪ್ರದರ್ಶನವೂ ನಡೆಯಲಿದ್ದು, ನುಡಿಸಿರಿಗೆ ಸಾಥ್ ನೀಡಲಿದೆ.
ಸಜ್ಜಾಗಿದೆ ವಿದ್ಯಾಗಿರಿ
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ಮೂರು ದಿನಗಳು ನಡೆಯುವ ‘ಆಳ್ವಾಸ್ ನುಡಿಸಿರಿ-2016’ ನಾಡು ನುಡಿ ಸಮ್ಮೇಳನಕ್ಕೆ ವಿದ್ಯಾಗಿರಿಯ ಆವರಣವು ಮದುವಣಗಿತ್ತಿಯಂತೆ ಶೃಂಗಾರಗೊಂಡಿದೆ.
ಮಂಗಳೂರು-ಮೂಡುಬಿದಿರೆ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ವಿದ್ಯಾಗಿರಿಯಲ್ಲಿ ಹೊಸ ಶೈಲಿಯ ಸ್ವಾಗತಗೋಪುರವನ್ನು ನಿರ್ಮಿಸಲಾಗಿದೆ. ಗುತ್ತಿನ ಮನೆಯ ಛಾವಣಿಯ ಮಾದರಿಯಲ್ಲಿ ಛಾವಣಿ ಅಳವಡಿಸಲಾಗಿದ್ದು, ಬೃಹತ್ ಮಟ್ಟದಲ್ಲಿ ಫಲಪುಷ್ಪ ಪ್ರದರ್ಶನಕ್ಕೆ ನುಡಿಸಿರಿ ನಡೆಯುವ ರತ್ನಾಕರವರ್ಣಿ ವೇದಿಕೆಯ ಪಕ್ಕದಲ್ಲಿ ವ್ಯವಸ್ಥೆ ಮಾಡಲಾಗಿದೆ. ಆಳ್ವಾಸ್‌ನ ಸಾಂಪ್ರದಾಯಿಕ ಶೈಲಿಯ ಅಲಂಕಾರಗಳಾದ ಬಣ್ಣದ ಬಟ್ಟೆಗಳ ಪೂಕರೆ, ವಿದ್ಯುತ್ ದೀಪಾಲಂಕೃತಗೊಂಡು ಸಜ್ಜಾಗಿದೆ.







