Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಈ ಅಮಾಯಕ ವರ್ಗದ ನೆರವಿಗೆ ಧಾವಿಸೋಣ

ಈ ಅಮಾಯಕ ವರ್ಗದ ನೆರವಿಗೆ ಧಾವಿಸೋಣ

ವಾರ್ತಾಭಾರತಿವಾರ್ತಾಭಾರತಿ17 Nov 2016 11:56 PM IST
share
ಈ ಅಮಾಯಕ ವರ್ಗದ ನೆರವಿಗೆ ಧಾವಿಸೋಣ

ನೋಟು ನಿಷೇಧವಾಗಿರುವ ಬೆನ್ನಿಗೇ ಈ ದೇಶದ ಮಧ್ಯಮವರ್ಗ ಮತ್ತು ಕೆಳಮಧ್ಯಮ ವರ್ಗದ ಜನರ ಸ್ಥಿತಿ ಮಾಧ್ಯಮಗಳಲ್ಲಿ ಭಾರೀ ಚರ್ಚೆಯಾಗುತ್ತಿದೆ. ಆದರೆ ನಗರ ಪ್ರದೇಶಗಳಲ್ಲಿ ಮುಖ್ಯವಾಗಿ ಇನ್ನೊಂದು ವರ್ಗವಿದೆ. ಅವರು ದಿನನಿತ್ಯದ ಕೂಲಿಯನ್ನೇ ಅವಲಂಬಿಸಿದ ವರ್ಗ. ಬಹುಮುಖ್ಯವಾಗಿ ಗ್ರಾಮೀಣ ಪ್ರದೇಶದಿಂದಲೇ ಬಂದವರಾಗಿದ್ದಾರೆ. ಕೃಷಿ ನಾಶ, ಭೂಮಿ ಒತ್ತುವರಿ ಅಥವಾ ಇನ್ನಿತರ ಸಮಸ್ಯೆಗಳಿಂದಾಗಿ ಹಳ್ಳಿಗಳಿಂದ ನಗರ ಪ್ರದೇಶಗಳಿಗೆ ವಲಸೆ ಬಂದಿರುವ ಬಹುದೊಡ್ಡ ವರ್ಗವೊಂದಿದೆ. ಬೃಹತ್ ನಗರಗಳಲ್ಲಿ ಇವರು ಕೊಳೆಗೇರಿಗಳನ್ನು, ಜೋಪಡಾ ಪಟ್ಟಿಗಳನ್ನು ಆಶ್ರಯಿಸಿ ಬದುಕುತ್ತಾರೆ. ಬಹುತೇಕ ಇವರು ಈ ದೇಶದ ಪ್ರಜೆಯಾಗಿದ್ದುಕೊಂಡೂ ನಮಗೆ ಅನ್ಯರಾಗಿದ್ದಾರೆ. ಇವರಿಲ್ಲದೆ ನಗರ ಜೀವನವೇ ಇಲ್ಲ ಎನ್ನುವಂತಹ ಪರಿಸ್ಥಿತಿ ಇದೆ. ಇವರೆಲ್ಲರೂ ಬಹುತೇಕ ಕೂಲಿ ಕೆಲಸಗಳನ್ನು ಆಶ್ರಯಿಸಿಕೊಂಡು ಬದುಕುತ್ತಿರುವವರು. ಬ್ಯಾಂಕು, ಎಟಿಎಂ ಮೊದಲಾದವುಗಳ ಬಗ್ಗೆ ಎಳ್ಳಷ್ಟೂ ಜ್ಞಾನ ಹೊಂದಿಲ್ಲದವರು. ಯಾಕೆಂದರೆ, ಇವರಿಗೆ ಬ್ಯಾಂಕುಗಳು, ಎಟಿಎಂನ ಅಗತ್ಯವೇ ಎಂದಿಗೂ ಹೊಳೆದಿಲ್ಲ. ಇವರಲ್ಲಿ ಜೋಪಾನ ಮಾಡಲು ಹಣವೇ ಇಲ್ಲ. ಅಂದಂದಿನ ಕೂಲಿ ಅಂದಂದಿಗೆ ಸಂದು ಹೋಗುವುದರಿಂದ, ಬ್ಯಾಂಕಿನಲ್ಲಿ ಇಡುವಷ್ಟು ಹಣ ಇವರಲ್ಲಿ ಇಲ್ಲವೇ ಇಲ್ಲ. ಪ್ರತಿ ದಿನ ಬೆಳಗ್ಗೆ ಎದ್ದು ನಗರ ಪ್ರದೇಶದ ಮಾರುಕಟ್ಟೆಗಳಲ್ಲಿ ನಿಂತಿರುವ ಲಾರಿಗಳಿಂದ ಗೋಣಿ ಚೀಲಗಳನ್ನು ಇಳಿಸುವುದು ಸೇರಿದಂತೆ, ಬೇರೆ ಬೇರೆ ಕೆಲಸಗಳಿಗೆ ಹಂಚಿ ಹೋಗುತ್ತಾರೆ. ನಗರಗಳು ಇವರ ತಳಹದಿಯ ಮೇಲೆಯೇ ನಿಂತಿರುವುದು. ಯಾವುದೇ ಶ್ರಮದ ಕೆಲಸಗಳಿಗೆ ಇವರು ಬೇಕೇ ಬೇಕು. ಉಳಿದಂತೆ, ಕಟ್ಟಡ ನಿರ್ಮಾಣ, ರಸ್ತೆ ನಿರ್ಮಾಣ ಮೊದಲಾದ ಕೆಲಸಗಳಿಗೂ ಇವರನ್ನೇ ಆಶ್ರಯಿಸಲಾಗುತ್ತದೆ. ಇವರು ನಿರ್ಮಿಸಿದ ರಸ್ತೆಯ ಮೇಲೆ ನಾವು ಓಡಾಡುತ್ತೇವೆ. ಇವರು ತಮ್ಮ ಬೆವರಿನಿಂದ ಕಲ್ಲಿನ ಮೇಲೆ ಕಲ್ಲು ಇಟ್ಟು ಕಟ್ಟಿದ ಮನೆಗಳಲ್ಲಿ ನಾವು ವಾಸಿಸುತ್ತಿದ್ದೇವೆ. ಇವರು ಹೊತ್ತ ತರಕಾರಿ ಮೂಟೆಯನ್ನೇ ನಾವಿಂದು ಬಳಸುತ್ತಿದ್ದೇವೆ. ಈ ಪ್ರಜ್ಞೆ ನಮಗಿದ್ದರೆ, ನೋಟು ನಿಷೇಧದ ಹಿನ್ನೆಲೆಯಲ್ಲಿ ಇವರು ಅನುಭವಿಸುತ್ತಿರುವ ಸಂಕಟಗಳು ನಮ್ಮದಾಗುವುದರಲ್ಲಿ ಸಂಶಯವಿಲ್ಲ.

ಇಂದು ಸಾವಿರಾರು ಲಾರಿಗಳು ನಗರಗಳಲ್ಲಿ ಸ್ತಬ್ಧವಾಗಿ ನಿಂತಿವೆ. ಯಾವುದೇ ಅಂಗಡಿಮುಂಗ್ಗಟ್ಟುಗಳಲ್ಲಿ ಸರಿಯಾಗಿ ವ್ಯವಹಾರ ನಡೆಯುತ್ತಿಲ್ಲ. ಕಟ್ಟಡ ಕಾಮಗಾರಿಗಳೂ ನನೆಗುದಿಗೆ ಬಿದ್ದಿವೆ. ಇದರಿಂದಾಗಿ ಮಧ್ಯಮ ವರ್ಗದವರ ಮೇಲೆ ತಕ್ಷಣವೇನೂ ಸಮಸ್ಯೆ ಬಂದು ಎರಗಿಲ್ಲ. ಅಂದರೆ ಖರ್ಚಿಗೆ ಅವರಲ್ಲಿ ಬ್ಯಾಂಕಿನಲ್ಲಿ ಇಟ್ಟಿರುವ ಹಣವೋ, ಅಥವಾ ಮನೆಯೊಳಗೆ ಬಚ್ಚಿಟ್ಟಿರುವ ಹಣವೋ ತಕ್ಷಣಕ್ಕೆ ಒದಗಬಹುದು. ಅದನ್ನು ಬ್ಯಾಂಕಿನಲ್ಲಿ ಕ್ಯೂ ನಿಂತು ಬದಲಾಯಿಸಿಕೊಂಡರೆ ಅವರ ಸಮಸ್ಯೆ ಮುಗಿಯಿತು. ಅಂದರೆ ಮಧ್ಯಮವರ್ಗ ಅಥವಾ ಕೆಳ ಮಧ್ಯಮವರ್ಗದ ಜನರು ಯಾರೂ ಹಸಿವಿನಿಂದ ಮಲಗುವಂತಹ ಸನ್ನಿವೇಶ ಇಲ್ಲ. ಆದರೆ ಈ ವಿಳಾಸವಿಲ್ಲದ ಕೂಲಿಕಾರ್ಮಿಕರ ಸ್ಥಿತಿ ಕಳೆದ ಒಂದು ವಾರದಿಂದ ಅತ್ಯಂತ ಭೀಕರವಾಗಿದೆ. ಅಂದಂದಿನ ಕೂಲಿಯಿಂದ ಜೀವಿಸುತ್ತಿರುವವರು ಇವರು. ಇವರಿಗೆ ವಾರದ ರಜೆಯಿಲ್ಲ. ರಜೆ ಮಾಡಿದ ದಿನ ಕೂಲಿಯೂ ಇಲ್ಲ. ಸರಕು ಸಾಗಾಟ ವಾಹನಗಳು ಒಂದೊಂದಾಗಿ ಅಘೋಷಿತ ಮುಷ್ಕರವನ್ನು ಘೋಷಿಸುತ್ತಿರುವಂತೆಯೇ ಇವರು ದಿನದ ಕೂಲಿಯನ್ನು ಕಳೆದುಕೊಳ್ಳುತ್ತಿದ್ದಾರೆ. ವಿಪರ್ಯಾಸವೆಂದರೆ ಇವರಿಗೆ ಸಾಲಕೊಡಬೇಕಾದರೂ ನೋಟುಗಳು ಬೇಕು. ಸದ್ಯಕ್ಕೆ ನಗರಗಳಲ್ಲಿ ಚಲಾವಣೆಯಲ್ಲಿರುವುದು 2000 ರೂಪಾಯಿಯ ನೋಟುಗಳು ಮಾತ್ರ. ಉಳಿದಂತೆ ನೂರರ ನೋಟುಗಳನ್ನು ಎಲ್ಲರೂ ಸಂಗ್ರಹ ಮಾಡತೊಡಗಿದ್ದಾರೆ. ಕೂಲಿ ಕೇಳಿದವರಿಗೆ ಹಳೆಯ ನೋಟುಗಳನ್ನು ಅಥವಾ ಎರಡು ಸಾವಿರದ ನೋಟುಗಳನ್ನು ತೋರಿಸಿ ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ. ಹೀಗಿರುವಾಗ ಇವರು ದೈನಂದಿನ ಅತ್ಯವಶ್ಯವಾದ ಆಹಾರಕ್ಕಾಗಿ ಏನು ಮಾಡಬೇಕು? ಮತ್ತು ಇವರೆಲ್ಲ ಏನು ಮಾಡುತ್ತಿದ್ದಾರೆ? ಕೆಲವರಲ್ಲಿ ಅಪ್ಪಿತಪ್ಪಿ 500 ಅಥವಾ ಒಂದು ಸಾವಿರ ರೂಪಾಯಿಯ ನೋಟುಗಳಿದ್ದರೂ ಅವುಗಳನ್ನು ವಿನಿಮಯ ಮಾಡುವುದಕ್ಕೆ ಹರಸಾಹಸ ಪಡಬೇಕಾಗಿದೆ. ಜೀವನಪರ್ಯಂತ ಬ್ಯಾಂಕನ್ನು ನೋಡದವರು ಈ ದೇಶದಲ್ಲಿದ್ದಾರೆ. ವಿದ್ಯಾವಂತರೇ ಬ್ಯಾಂಕ್‌ಗಳಲ್ಲಿ ಸಾವಿರ ಸಮಸ್ಯೆಗಳನ್ನು ಎದುರು ಹಾಕಿಕೊಳ್ಳುತ್ತಿರುವ ದಿನಗಳಲ್ಲಿ ಈ ಅವಿದ್ಯಾವಂತರು ತಮ್ಮ ಐನೂರು ರೂ. ನೋಟುಗಳನ್ನು ಬದಲಾವಣೆ ಮಾಡಿಕೊಳ್ಳಲು ಸಾಧ್ಯವಾಗದೆ ಅತ್ಯಂತ ಆತಂಕದ ಸ್ಥಿತಿಯಲ್ಲಿದ್ದಾರೆ. ಬಹುತೇಕರು ಒಂದು ಹೊತ್ತಿನ ಊಟದಲ್ಲಿ ಕಾಲ ಕಳೆಯುತ್ತಿದ್ದಾರೆ. ಅವರ ಆರೋಗ್ಯ, ಮಾನಸಿಕ ಸ್ಥಿತಿ ತೀರಾ ಜರ್ಝರಿತವಾಗಿದೆ.

ಈ ವರ್ಗವನ್ನು ಬ್ಯಾಂಕಿನಲ್ಲೂ ಅತ್ಯಂತ ಅನಾಗರಿಕವಾಗಿ ನಡೆಸಿಕೊಳ್ಳಲಾಗುತ್ತಿದೆ. ಮಂಗಳೂರಿನಂತಹ ಪ್ರದೇಶದಲ್ಲಿ ಬಿಜಾಪುರದಿಂದ ಬಂದ ಕೂಲಿ ಕಾರ್ಮಿಕರನ್ನು ಹೇಗೆ ನಡೆಸಿಕೊಳ್ಳುತ್ತಾರೆ ಎನ್ನುವುದು ಎಲ್ಲರಿಗೂ ತಿಳಿದಿರುವಂತಹದು. ಬಸ್‌ನಂತಹ ಸಾರ್ವಜನಿಕ ವಾಹನಗಳಲ್ಲಿ ಕಂಡಕ್ಟರ್‌ಗಳೂ ನಿಕೃಷ್ಟವಾಗಿ ನಡೆಸಿಕೊಳ್ಳುತ್ತಾರೆ. ಏಕವಚನದಲ್ಲಿ ಕರೆಯುತ್ತಾರೆ. ತುಸು ಏರು ಪೇರಾದರೂ ನಿಂದಿಸುತ್ತಾರೆ. ಬ್ಯಾಂಕಿನಲ್ಲೂ ಈ ವರ್ಗವನ್ನು ಸೆಕ್ಯೂರಿಟಿಗಳು ಅತ್ಯಂತ ನಿಕೃಷ್ಟವಾಗಿ ಕಾಣುತ್ತಿದ್ದಾರೆ. ಅವರ ಧಿರಿಸಿನಿಂದಲೇ ಯೋಗ್ಯತೆಯನ್ನು ಗುರುತಿಸಿ ಅವರನ್ನು ವಿಚಾರಿಸಿ, ಸೆಕ್ಯೂರಿಟಿಗಳೇ ಹೊರಗೆ ದಬ್ಬಿ ಬಿಡುತ್ತಾರೆ. ಇದೇ ಸಂದರ್ಭದಲ್ಲಿ, ಇವರ ಕೈಯಲ್ಲಿ ಒಂದಿಷ್ಟು ಜಾಸ್ತಿ ದುಡ್ಡನ್ನು ನೋಡಿದರೆ ಅನುಮಾನಿಸಲಾಗುತ್ತದೆ. ಯಾರದೋ ಕಪ್ಪು ಹಣವನ್ನು ಬಿಳಿ ಮಾಡಲು ಹಿಡಿದುಕೊಂಡು ಬಂದಿದ್ದಾರೆ ಎಂಬಂತೆ ಸಿಬ್ಬಂದಿ ಇವರ ಮೇಲೆ ಎರಗುತ್ತಾರೆ. ಸರಕಾರ ತಕ್ಷಣ ನೆರವಿಗೆ ಧಾವಿಸಬೇಕಾದುದು ಇಂತಹ ದಿನಗೂಲಿ ವರ್ಗದವರ ಬಳಿಗೆ. ಯಾಕೆಂದರೆ ಇವರಾರೂ ನೋಟು ನಿಷೇಧದ ಕಾರಣಕ್ಕಾಗಿ ಹಸಿವಿನಿಂದ ಸಾಯುವಂತಾಗಬಾರದು. ನೋಟು ನಿಷೇಧವೆಂದರೆ ಈ ಕಾರ್ಮಿಕ ವರ್ಗದ ಬದುಕುವ ಹಕ್ಕಿನ ನಿಷೇಧ ಅಲ್ಲ. ಕನಿಷ್ಠ ಆಯಾ ರಾಜ್ಯ ಸರಕಾರಗಳು ಇವರ ಬಳಿ ಧಾವಿಸಬೇಕು. ಬರೇ ಕೇಂದ್ರ ಸರಕಾರವನ್ನು ಟೀಕಿಸುವುದರಿಂದ ರಾಜ್ಯ ಸರಕಾರಗಳ ಹೊಣೆಗಾರಿಕೆ ಮುಗಿಯುವುದಿಲ್ಲ. ಇದೇ ಸಂದರ್ಭದಲ್ಲಿ ಬಡವರ್ಗಕ್ಕೆ ಸಾಲವಾಗಿ ಪಡಿತರ ಒದಗಿಸುವ ಘೋಷಣೆಯೊಂದನ್ನು ರಾಜ್ಯ ಸರಕಾರ ಮಾಡಿದೆ. ಇದು ನಿಜಕ್ಕೂ ಶ್ಲಾಘನಾರ್ಹ. ಹಾಗೆಯೇ ಈ ಪಡಿತರವನ್ನು ಎಲ್ಲ ವರ್ಗಕ್ಕೂ ತಲುಪಿಸುವ ಕೆಲಸ ನಡೆಯಬೇಕು. ವಿವಿಧ ರಾಜಕೀಯ ಪಕ್ಷಗಳು, ಸ್ವಯಂ ಸೇವಕ ಸಂಘಟನೆಗಳು ಈ ಕಾರ್ಮಿಕ ವರ್ಗದ ಬಳಿಗೆ ಸಾಗದೇ ಇದ್ದರೆ, ನೋಟು ನಿಷೇಧದ ಗದ್ದಲ ಮುಗಿಯುವಷ್ಟರಲ್ಲಿ ಇವರ ಉಸಿರೂ ನಿಂತು ಹೋಗಿರುತ್ತದೆ.

ಕಾಗೆಗಳೂ ಒಂದು ತುತ್ತನ್ನು ತನ್ನ ಉಳಿದ ಗೆಳೆಯರನ್ನು ಕರೆದು ಹಂಚಿ ತಿನ್ನುತ್ತವೆೆ. ನಾವಿಂದು ಆ ಕಾಗೆಗಿರುವ ಮನುಷ್ಯತ್ವವನ್ನಾದರೂ ಪ್ರದರ್ಶಿಸುವ ಅಗತ್ಯವಿದೆ. ಸಾಧಾರಣವಾಗಿ ಕೂಲಿಕಾರ್ಮಿಕರೆಂದರೆ ಬಳಸಿ ಎಸೆಯುವ ವಸ್ತು ಇದ್ದ ಹಾಗೆ. ಬಳಕೆಯಾಗುವಾಗಷ್ಟೇ ಅವರ ನೆನಪು. ಉಳಿದ ಸಮಯದಲ್ಲಿ ಅವರ ಅಗತ್ಯ ಯಾರಿಗೂ ಇರುವುದಿಲ್ಲ. ಈ ಸಂದರ್ಭದಲ್ಲಾದರೂ, ಅವರನ್ನು ದುಡಿಸಿಕೊಳ್ಳುತ್ತಿರುವ ಗುತ್ತಿಗೆದಾರರಿಗೆ ಅವರ ಸ್ಥಿತಿಗತಿಗಳನ್ನು ನೋಡಿಕೊಳ್ಳುವ ಹೊಣೆಗಾರಿಕೆಯಿದೆ. ಸಾಲ ಕೇಳಿದರೆ ತಕ್ಷಣ ಅವರಿಗೆ ನೀಡಬೇಕು. ಹಾಗೆಯೇ ಬ್ಯಾಂಕ್ ವ್ಯವಹಾರಗಳಿಗೆ ಅವರಿಗೆ ಸಹಕರಿಸಬೇಕು. ಜೊತೆಗೆ, ಮುಂದಿನ ಸ್ಥಿತಿಗತಿಯ ಬಗ್ಗೆ ಅವರಿಗೆ ತಿಳಿ ಹೇಳಬೇಕು. ಇವು ನಗರದಲ್ಲಿರುವ ಎಲ್ಲ ಉದ್ಯಮಿಗಳ, ಗುತ್ತಿಗೆದಾರರ, ಮನಪಾ ಸಿಬ್ಬಂದಿಯ ಕರ್ತವ್ಯವಾಗಿದೆ. ಯಾರನ್ನೋ ಗುರಿಯಾಗಿಟ್ಟು ಹೊಡೆದ ಬಾಣಗಳಿಗೆ ನಿಷ್ಪಾಪ ಗುಬ್ಬಚ್ಚಿಗಳು ಯಾವ ಕಾರಣಕ್ಕೂ ಪ್ರಾಣ ತೆರುವಂತಾಗಬಾರದು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X