ಪ್ರಧಾನಿಯ ಉತ್ತರಕ್ಕೆ ಪ್ರತಿಪಕ್ಷಗಳ ಆಗ್ರಹ
ನೋಟು ಅಮಾನ್ಯ ಪ್ರಕರಣ
ಹೊಸದಿಲ್ಲಿ, ನ.17: ಅಧಿಕ ಮುಖಬೆಲೆಯ ನೋಟುಗಳನ್ನು ಅಮಾನ್ಯಗೊಳಿಸಿದ ಸರಕಾರದ ನಿರ್ಧಾರ ಮತ್ತು ಇದರಿಂದ ಉಂಟಾಗಿರುವ ಪರಿಣಾಮಗಳ ಬಗ್ಗೆ ಸರಕಾರವನ್ನು ತರಾಟೆಗೆತ್ತಿಕೊಂಡ ವಿಪಕ್ಷಗಳು, ಉಭಯ ಸದನಗಳಲ್ಲೂ ಸರಕಾರದ ನಿರ್ಧಾರದ ವಿರುದ್ಧ ಘೋಷಣೆ ಮುಂದುವರಿಸಿದ ಕಾರಣ ಸಂಸತ್ತಿನ ಚಳಿಗಾಲದ ಅಧಿವೇಶನದ ದ್ವಿತೀಯ ದಿನವನ್ನೂ ಕಲಾಪ ನಡೆಸದೆ ಮುಂದೂಡಲಾಯಿತು. ರಾಜ್ಯಸಭೆಯಲ್ಲಿ ಕಲಾಪ ಆರಂಭವಾಗು ತ್ತಿದ್ದಂತೆಯೇ ಘೋಷಣೆ ಕೂಗತೊಡಗಿದ ಪ್ರತಿಪಕ್ಷ ಸದಸ್ಯರು, ಪ್ರಧಾನಿ ನರೇಂದ್ರ ಮೋದಿ ಸದನಕ್ಕೆ ಆಗಮಿಸಿ, ಚರ್ಚೆಯಲ್ಲಿ ಪಾಲ್ಗೊಂಡು ತಮ್ಮ ಪ್ರಶ್ನೆಗಳಿಗೆ ಉತ್ತರಿಸಬೇಕೆಂದು ಒತ್ತಾಯಿಸಿದರು. ಈ ಬೇಡಿಕೆಗೆ ಜಗ್ಗದ ಸರಕಾರ, ವಿತ್ತ ಸಚಿವ ಅರುಣ್ ಜೇಟ್ಲೀಯವರು ಉತ್ತರ ನೀಡುವರು ಎಂದು ತಿಳಿಸಿತು. ಇದರಿಂದ ತೀವ್ರ ಆಕ್ರೋಶಗೊಂಡ ಪ್ರತಿಪಕ್ಷಗಳು, ಸರಕಾರದಿಂದ ದೇಶದಲ್ಲಿ ಆರ್ಥಿಕ ಅರಾಜಕತೆಯ ಸ್ಥಿತಿ ಉಂಟಾಗಿದೆ ಎಂದು ಸರಕಾರದ ವಿರುದ್ಧ ಮುಗಿಬಿದ್ದವು. ಲೋಕಸಭೆಯಲ್ಲೂ ಪರಿಸ್ಥಿತಿ ಭಿನ್ನವಾಗಿರಲಿಲ್ಲ. ದೈನಂದಿನ ಕಲಾಪವನ್ನು ಬದಿಗಿರಿಸಿ ನೋಟು ಅಮಾನ್ಯ ನಿರ್ಧಾರದ ಬಗ್ಗೆ ಚರ್ಚೆ ನಡೆಸಿ ಇದನ್ನು ಮತಕ್ಕೆ ಹಾಕಬೇಕು ಎಂದು ಪ್ರತಿಪಕ್ಷಗಳು ಪಟ್ಟುಹಿಡಿದು, 21 ನಿಲುವಳಿ ಸೂಚನೆಗಳನ್ನು ಮುಂದಿಟ್ಟವು. ಪ್ರತಿಪಕ್ಷ ಸದಸ್ಯರು ಗದ್ದಲ ನಿಲ್ಲಿಸುವವರೆಗೆ ಈ ಬಗ್ಗೆ ಚರ್ಚೆಗೆ ಅವಕಾಶ ನೀಡಲಾಗದು ಎಂದು ಸ್ಪೀಕರ್ ಸುಮಿತ್ರಾ ಮಹಾಜನ್ ತಿಳಿಸಿದರು. ಆದರೆ ಇದಕ್ಕೆ ಪ್ರತಿಪಕ್ಷ ಸದಸ್ಯರು ಸ್ಪಂದಿಸದಿದ್ದಾಗ ಸ್ಪೀಕರ್ ದಿನದ ಕಲಾಪವನ್ನು ಮುಂದೂಡಿದರು. ಯಾವುದೇ ವಿಷಯದ ಬಗ್ಗೆ ಚರ್ಚೆ ನಡೆಸಲು ನಾವು ಸಿದ್ಧರಿದ್ದೇವೆ. ಇಲ್ಲಿ ಮುಚ್ಚಿಡುವಂತದ್ದು ಏನೂ ಇಲ್ಲ. ಸರಕಾರದ ನಿರ್ಧಾರದ ಬಗ್ಗೆ ತನ್ನ ನಿಲುವಿನ ಕುರಿತು ಕಾಂಗ್ರೆಸ್ ಸ್ಪಷ್ಟನೆ ನೀಡಬೇಕಾಗಿದೆ. ಬೇಡಿಕೆ ಮಂಡಿಸಲು ನಿಮಗೆ ಹಕ್ಕು ಇದೆ ಮತ್ತು ಇದರ ಬಗ್ಗೆ ಸರಕಾರ ಉತ್ತರಿಸಲಿದೆ ಎಂದು ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಹೇಳಿದರು. ತೃಣಮೂಲ ಕಾಂಗ್ರೆಸ್ ಪಕ್ಷ ಹೊರತುಪಡಿಸಿ, ಉಳಿದ ಯಾವುದೇ ಪ್ರತಿಪಕ್ಷ ನೋಟು ಅಮಾನ್ಯ ನಿರ್ಧಾರ ವಾಪಸು ಪಡೆಯಬೇಕೆಂದು ಆಗ್ರಹಿಸುತ್ತಿಲ್ಲ. ಈ ನಿರ್ಧಾರವನ್ನು ಜಾರಿಗೊಳಿಸಿದ ಕ್ರಮ ಸರಿಯಲ್ಲ ಮತ್ತು ದೇಶದ ಜನಸಾಮಾನ್ಯರು ಅನುಭವಿಸುತ್ತಿರುವ ಬವಣೆಗೆ ಸರಕಾರ ಹೊಣೆಯಾಗಿದ್ದು ಈ ಬಗ್ಗೆ ಪ್ರಧಾನಿ ಉತ್ತರ ನೀಡಬೇಕು ಎಂಬುದು ಪ್ರತಿಪಕ್ಷಗಳ ಆಗ್ರಹವಾಗಿದೆ. ಅಲ್ಲದೆ ನೋಟು ಅಮಾನ್ಯಗೊಳಿಸುವ ನಿರ್ಧಾರದ ಬಗ್ಗೆ ಮಾಹಿತಿ ಮೊದಲೇ ಬಿಜೆಪಿ ಮತ್ತದರ ಮಿತ್ರಪಕ್ಷಗಳಿಗೆ ತಿಳಿದಿತ್ತು. ಆದ್ದರಿಂದ ಈ ವಿಷಯದ ಬಗ್ಗೆ ಜಂಟಿ ಸಂಸದೀಯ ಸಮಿತಿ ರಚಿಸಿ ತನಿಖೆ ನಡೆಸಬೇಕೆಂಬುದು ಪ್ರತಿಪಕ್ಷಗಳ ಆಗ್ರಹವಾಗಿದೆ. ಮಾಹಿತಿ ಸೋರಿಕೆಯಾಗಿದೆ ಎಂಬ ದೂರು ಆಧಾರರಹಿತ ಮತ್ತು ಶುದ್ಧ ಸುಳ್ಳು ಎಂದು ಹೇಳಿರುವ ಸರಕಾರ, ಪ್ರಧಾನಿ ಮೋದಿ ನ.8ರಂದು ರಾತ್ರಿ ದೇಶವನ್ನುದ್ದೇಶಿಸಿ ಮಾಡಿದ ಭಾಷಣ ಎಲ್ಲರನ್ನೂ ಅಚ್ಚರಿಯಲ್ಲಿ ಕೆಡವಿತ್ತು ಎಂದು ಪ್ರತಿಕ್ರಿಯಿಸಿದೆ. ದೇಶದ ಹಿತಾಸಕ್ತಿಯ ರಕ್ಷಣೆಗಾಗಿ, ಕಪ್ಪುಹಣ ಮತ್ತು ಭ್ರಷ್ಟಾಚಾರ ತೊಲಗಿಸುವ ಉದ್ದೇಶದಿಂದ ಈ ಪ್ರಮುಖ ನಿರ್ಧಾರ ಕೈಗೊಳ್ಳಲಾಗಿದೆ. ಪ್ರಾಮಾಣಿಕ ತೆರಿಗೆ ಪಾವತಿಸುವ ವ್ಯಕ್ತಿಗೆ ಒಂದು ರೂಪಾಯಿ ಕೂಡಾ ನಷ್ಟವಾಗದು. ಆದರೆ ಅಗಣಿತ ಸಂಪತ್ತು ರಾಶಿ ಹಾಕಿಕೊಂಡು ತೆರಿಗೆ ತಪ್ಪಿಸಿ ಹಾಯಾಗಿರುವ ಮಂದಿಗೆ ಸಂಕಷ್ಟದ ಕಾಲ ಆರಂಭವಾಗಿದೆ. ಅಂತೆಯೇ ಭಯೋತ್ಪಾದಕ ಸಂಘಟನೆಗಳ ಉಸಿರು ಕಟ್ಟಿದಂತಾಗಿದೆ ಎಂದು ಸರಕಾರ ಹೇಳಿದೆ. ಈ ಅಧಿವೇಶನ ಉತ್ತಮ ಚರ್ಚೆಗೆ ವೇದಿಕೆಯಾಗಿ, ಜಿಎಸ್‌ಟಿ ಮುಂತಾದ ಪ್ರಮುಖ ಮಸೂದೆಗಳ ಅಂಗೀಕಾರಕ್ಕೆ ಪ್ರತಿಪಕ್ಷಗಳು ಸಹಕಾರ ನೀಡಲಿವೆ ಎಂಬ ಆಶಾವಾದವನ್ನು ಚಳಿಗಾಲದ ಅಧಿವೇಶನ ಆರಂಭಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ವ್ಯಕ್ತಪಡಿಸಿದ್ದರು.





