ಐದು ನೂರು, ಸಾವಿರ ರೂ.ನೋಟು ಚಲಾವಣೆ ರದ್ದು
ದೇಶದಲ್ಲಿ ‘ಆರ್ಥಿಕ ತುರ್ತು ಪರಿಸ್ಥಿತಿ’: ಡಾ.ಜಿ.ಪರಮೇಶ್ವರ್

ಬೆಂಗಳೂರು, ನ.17: ಅಕಾರಕ್ಕೆ ಬಂದ ನೂರು ದಿನಗಳಲ್ಲಿ ವಿದೇಶದಲ್ಲಿನ ಕಪ್ಪು ಹಣ ತಂದು ಬಡವರ ಖಾತೆಗೆ ತಲಾ 15ಲಕ್ಷ ರೂ.ನಂತೆ ಜಮಾ ಮಾಡುವ ಘೋಷಣೆ ಮಾಡಿದ್ದ ಮೋದಿ, ಇದೀಗ ಸೂಕ್ತ ಮುನ್ನೆಚ್ಚರಿಕೆ ಇಲ್ಲದೆ ಐನೂರು, ಸಾವಿರ ರೂ. ನೋಟು ರದ್ದು ಮಾಡುವ ಮೂಲಕ ಜನರ ಮೇಲೆ ‘ಆರ್ಥಿಕ ತುರ್ತು ಪರಿಸ್ಥಿತಿ’ ಹೇರಿದ್ದಾರೆಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಆರೋಪಿಸಿದ್ದಾರೆ.
ಗುರುವಾರ ಇಲ್ಲಿನ ಮಾಗಡಿ ರಸ್ತೆಯಲ್ಲಿನ ಸಿಗೇಹಳ್ಳಿಯ ಸಮುದಾಯ ಭವನದಲ್ಲಿ ಏರ್ಪಡಿಸಿದ್ದ 62ನೆ ಸಹಕಾರಿ ಸಪ್ತಾಹ ಅಂಗವಾಗಿ ಸಹಕಾರ ಸಂಸ್ಥೆಗಳ ಮೂಲಕ ಸರಕಾರದ ವಿಶಿಷ್ಟ ಯೋಜನೆ ಜಾರಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಿದೇಶದಲ್ಲಿನ ಕಪ್ಪು ಹಣವನ್ನು ಮರೆಮಾಚಲು ಇದೀಗ ದೇಶದ ಜನತೆಗೆ ಆರ್ಥಿಕ ದಿಗ್ಬಂಧನ ವಿಸಿದ್ದಾರೆಂದು ಗುಡುಗಿದರು.
ಕಪ್ಪು ಹಣ ಹೊಂದಿರುವ ಕಾಳ ಧನಿಕರು ಮತ್ತು ಕಾಳ ಸಂತೆಕೋರರ ವಿರುದ್ಧ ಕ್ರಮ ಕೈಗೊಳ್ಳುವುದನ್ನು ಬಿಟ್ಟು, ದೇಶದಲ್ಲಿನ ಬಡಕೂಲಿ ಕಾರ್ಮಿಕರು, ಜನ ಸಾಮಾನ್ಯರನ್ನು ಬ್ಯಾಂಕುಗಳು, ಎಟಿಎಂ ಕೇಂದ್ರಗಳು, ಅಂಚೆ ಕಚೇರಿಗಳ ಮುಂದೆ ತಂದು ನಿಲ್ಲಿಸಿದ್ದಾರೆ ಎಂದು ಪರಮೇಶ್ವರ್ ವಾಗ್ದಾಳಿ ನಡೆಸಿದರು.
ಆರ್ಥಿಕ ವ್ಯವಸ್ಥೆ ಹಾಳು: ಪ್ರಪಂಚದಲ್ಲಿ ಆರ್ಥಿಕ ಬಿಕ್ಕಟ್ಟು ಸೃಷ್ಟಿಯಾಗಿದ್ದ ವೇಳೆ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ದೇಶದ ಆರ್ಥಿಕ ಸ್ಥಿತಿಯನ್ನು ಸದೃಢಗೊಳಿಸಿ, ದೇಶವನ್ನು ವಿಶ್ವದಲ್ಲೆ ಐದನೆ ಸ್ಥಾನಕ್ಕೇರಿಸಿದ್ದರು. ಆದರೆ, ಇಂದು ನೋಟು ರದ್ದು ಮಾಡುವ ಮೂಲಕ ಆರ್ಥಿಕ ವ್ಯವಸ್ಥೆಯನ್ನು ಹದಗೆಡಿಸಲಾಗುತ್ತಿದೆ ಎಂದು ವಿಶ್ಲೇಷಿಸಿದರು.
ನೋಟುಗಳ ಚಲಾವಣೆ ದಿಢೀರ್ ರದ್ದು ಮಾಡಿರುವುದರಿಂದ ಬಡ ಕೂಲಿ ಕಾರ್ಮಿಕರು, ಸಣ್ಣ ವ್ಯಾಪಾರಿಗಳು, ರೈತರು ಸೇರಿದಂತೆ ಬಹುತೇಕ ಜನರು ತಮ್ಮ ಹಣಕ್ಕಾಗಿ ಬೀದಿಯಲ್ಲಿ ನಿಲ್ಲಬೇಕಾಗಿದೆ ಎಂದ ಅವರು, ಕಪ್ಪು ಹಣದ ನೆಪದಲ್ಲಿ ಬಡ ಜನರಿಗೆ ಶಿಕ್ಷೆ ಸರಿಯಲ್ಲ ಎಂದು ಆಕ್ಷೇಪಿಸಿದರು.
ಅಭಿವೃದ್ಧಿಗೆ ಆದ್ಯತೆ: ಸಹಕಾರ ಕ್ಷೇತ್ರ ಬಹಳ ದೊಡ್ಡ ಪ್ರಮಾಣದಲ್ಲಿ ಬೆಳೆದಿದ್ದು, ಸಹಕಾರಿ ಆಂದೋಲನದ ರೀತಿಯಲ್ಲಿ ಅಭಿವೃದ್ಧಿಯಾಗಬೇಕು. ಪಕ್ಷಾತೀತವಾಗಿ ಸಹಕಾರಿ ತತ್ವ ಪಾಲನೆಯಾಗುತ್ತಿರುವುದರಿಂದ ಈ ಮಟ್ಟದ ಅಭಿವೃದ್ಧಿ ಸಾಧ್ಯವಾಗಿದೆ ಎಂದು ಅವರು ಪ್ರತಿಪಾದಿಸಿದರು.
ಪ್ರೋತ್ಸಾಹ ಧನ ಹೆಚ್ಚಳ: ರಾಜ್ಯದಲ್ಲಿ ಸಹಕಾರಿ ಕ್ಷೇತ್ರದ ಅಭಿವೃದ್ಧಿಗೆ ರಾಜ್ಯ ಸರಕಾರ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದ್ದು, ಇದೀಗ ಪ್ರತಿ ಲೀಟರ್ ಹಾಲಿಗೆ ನೀಡುತ್ತಿದ್ದ ಪ್ರೋತ್ಸಾಹ ಧನ 1ರೂ.ಹೆಚ್ಚಳ ಮಾಡಲಾಗಿದೆ ಎಂದ ಅವರು, ಪ್ರತಿಟನ್ ಕಬ್ಬಿಗೆ ಬೆಂಬಲ ಬೆಲೆಯನ್ನು ಹೆಚ್ಚಳ ಮಾಡಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ವಸತಿ ಮಹಾ ಮಂಡಳ ಅಧ್ಯಕ್ಷ ಎಸ್.ಟಿ.ಸೋಮಶೇಖರ್, ಉಪಾಧ್ಯಕ್ಷ ಕಡ್ಲಿ ವೀರಣ್ಣ, ಸಹಕಾರ ಮಹಾ ಮಂಡಳದ ಅಧ್ಯಕ್ಷ ಶೇಖರಗೌಡ ಮಾಲಿ ಪಾಟೀಲ, ಎಚ್.ವಿ.ನಾಗರಾಜ್, ಬಿ.ಸಿ.ಸತೀಶ್, ಪಾಂಡುರಂಗ ಗರಗ್, ಚಂದ್ರಪ್ಪ, ಗಂಗಣ್ಣ ಸೇರಿದಂತೆ ಇನ್ನಿತರರು ಹಾಜರಿದ್ದರು.







