ಮೀಸಲಾತಿ ವಿರೋಧಿಗಳಿಂದ ಹಿಂದುಳಿದವರ ಸಮಾವೇಶ: ಸಿದ್ದರಾಮಯ್ಯ ಲೇವಡಿ
ಕನಕದಾಸ ಜಯಂತಿ

ಬೆಂಗಳೂರು, ನ.17: ಹಿಂದುಳಿದ ವರ್ಗಗಳ ಮೀಸಲಾತಿಯನ್ನು ವಿರೋಸುವವರೇ ಹಿಂದುಳಿದ ವರ್ಗಗಳ ಸಮಾವೇಶಗಳನ್ನು ಮಾಡುತ್ತಿದ್ದಾರೆ. ಈ ಬಗ್ಗೆ ಹಿಂದುಳಿದ ಸಮುದಾಯ ಸದಾ ಎಚ್ಚರಿಕೆಯಿಂದಿರಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದ್ದಾರೆ.
ಗುರುವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ಸಂತ ಶ್ರೇಷ್ಠ ‘ಕನಕದಾಸರ ಜಯಂತಿ-2015’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹಿಂದುಳಿದ ವರ್ಗಗಳಿಗೆ ಮೀಸಲಾತಿಯನ್ನು ಕಲ್ಪಿಸುವ ಮಂಡಲ್ ಆಯೋಗದ ವರದಿಯನ್ನು ವಿರೋಸಿದವರು ಯಾರು ಎಂಬುದನ್ನು ಹಿಂದುಳಿದ ವರ್ಗಗಳ ಸಮುದಾಯದ ಜನತೆ ಅರ್ಥ ಮಾಡಿಕೊಳ್ಳಬೇಕು. ಆ ಮೂಲಕ ಸಾಮಾಜಿಕ ನ್ಯಾಯದ ವಿರೋಗಳಿಗೆ ಹೆಚ್ಚಿನ ಮಾನ್ಯತೆ ಕೊಡದಂತೆ ನೋಡಿಕೊಳ್ಳಬೇಕಾದ ಅಗತ್ಯವಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಗ್ರಾಮ ಪಂಚಾಯತ್‌ಗಳಲ್ಲಿ ಜಾರಿಯಲ್ಲಿರುವ ಮಹಿಳೆಯರ ಮೀಸಲಾತಿಯನ್ನು ವಿರೋಸಿ ಬಿಜೆಪಿಯ ಹಿರಿಯ ಮುಖಂಡ ಹಾಗೂ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾ.ರಾಮಾ ಜೋಯಿಸ್ ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣ ದಾಖಲಿಸಿದ್ದರು. ಆ ಸಂದರ್ಭದಲ್ಲಿ ಬಿಜೆಪಿಯ ಯಾವ ಮುಖಂಡರೂ ಪ್ರಕರಣ ದಾಖಲಿಸದಂತೆ ರಾಮಾ ಜೋಯಿಸ್‌ರಿಗೆ ಸೂಚಿಸಲಿಲ್ಲ. ಇಂತಹ, ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿರುವವರ ಕುರಿತು ಜನತೆ ಸರಿಯಾದ ತಿಳುವಳಿಕೆ ಹೊಂದಿರಬೇಕು ಎಂದು ಅವರು ಹೇಳಿದರು.
ನಾನು ಅಕಾರದಲ್ಲಿ ಇರಲಿ, ಬಿಡಲಿ ಸಾಮಾಜಿಕ ನ್ಯಾಯದ ಪರವಾಗಿಯೇ ಇರುತ್ತೇನೆ. ಆ ಮೂಲಕ ದೇಶದ ಅನಿಷ್ಟಗಳನ್ನು ಹೋಗಲಾಡಿಸಿ ಸಮಾನತೆಯ ಸಮಾಜಕ್ಕಾಗಿ ದುಡಿದ ಬುದ್ಧ, ಬಸವ, ಅಂಬೇಡ್ಕರ್ ಸೇರಿದಂತೆ ಸಮಾಜ ಸುಧಾರಕರ ಆಶಯಗಳನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಅವರು ಹೇಳಿದರು.
ಸಮಾಜ ಸುಧಾರಕರ ಜಯಂತಿಗಳು ಯಾವುದೇ ಒಂದು ಜಾತಿಗೆ ಸೀಮಿತಗೊಳ್ಳಬಾರದು ಎಂಬ ಸದುದ್ದೇಶದಿಂದ ಸರಕಾರದ ವತಿಯಿಂದಲೇ ಜಯಂತಿಯನ್ನು ಆಚರಿಸಲಾಗುತ್ತಿದೆ. ನನ್ನ ಆಡಳಿತದಲ್ಲಿ ಜಾರಿಗೆ ತಂದ ಜಯಂತಿಗಳಿಗೆ ಸರಕಾರದ ರಜೆಯನ್ನು ಘೋಷಿಸದೆ, ಪ್ರತಿಯೊಂದು ಶಾಲಾ-ಕಾಲೇಜು, ಸರಕಾರಿ ಕಚೇರಿಗಳಲ್ಲಿ ಆಚರಿಸುವಂತೆ ಸೂಚಿಸಲಾಗಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.
ಕನಕದಾಸರ ಕುರಿತು ವಿಶೇಷ ಉಪನ್ಯಾಸ ನೀಡಿದ ಡಾ.ಸಿ.ನಾಗಣ್ಣ, ಮೇಲ್ಜಾತಿ ಮನಸ್ಸುಗಳು ಸಂಸ್ಕೃತದಲ್ಲಿ ಅಡಗಿಸಿಟ್ಟಿದ್ದ ಜ್ಞಾನ ಹಾಗೂ ತಿಳುವಳಿಕೆಯನ್ನು ಕನಕದಾಸರು ಜನಸಾಮಾನ್ಯರ ಭಾಷೆಯಾದ ಕನ್ನಡದಲ್ಲಿ ಕೀರ್ತನೆಗಳನ್ನು ರಚಿಸುವುದರ ಮೂಲಕ ಜನತೆಗೆ ತಲುಪಿಸಿದರು ಎಂದು ತಿಳಿಸಿದರು.
ಇಂಗ್ಲಿಷ್ ಸಾಹಿತ್ಯದ ಶ್ರೇಷ್ಠ ಸಾಹಿತಿ ಶೇಕ್ಸ್‌ಪಿಯರ್‌ಗೆ 14ವರ್ಷ ಆಗಿದ್ದಾಗಲೇ, ಕನಕ ದಾಸರು ತಮ್ಮ ಕೀರ್ತನೆಗಳು ಹಾಗೂ ಮೋಹನ ತರಂಗಿಣಿ, ನಳಚರಿತ್ರೆ, ರಾಮಧಾನ್ಯ ಚರಿತ್ರೆ ಕೃತಿಗಳನ್ನು ರಚಿಸುವುದರ ಮೂಲಕ ಜಗತ್ತಿನ ಸಾಹಿತ್ಯ ಲೋಕಕ್ಕೆ ಅಪಾರವಾದ ಕಾಣಿಕೆಯನ್ನು ನೀಡಿದ್ದರು ಎಂದು ಅವರು ಅಭಿಮಾನಪಟ್ಟರು.
ಕಾರ್ಯಕ್ರಮದಲ್ಲಿ ಕನಕದಾಸರ ಕೃತಿಗಳನ್ನು ಆಳವಾಗಿ ಅಧ್ಯಯನ ಮಾಡಿರುವ ಸಿದ್ದಣ್ಣ ಕೀರಪ್ಪ ಜಕಬಾಳರಿಗೆ ಕನಕಶ್ರೀ ಹಾಗೂ ಯುವ ಸಾಹಿತಿ ಸುರೇಶ್ ನಾಗಲಮಡಿಕೆಗೆ ಕನಕ ಯುವ ಪುರಸ್ಕಾರವನ್ನು ನೀಡಿ ಗೌರವಿಸಲಾಯಿತು.
ಈ ವೇಳೆ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ, ಮೇಯರ್ ಪದ್ಮಾವತಿ, ಶಾಸಕ ಎಚ್.ಎಂ.ರೇವಣ್ಣ, ಡಾ.ಬಿ.ಕೆ.ರವಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಉಮಾಶಂಕರ್, ನಿರ್ದೇಶಕ ಕೆ.ಎ.ದಯಾನಂದ್ ಮತ್ತಿತರರಿದ್ದರು.







