ವಿದ್ಯುತ್ ಮಾರ್ಗಕ್ಕೆ ಭೂಮಿ ನೀಡಲು ರೈತರ ಸಮ್ಮತಿ: ಸಚಿವ ಡಿ.ಕೆ.ಶಿವಕುಮಾರ್

ಬೆಂಗಳೂರು, ನ. 17: ಯಲಹಂಕ ಸಮೀಪದಲ್ಲಿ 400 ಕೆವಿ ವಿದ್ಯುತ್ ಮಾರ್ಗ ನಿರ್ಮಾಣಕ್ಕೆ ರೈತರು ಭೂಮಿ ನೀಡಲು ಸಮ್ಮತಿ ಸೂಚಿಸಿದ್ದಾರೆ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಇಂದಿಲ್ಲಿ ತಿಳಿಸಿದ್ದಾರೆ.
ಗುರುವಾರ ಸದಾಶಿವನಗರದಲ್ಲಿನ ತಮ್ಮ ನಿವಾಸದಲ್ಲಿ ರೈತರ ಮುಖಂಡರೊಂದಿಗೆ ಸಭೆ ನಡೆಸಿದ ಬಳಿಕ ಮಾಧ್ಯಮ ಪ್ರತಿನಿಗಳೊಂದಿಗೆ ಮಾತನಾಡಿದ ಅವರು, ಏಳು-ಎಂಟು ವರ್ಷಗಳಿಂದ ವಿದ್ಯುತ್ ಮಾರ್ಗ ನಿರ್ಮಾಣಕ್ಕೆ ಅಡ್ಡಿಯಾಗಿತ್ತು. ಹೀಗಾಗಿ ರಾಜ್ಯ ಸರಕಾರ ಹಾಗೂ ರೈತರ ಮಧ್ಯೆ ಸಂಘರ್ಷ ಸೃಷ್ಟಿಯಾಗಿದ್ದರಿಂದ ವಿದ್ಯುತ್ ಯೋಜನೆಗೆ ವಿಳಂಬವಾಗಿತ್ತು ಎಂದರು.
ಇದೀಗ ರೈತರು ವಿದ್ಯುತ್ ಮಾರ್ಗ ನಿರ್ಮಾಣಕ್ಕೆ ಸಮ್ಮತಿಸಿದ್ದಾರೆ. ಕಾರಿಡಾರ್ ನಿರ್ಮಿಸುವ ಜಮೀನಿಗೆ ಮಾರುಕಟ್ಟೆ ದರದ ಶೇ.18ರಷ್ಟು ಹಾಗೂ ವಿದ್ಯುತ್ ಟವರ್ ನಿರ್ಮಿಸುವ ಜಮೀನಿಗೆ ಮಾರುಕಟ್ಟೆ ದರದ ಶೇ.80ರಷ್ಟು ನಿಗದಿ ಮಾಡಲಾಗಿದೆ. ರೈತರ ಮೇಲೆ ಹೂಡಿರುವ ಮೊಕದ್ದಮೆ ವಾಪಸ್ ಪಡೆದು ರೈತರಿಗೆ ಪರಿಹಾರ ಧನ ನೀಡಲಾಗುವುದು ಎಂದು ಅವರು ಸ್ಪಷ್ಟಣೆ ನೀಡಿದರು.
ರೈತರ ನೇತೃತ್ವ ವಹಿಸಿದ್ದ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಮಾತನಾಡಿ, ಮಾರುಕಟ್ಟೆ ದರದ ಶೇ.100ರಷ್ಟು ಪರಿಹಾರವನ್ನು ರೈತರಿಗೆ ನೀಡಬೇಕೆಂಬುದು ನಮ್ಮ ಒತ್ತಾಯ. ವಿದ್ಯುತ್ ಮಾರ್ಗ ನಿರ್ಮಾಣ ಜಮೀನಿಗೆ ಶೇ.50ರಷ್ಟು ಪರಿಹಾರ ಧನ ನೀಡಬೇಕು. ಆದರೆ, ಚರ್ಚೆಯ ಸಂದರ್ಭದಲ್ಲಿ ನಿರ್ಧಾರವಾದ ಪರಿಹಾರ ಧನಕ್ಕೆ ನಾವು ಒಪ್ಪಿಕೊಂಡಿದ್ದೇವೆ ಎಂದು ತಿಳಿಸಿದರು.
ಬೆಂಗಳೂರು ಉತ್ತರ ತಾಲೂಕು ಯಲಹಂಕ ಸಮೀಪದ 400 ಕೆ.ವಿ.ವಿದ್ಯುತ್ ಘಟಕ ನಿರ್ಮಾಣ ಕಾರ್ಯಕ್ಕೆ ವಿದ್ಯುತ್ ಗೋಪುರ ಮತ್ತು ಪ್ರಸರಣ ಮಾರ್ಗ ನಿರ್ಮಿಸಲು ಇಲ್ಲಿನ ಕಾಕೋಳು, ಶ್ಯಾನುಭೋಗನಹಳ್ಳಿ ಸೇರಿದಂತೆ 9 ಹಳ್ಳಿಗಳ ರೈತರ ಜಮೀನುಗಳ ಪರಿಹಾರ ನಿಗದಿ ಸಂಬಂಧ ಸಭೆಯಲ್ಲಿ ಒಪ್ಪಂದಕ್ಕೆ ಬರಲಾಯಿತು ಎಂದು ಗೊತ್ತಾಗಿದೆ.
ವಿದ್ಯುತ್ ಘಟಕ ಮತ್ತು ಮಾರ್ಗ ನಿರ್ಮಾಣದಿಂದ ಬೆಂಗಳೂರು ಭಾಗದ ವಿದ್ಯುತ್ ಕೊರತೆ ನಿವಾರಣೆಯಾಗಲಿದೆ. ಅಲ್ಲದೆ, ಮಹಾರಾಷ್ಟ್ರ, ತಮಿಳುನಾಡು ಮತ್ತು ಆಂಧ್ರಪ್ರದೇಶ ರಾಜ್ಯಗಳಿಂದ ವಿದ್ಯುತ್ ಸರಗವಾಗಿ ಹರಿದು ಬರಲು ಅನುಕೂಲ ಆಗುತ್ತದೆ ಎಂದು ಅಕಾರಿಗಳು ತಿಳಿಸಿದ್ದಾರೆ.







