ಇನ್ನು ಪೆಟ್ರೋಲ್ ಪಂಪ್‌ಗಳಲ್ಲೂ 2000 ರೂ. ನೋಟು ಪಡೆಯಬಹುದು!

ಹೊಸದಿಲ್ಲಿ, ನ.18: ದೈನಂದಿನ ನಗದು ಪಡೆಯುವ ಸಲುವಾಗಿ ನೀವಿನ್ನು ಬ್ಯಾಂಕುಗಳ ಮುಂದೆ ಸರದಿ ಸಾಲಿನಲ್ಲಿ ಕಾಯಬೇಕಾಗಿಲ್ಲ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ಪೆಟ್ರೋಲ್ ಬಂಕ್‌ಗಳಿಗೆ ತೆರಳಿ, ಪಿಓಎಸ್ ಮಿಷಿನ್‌ನಲ್ಲಿ ಸ್ವೈಪ್ ಮಾಡುವ ಮೂಲಕ 2000 ರೂಪಾಯಿವರೆಗೂ ನಗದು ಪಡೆಯಬಹುದು.
ಆರಂಭಿಕ ಹಂತದಲ್ಲಿ ಈ ಸೌಲಭ್ಯ, ಭಾರತೀಯ ಸ್ಟೇಟ್ ಬ್ಯಾಂಕಿನ ಸ್ವೈಪ್ ಮಿಷಿನ್ ಹೊಂದಿರುವ 2,500 ಪೆಟ್ರೋಲ್ ಬಂಕ್‌ಗಳಿಗೆ ಮಾತ್ರ ಸೀಮಿತವಾಗಿದ್ದರೂ, ಸದ್ಯದಲ್ಲೇ ಇದನ್ನು 20 ಸಾವಿರಕ್ಕೆ ವಿಸ್ತರಿಸಲಾಗುವುದು. ಎಚ್‌ಡಿಎಫ್‌ಸಿ ಬ್ಯಾಂಕ್, ಸಿಟಿಬ್ಯಾಂಕ್ ಮತ್ತು ಐಸಿಐಸಿಐ ಬ್ಯಾಂಕ್ ಸ್ವೈಪ್ ಮಿಷಿನ್ ಹೊಂದಿರುವ ಪೆಟ್ರೋಲ್ ಬಂಕ್‌ಗಳಿಗೂ ಇದು ವಿಸ್ತರಣೆಯಾಗಲಿದೆ.
ಸರ್ಕಾರ ನವೆಂಬರ್ 9ರಂದು 500 ಹಾಗೂ 1000 ರೂಪಾಯಿ ಮುಖಬೆಲೆಯ ನೋಟುಗಳ ಚಲಾವಣೆ ರದ್ದುಪಡಿಸಿದ ಹಿನ್ನೆಲೆಯಲ್ಲಿ ಅಖಿಲ ಭಾರತ ಪೆಟ್ರೋಲಿಯಂ ಡೀಲರ್‌ಗಳ ಸಂಘ ಈ ಪ್ರಸ್ತಾವವನ್ನು ಮುಂದಿಟ್ಟಿತ್ತು. ಗುರುವಾರ ಇಂಡಿಯನ್ ಆಯಿಲ್, ಹಿಂದೂಸ್ತಾನ್ ಪೆಟ್ರೋಲಿಯಂ ಹಾಗೂ ಭಾರತ್ ಪೆಟ್ರೋಲಿಯಂ ಮುಖ್ಯಸ್ಥರ ಜತೆಗೆ ಎಸ್‌ಬಿಐ ಮುಖ್ಯಸ್ಥೆ ಅರುಂಧತಿ ಭಟ್ಟಾಚಾರ್ಯ ಚರ್ಚಿಸಿದ ಬಳಿಕ ಇದನ್ನು ಅಂತಿಮಪಡಿಸಲಾಗಿದೆ.





