ರಾಜ್ಯಸಭೆ:ಆಝಾದ್ ಹೇಳಿಕೆ ಕುರಿತಂತೆ ಬಿಜೆಪಿ-ಕಾಂಗ್ರೆಸ್ ನಡುವೆ ಜಟಾಪಟಿ

ಹೊಸದಿಲ್ಲಿ,ನ.18: ಗುರುವಾರ ನೋಟು ನಿಷೇಧ ರದ್ದತಿ ಕುರಿತು ನಡೆದ ಚರ್ಚೆಯ ಸಂದರ್ಭ ಪ್ರತಿಪಕ್ಷ ನಾಯಕ ಗುಲಾಂ ನಬಿ ಆಝಾದ್ ಅವರು ನೀಡಿದ್ದ ಮತ್ತು ಬಳಿಕ ಅಳಿಸಿ ಹಾಕಲಾಗಿರುವ ಹೇಳಿಕೆಗೆ ಸಂಬಂಧಿಸಿದಂತೆ ಬಿಜೆಪಿ ಮತ್ತು ಕಾಂಗ್ರೆಸ್ ಸದಸ್ಯರು ಇಂದು ರಾಜ್ಯಸಭೆಯಲ್ಲಿ ಪರಸ್ಪರ ಜಟಾಪಟಿಗಿಳಿದಿದ್ದು, ಗದ್ದಲದ ವತಾವರಣ ನಿರ್ಮಾಣಗೊಂಡ ಹಿನ್ನೆಲೆಯಲ್ಲಿ ಮಧ್ಯಾಹ್ನದವರೆಗೆ ಮೂರು ಬಾರಿ ಸದನವು ಮಂದೂಡಲ್ಪಟ್ಟಿತು.
ಬೆಳಿಗ್ಗೆ ಸದನವು ಸಮಾವೇಶಗೊಂಡ ಬೆನ್ನಿಗೇ ತಮ್ಮ ಆಸನಗಳಿಂದ ಎದ್ದು ಬಂದು ಘೋಷಣೆಗಳನ್ನು ಕೂಗತೊಡಗಿದ ಬಿಜೆಪಿ ಸದಸ್ಯರು, ನೋಟು ನಿಷೇಧದ ಬಳಿಕ ದೇಶದಲ್ಲಿ ಉಂಟಾಗಿರುವ ಸಾವುಗಳನ್ನು ಭಯೋತ್ಪಾದಕರ ದಾಳಿಗಳಿಗೆ ಬಲಿಯಾದವರ ಸಾವುಗಳಿಗೆ ಹೋಲಿಸಿದ್ದಕ್ಕಾಗಿ ಆಝಾದ್ ಅವರು ಕ್ಷಮೆ ಯಾಚಿಸಬೇಕೆಂದು ಆಗ್ರಹಿಸಿದರು. ಗುರುವಾರ ಚರ್ಚೆಯ ಸಂದರ್ಭದಲ್ಲಿಯೇ ಆಝಾದ್ ಅವರ ಈ ಹೇಳಿಕೆಯನ್ನು ಕಡತದಿಂದ ಅಳಿಸಿ ಹಾಕಲಾಗಿತ್ತು.
ಕಾಂಗ್ರೆಸ್ ಸದಸ್ಯರೂ ಸದನದ ಅಂಗಳಕ್ಕೆ ನುಗ್ಗಿ ಹಳೆಯ 500 ಮತ್ತು 1,000 ರೂ.ಗಳ ನೋಟುಗಳನ್ನು ರದ್ದುಗೊಳಿಸಿ ಜನಸಾಮಾನ್ಯರನ್ನು ಸಂಕಷ್ಟದಲ್ಲಿ ತಳ್ಳಿರುವುದಕ್ಕಾಗಿ ಪ್ರಧಾನಿ ಮತ್ತು ಸರಕಾರ ಕ್ಷಮೆ ಯಾಚಿಸಬೇಕೆಂದು ಘೋಷಣೆಗಳನ್ನು ಕೂಗಿದರು.
ಈ ಗದ್ದಲದ ನಡುವೆಯೇ ಸದನದ ಅಂಗಳದಲ್ಲಿ ನೆರೆದ ಎಡಿಎಂಕೆ ಸದಸ್ಯರು ಕಾವೇರಿ ಜಲವಿವಾದದ ಕುರಿತು ಘೋಷಣೆಗಳನ್ನು ಕೂಗತೊಡಗಿದ್ದರು.
ಉಪ ಸಭಾಪತಿ ಪಿ.ಜೆ.ಕುರಿಯನ್ ಅವರು ತಮ್ಮ ಆಸನಗಳಿಗೆ ಮರಳುವಂತೆ ಸದಸ್ಯರಿಗೆ ಸೂಚಿಸಿರಲ್ಲದೆ,ಅವರ ಅಹವಾಲುಗಳನ್ನು ಆಲಿಸುವುದಾಗಿ ಭರವಸೆ ನೀಡಿದರು.
ಗದ್ದಲದ ನಡುವೆಯೇ ಮಾತನಾಡಿದ ಸಹಾಯಕ ಸಂಸದೀಯ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಬಾಸ್ ನಕ್ವಿ ಅವರು, ಆಝಾದರ ಹೇಳಿಕೆಯು ಕಾಂಗ್ರೆಸ್ ಭಯೋತ್ಪಾದಕರ ಬಗ್ಗೆ ಸಹಾನುಭೂತಿಯನ್ನು ಹೊಂದಿದೆ ಎಂಬ ಸಂದೇಶವನ್ನು ದೇಶಕ್ಕೆ ನೀಡಿದೆ ಎಂದು ಹೇಳಿದರಲ್ಲದೆ, ನೋಟು ನಿಷೇಧ ಕ್ರಮವು ಕಪ್ಪುಹಣ ಖದೀಮರನ್ನು ಮಾತ್ರ ಗುರಿಯಾಗಿಸಿಕೊಂಡಿರುವುದರಿಂದ ಕಾಂಗ್ರೆಸ್ ಪಕ್ಷವೇಕೆ ಆಕ್ರೋಶಗೊಂಡಿದೆ ಎಂದು ಪ್ರಶ್ನಿಸಿದರು.
ಕುರಿಯನ್ ಮನವಿಗೆ ಕಿವಿಗೊಡದ ಸದಸ್ಯರು ಗದ್ದಲ ಮುಂದುವರಿಸಿದ ಹಿನ್ನೆಲೆಯಲ್ಲಿ ಸದನವನ್ನು ಮೂರು ಬಾರಿ ಮುಂದೂಡಲಾಯಿತು.







