ನೋಟು ನಿಷೇಧ ವಿಚಾರಣೆಗೆ ತಡೆ ನೀಡಲು ಸುಪ್ರೀಂ ನಕಾರ

ಹೊಸದಿಲ್ಲಿ, ನ.18: ಐನೂರು ಹಾಗೂ ಒಂದು ಸಾವಿರ ನೋಟು ಚಲಾವಣೆ ನಿಷೇಧವನ್ನು ಪ್ರಶ್ನಿಸಿ ವಿವಿಧ ನ್ಯಾಯಾಲಯಗಳಲ್ಲಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆಗೆ ತಡೆ ನೀಡಲು ಸುಪ್ರೀಂ ಕೋರ್ಟ್ ಇಂದು ನಿರಾಕರಿಸಿದೆ.
ನೋಟುಗಳ ನಿಷೇಧ ತುಂಬಾ ಗಂಭೀರ ವಿಷಯವಾಗಿದ್ದು, ವಿವಿಧ ನ್ಯಾಯಾಲಯಗಳಲ್ಲಿ ನೋಟುಗಳ ನಿಷೇಧವನ್ನು ಪ್ರಶ್ನಿಸಿ ನಡೆಯುತ್ತಿರುವ ವಿಚಾರಣೆಗೆ ತಡೆ ನೀಡಬೇಕು ಹಾಗೂ ಎಲ್ಲ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಲ್ಲೇ ನಡೆಸಬೇಕು ಎಂದು ಕೇಂದ್ರ ಸರಕಾರ ಮಾಡಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಟಿಎಸ್ ಠಾಕೂರ್ ಹಾಗೂ ನ್ಯಾಯಮೂರ್ತಿ ಅನಿಲ್ ಆರ್ ದಾವೆ ನೇತೃತ್ವದ ನ್ಯಾಯಪೀಠ ತಿರಸ್ಕರಿಸಿದೆ.
ಆದರೆ ಒಂದೇ ಹೈಕೋರ್ಟ್ ನಲ್ಲಿ ಅರ್ಜಿಗಳ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಸಮ್ಮತಿ ಸೂಚಿಸಿದೆ. ನೋಟುಗಳ ನಿಷೇಧದಿಂದ ಜನರಿಗೆ ತೊಂದರೆಯಾಗಿದೆ. ತಮ್ಮ ಅನುಕೂಲಕ್ಕಾಗಿ ಜನರು ನ್ಯಾಯಾಲಯದ ಮೊರೆ ಹೋಗುತ್ತಿದ್ದು ಸಮಸ್ಯೆ ಉಂಟಾಗಿರುವುದನ್ನು ಅಲ್ಲಗಳೆಯಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಮುಂದಿನ ವಿಚಾರಣೆಯನ್ನು ನವೆಂಬರ‍್ 25 ಕ್ಕೆ ಮುಂದೂಡಿದೆ.





