ಭೂಮಿ, ವಸತಿಗೆ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿದವರ ಬಂಧನ

ಮಂಗಳೂರು, ನ.1ಭೂಮಿ ಮತ್ತು ನಿವೇಶನಕ್ಕಾಗಿ ಆಗ್ರಹಿಸಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ, ಕರ್ನಾಟಕ ಪ್ರಾಂತ ರೈತ ಸಂಘ ಹಾಗೂ 14 ಸಾಮೂಹಿಕ ಸಂಘಟನೆಗಳ ಬೆಂಬಲದೊಂದಿಗೆ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಮತ್ತು ಜೈಲು ಭರೋ ಚಳವಳಿ ಇಂದು ರಾಜ್ಯಾದ್ಯಂತ ನಡೆಯಿತು.
ಮಂಗಳೂರಿನಲ್ಲಿಂದು ದ.ಕ. ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ನೂರಾರು ಧರಣಿನಿರತರನ್ನು ತಡೆದ ಪೊಲೀಸರು ಅವರನ್ನು ವಶಕ್ಕೆ ತೆಗೆದುಕೊಂಡರು.
ಬೆಂಗಳೂರಿನಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಸಾವಿರಾರು ಸಂಖ್ಯೆಯ ಧರಣಿನಿರತರನ್ನು ತಡೆದ ಪೊಲೀಸರು ಅವರನ್ನು ಬಳಿಕ ಬಂಧಿಸಿದರು.
ಧರಣಿನಿರತರ ಪ್ರಮುಖ ಬೇಡಿಕೆಗಳು: ರಾಜ್ಯದ ಎಲ್ಲಾ ಬಡವರಿಗೆ ಹಿತ್ತಲು ಸಹಿತ ವಸತಿ ಒದಗಿಸಬೇಕು, ಭೂಹೀನ, ದಲಿತ, ಆದಿವಾಸಿ ಇತರ ಬಡವರಿಗೆ ತಲಾ 5 ಎಕರೆ ಜಮೀನು ಕೊಡಬೇಕು, ಸರಕಾರಿ ಜಮೀನು ಸಾಗುವಳಿಗೆ ಹಕ್ಕುಪತ್ರ ನೀಡಲು ಭೂಕಂದಾಯ ಕಾಯ್ದೆಗೆ ತಿದ್ದುಪಡಿ ತರಬೇಕು ಬಡ ಗೇಣಿದಾರರ ರಕ್ಷಣೆಗೆ ಕ್ರಮ ವಹಿಸಬೇಕು, ಅರಣ್ಯ ಭೂಮಿ ಹಕ್ಕು ಪತ್ರಕ್ಕಾಗಿ ಅರಣ್ಯ ಹಕ್ಕು ಮಾನ್ಯತಾ ಕಾಯ್ದೆ ತಿದ್ದುಪಡಿ ತರಬೇಕು, ಗುತ್ತಿಗೆ ಮತ್ತು ಕಂಪೆನಿ ಕೃಷಿ ಬೇಡವೇ ಬೇಡ, ಬಲವಂತದ ಭೂ ಸ್ವಾಧೀನ ಬೇಡವೇ ಬೇಡ.







