ಎತ್ತಿನಹೊಳೆ ಯೋಜನೆ ಕುರಿತ ವಿಚಾರಣೆಗೆ ಹಸಿರುಪೀಠದಿಂದ ದಿನ ನಿಗದಿ

ಮಂಗಳೂರು, ನ.17: ಎತ್ತಿನಹೊಳೆ ಯೋಜನೆ ಕುರಿತಂತೆ ಡಿಸೆಂಬರ್ 2ರಂದು ಹಸಿರುಪೀಠದಲ್ಲಿ ವಿಚಾರಣೆಗೆ ದಿನ ನಿಗದಿ ಮಾಡಿದ್ದಾರೆ ಎಂದು ನೇತ್ರಾವತಿ ರಕ್ಷಣಾ ಸಂಯುಕ್ತ ಸಮಿತಿಯ ಅಧ್ಯಕ್ಷ ವಿಜಯಕುಮಾರ್ ಶೆಟ್ಟಿ ಸುದ್ದಿಗೊಷ್ಠಿಯಲ್ಲಿಂದು ತಿಳಿಸಿದ್ದಾರೆ.
ನೇತ್ರಾವತಿ ರಕ್ಷಣಾ ಸಂಯುಕ್ತ ಸಮಿತಿಯ ವತಿಯಿಂದ ಎತ್ತಿನಹೊಳೆ ಯೋಜನೆಯ ವಿರುದ್ಧ ರಾಷ್ಟ್ರೀಯ ಹಸಿರು ಪೀಠದಲ್ಲಿ ಸಮಿತಿಯ ಸದಸ್ಯರಾದ ಪುರುಷೋತ್ತಮ ಚಿತ್ರಾಪುರ ಸಲ್ಲಿಸಿರುವ ಅರ್ಜಿಯನ್ನು ಚೆನ್ನೈಯಲ್ಲಿರುವ ನ್ಯಾಯಪೀಠದ ಅಧ್ಯಕ್ಷ ನ್ಯಾಯಮೂರ್ತಿ ಸ್ವತಂತ್ರಕುಮಾರ್ ನವೆಂಬರ್ 11ರಂದು ವಿಚಾರಣೆ ಕೈ ಗೆತ್ತಿಕೊಂಡಿದ್ದರು. ಈ ಸಂದರ್ಭದಲ್ಲಿ ಅರ್ಜಿದಾರರ ಪರವಾಗಿ ನ್ಯಾಯವಾದಿ ಎಂ.ಸಿ.ಮೆಹ್ತಾ ನೇತ್ರಾವತಿ ಮತ್ತು ಎತ್ತಿನಹೊಳೆ ಯೋಜನೆಗಳು ಕುಡಿಯುವ ನೀರಿನ ನೆಪದಲ್ಲಿ ನದಿ ನೀರನ್ನು ಪೂರ್ವಕ್ಕೆ ತಿರುಗಿಸಿ ನದಿ ಪಾತ್ರವನ್ನು ಹಾಳುಗೆಡಹುವ ದಿಕ್ಕಿನಲ್ಲಿ ಮುಂದುವರಿದಿದೆ. ಇದರಿಂದ ಪಶ್ಚಿಮಘಟ್ಟ ಹಾಗೂ ನೇತ್ರಾವತಿ ನದಿ ಹರಿವಿಗೂ ತೊಂದರೆಯಾಗಲಿದೆ ಎಂದು ಒತ್ತಿ ಹೇಳಿದರು. ಈ ಹಿನ್ನೆಲೆಯಲ್ಲಿ ವಿಚಾರಣೆಯನ್ನು ಡಿಸೆಂಬರ್ 2ಕ್ಕೆ ನಿಗದಿಪಡಿಸಿದ್ದಾರೆ. ರಾಷ್ಟ್ರೀಯ ಹಸಿರುಪೀಠವು ಸೆಂಟ್ರಲ್ ಎಂಪವರ್ ಕಮಿಟಿಯ ಆಧಾರದಲ್ಲಿ ರಾಜ್ಯ ಸರಕಾರ ಮೂರು ತಿಂಗಳೊಳಗೆ ಅರಣ್ಯ ಹಾಗೂ ಘೋಷಿತ ಅರಣ್ಯ ಪ್ರದೇಶದ ಬಗ್ಗೆ ಪ್ರಕಟನೆೆ ಹೊರಡಿಸಬೇಕು, ಪರಿಸರ ಕಾಯ್ದೆ-1980ರ ಅಡಿಯಲ್ಲಿ ಕೇಂದ್ರದ ಕರಡು ಪ್ರಕಟನೆಗೆ ರಾಜ್ಯ ಸರಕಾರ ಎರಡು ತಿಂಗಳೊಳಗೆ ತಮ್ಮ ಆಕ್ಷೇಪವನ್ನು ಸಲ್ಲಿಸಸಬೇಕು.ಕೇಂದ್ರ ಅರಣ್ಯ ಮತ್ತು ಪರಿಸರ ಖಾತೆಯ ಮೂಲಕ ರಾಜ್ಯಗಳ ಮುಖ್ಯ ಕಾರ್ಯದರ್ಶಿಯವರಿಗೆ ಒಂದು ವಾರದೊಳಗೆ ಹಸಿರುಪೀಠದ ಆದೇಶವನ್ನು ತಿಳಿಸಬೇಕು. ಪಶ್ಚಿಮ ಘಟ್ಟದ ಧಾರಣ ಸಾಮರ್ಥ್ಯದ ಬಗ್ಗೆ ಕೇಂದ್ರ ಅರಣ್ಯ ಮತ್ತು ಪರಿಸರ ಖಾತೆಯ ಕಾರ್ಯದರ್ಶಿ ಹಸಿರು ಪೀಠಕ್ಕೆ ವರದಿ ನೀಡಬೇಕು ಮತ್ತು ಅದರ ಪ್ರತಿಯನ್ನು ರಾಜ್ಯ ಸರಕಾರಕ್ಕೆ ನೀಡಬೇಕು ಎಂದು ಹಸಿರು ಪೀಠ ಆದೇಶಿಸಿದೆ. ಈ ಹಿನ್ನೆಲೆಯಲ್ಲಿ ಡಿ.12ರಂದು ಮೂಲ ಅರ್ಜಿಯ ವಿಚಾರಣೆ ನಡೆಯಲಿದೆ ಎಂದು ವಿಜಯಕುಮಾರ್ ಶೆಟ್ಟಿ ತಿಳಿಸಿದ್ದಾರೆ.
ಸುದ್ದಿಗೊಷ್ಠಿಯಲ್ಲಿ ಮಾಜಿ ಉಪಮೇಯರ್ ಪುರುಷೋತ್ತಮ ಚಿತ್ರಾಪುರ, ಎಸ್.ಜಿ.ಮಯ್ಯ, ಯೋಗೀಶ್ ಜಪ್ಪು ಜಗದೀಶ್ ಅಧಿಕಾರಿ, ಸತ್ಯಜಿತ್ ಸುರತ್ಕಲ್ ಮೊದಲಾದವರು ಉಪಸ್ಥಿತರಿದ್ದರು.





