ಹೊಸ 500 ರೂ.ನೋಟಿನ ಬಿಡುಗಡೆ ಕುರಿತ ವಿವರಗಳನ್ನು ಬಹಿರಂಗಗೊಳಿಸುವಂತಿಲ್ಲ: ಆರ್‌ಬಿಐ

ಚೆನ್ನೈ,ನ.18: ಭದ್ರತಾ ಕಾರಣಗಳಿಂದಾಗಿ ವಿತರಣೆಗಾಗಿ ಬ್ಯಾಂಕುಗಳಿಗೆ ಹೊಸ 500 ರೂ.ನೋಟುಗಳ ಬಿಡುಗಡೆಗೆ ಸಂಬಂಧಿಸಿದ ವಿವರಗಳನ್ನು ತಾನು ಬಹಿರಂಗ ಗೊಳಿಸುವಂತಿಲ್ಲ ಎಂದು ಆರ್‌ಇಐ ಇಂದು ಮದ್ರಾಸ್ ಉಚ್ಚ ನ್ಯಾಯಾಲಯಕ್ಕೆ ತಿಳಿಸಿತು.
ನೋಟು ನಿಷೇಧಕ್ಕೆ ಸಂಬಂಧಿಸಿದಂತೆ ಆರ್‌ಬಿಐ ನಿರ್ದೇಶಗಳನ್ನು ಪಾಲಿಸುವಂತೆ ಮತ್ತು ಸೊಸೈಟಿಗಳಲ್ಲಿ ನಗದು ಹಿಂಪಡೆಯುವಿಕೆ ಹಾಗೂ ಹಳೆಯ ನೋಟುಗಳ ವಿನಿಮಯಕ್ಕೆ ಅನುಮತಿ ನೀಡುವಂತೆ ಸಹಕಾರಿ ಸಂಘಗಳ ರಿಜಿಸ್ಟ್ರಾರ್‌ಗೆ ನಿರ್ದೇಶವನ್ನು ನೀಡುವಂತೆ ಕೋರಿ ಸಲ್ಲಿಸಲಾಗಿರುವ ಅರ್ಜಿಗೆ ಸಂಬಂಧಿಸಿದಂತೆ ಆರ್‌ಬಿಐ ವಕೀಲರು ಈ ನಿವೇದನೆಯನ್ನು ಮಾಡಿಕೊಂಡರು. ಅವರ ಹೇಳಿಕೆಯನ್ನು ದಾಖಲಿಸಿಕೊಂಡ ಬಳಿಕ ನ್ಯಾಯಾಲಯವು ಮುಂದಿನ ವಿಚಾರಣೆಯನ್ನು ನ.28ಕ್ಕೆ ನಿಗದಿಗೊಳಿಸಿತು.
ನ.16ರಂದು ಇಂದಿಗೆ ವಿಚಾರಣೆಯನ್ನು ಮುಂದೂಡಿದ್ದ ಉಚ್ಚ ನ್ಯಾಯಾಲಯವು, ನೋಟು ನಿಷೇಧದ ಬಳಿಕ ತಲೆದೋರಿರುವ ನಗದು ಕೊರತೆಯನ್ನು ತಗ್ಗಿಸಲು ಹೊಸ 500 ರೂ.ನೋಟುಗಳು ತಮಿಳುನಾಡಿನಲ್ಲಿ ಎಂದು ಲಭ್ಯವಾಗಲಿವೆ ಎಂದು ತಿಳಿಯಲು ಬಯಸಿತ್ತು.
ಮೇ.16ರಂದು ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ನಡೆದಿದ್ದ ಚುನಾವಣೆಗಳಿಗೆ ಎರಡು ದಿನಗಳ ಮುನ್ನ ಚುನಾವಣಾಧಿಕಾರಿಗಳು 500 ಕೋ.ರೂ.ಗಳನ್ನು ವಶಪಡಿಸಿಕೊಂಡಿದ್ದ ಹಿನ್ನೆಲೆಯಲ್ಲಿ ಕರೆನ್ಸಿ ನೋಟುಗಳ ಸಾಗಾಣಿಕೆಯಲ್ಲಿ ತಾನು ತೊಂದರೆಗಳನ್ನು ಎದುರಿಸುತ್ತಿದ್ದೇನೆ ಎಂದು ಆರ್‌ಬಿಐ ಆಗ ತಿಳಿಸಿತ್ತು.







