ಯಕ್ಷದ್ರುವ ಪಟ್ಲ ಪೌಂಡೇಶನ್ ಬೆಳ್ತಂಗಡಿ ತಾಲೂಕು ಘಟಕ ಉದ್ಘಾಟನೆ

ಬೆಳ್ತಂಗಡಿ,ನ.18: ಪಟ್ಲ ಪೌಂಡೇಶನ್ ಯಾವೂದೇ ಭೇಧವಿಲ್ಲದೆ ಆಸಕ್ತ ಕಲಾವಿದರಿಗೆ ನೆರವು ನೀಡುತ್ತಿದ್ದು, ಕಳೆದ 14 ತಿಂಗಳಿನಲ್ಲಿ ಅಂದಾಜು 45 ಲಕ್ಷ ರು.ಗಳನ್ನು ಆಸಕ್ತ ಕಲಾವಿದರಿಗೆ ನೀಡುವ ಮೂಲಕ ಕಲಾವಿದರಿಗೆ ನೆರವಾಗಿದೆ ಎಂದು ಯಕ್ಷದ್ರುವ ಪಟ್ಲ ಪೌಂಡೇಶನ್ ಟ್ರಸ್ಟ್ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಹೇಳಿದ್ದಾರೆ.
ಅವರು ಉಜಿರೆ ಶ್ರೀ ಜನಾರ್ದನಸ್ವಾಮಿ ದೇವಸ್ಥಾನದ ರಥಬೀದಿಯಲ್ಲಿ ಯಕ್ಷದ್ರುವ ಪಟ್ಲ ಪೌಂಡೇಶನ್ ಬೆಳ್ತಂಗಡಿ ತಾಲೂಕು ಘಟಕದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಗುರುವಾಯನಕೆರೆ ವಿಜಯ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ ಅಧ್ಯಕ್ಷ ಎಸ್.ಜಯರಾಮ ಶೆಟ್ಟಿ ಬೆಳ್ತಂಗಡಿ ಘಟಕವನ್ನು ಉದ್ಘಾಟಿಸಿದರು. ಉಜಿರೆ ಶ್ರೀ ಜನಾರ್ದನಸ್ವಾಮಿ ದೇವಸ್ಥಾನದ ಆಡಳಿತ ಮುಕ್ತೇಸರ ಯು. ವಿಜಯರಾಘವ ಪಡೆ್ವಟ್ನಾಯ ಅಧ್ಯಕ್ಷತೆ ವಹಿಸಿದ್ದರು.
ಹಿರಿಯ ಹಾಸ್ಯ ಕಲಾವಿದ ಜಯರಾಮ ಆಚಾರ್ಯ ಬಂಟ್ವಾಳ ಅವರನ್ನು ಸನ್ಮಾನಿಸಲಾಯಿತು. ಹಿರಿಯ ಯಕ್ಷಗಾನ ಭಾಗವತ ಬಲಿಪ ನಾರಾಯಣ ಭಾಗವತ, ಯಕ್ಷದ್ರುವ ಪಟ್ಲ ಪೌಂಡೇಶನ್ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಭಂಡಾರಿ, ಕೋಶಾಧಿಕಾರಿ ಸಂದೇಶ್ ರೈ ಇದ್ದರು.
ಬೆಳ್ತಂಗಡಿ ತಾಲೂಕು ಘಟಕದ ಸಂಚಾಲಕ ರಘುರಾಮ ಶೆಟ್ಟಿ ಸ್ವಾಗತಿಸಿದರು. ಅಧ್ಯಕ್ಷ ಬಿ. ಭುಜಬಲಿ ವಂದಿಸಿದರು. ಕಲಾವಿದ ಉಜಿರೆ ಅಶೋಕ್ ಭಟ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಯಕ್ಷಗಾನ ಪರಂಪರೆಯ ಪ್ರದರ್ಶನ ಪರ್ವ ಯಕ್ಷರೂಪಕದಲ್ಲಿ ಶೂರ್ಪನಕಾ ವಿವಾಹ, ವಸಂತೋತ್ಸವ, ವನವಿಹಾರ, ಕರ್ಣಾರ್ಜುನ ಪ್ರಯೋಗ ಪ್ರದರ್ಶನ ನಡೆಯಿತು.







