ನಾಗಪುರದಲ್ಲಿ ಎಸ್ಬಿಐ ಕ್ಯಾಶಿಯರ್ ಹೃದಯಾಘಾತಕ್ಕೆ ಬಲಿ
ನೋಟು ನಿಷೇಧ ಒತ್ತಡ

ಸಾಂದರ್ಭಿಕ ಚಿತ್ರ
ನಾಗಪುರ, ನ.18: ನೋಟು ನಿಷೇಧ ಗೊಂದಲವು ಪ್ರಾಣ ಹರಣವನ್ನು ಮುಂದುವರಿಸಿದೆ. ನೋಟು ನಿಷೇಧ ಜಾರಿಗೆ ಬಂದ 10ನೆ ದಿನ ಇನ್ನೊಂದು ಸಾವು ವರದಿಯಾಗಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ (ಎಸ್ಬಿಐ) ಕ್ಯಾಶಿಯರ್ ಆರ್.ವಿ.ರಾಜೇಶ್ ಎಂಬವರು ನಾಗಪುರದಲ್ಲಿ ಕೆಲಸ ಮಾಡುತ್ತಿದ್ದಾಗಲೇ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.
ಅವರು ನಗರದ ಅಂಬಾಜರಿ ಶಾಖೆಯಲ್ಲಿ ಕ್ಯಾಶಿಯರ್ ಆಗಿದ್ದರೆಂದು ಎಎನ್ಐ ವರದಿ ಮಾಡಿದೆ.
ನೋಟು ನಿಷೇಧ ಸಾವುಗಳ ಅಧಿಕೃತ ಸಂಖ್ಯೆ ಇದುವರೆಗೆ ಲಭ್ಯವಿಲ್ಲವಾದರೂ. ಭಾರತಾದ್ಯಂತ ಕವಿಷ್ಠ 55 ಮಂದಿ ಮೃತರಾಗಿದ್ದಾರೆಂದು ಹಫಿಂಗ್ಟನ್ ಪೋಸ್ಟ್ ವೆಬ್ ಪೋರ್ಟಲ್ ಪ್ರತಿಪಾದಿಸಿದೆ. ಅವರಲ್ಲಿ ಬ್ಯಾಂಕ್ಗಳಲ್ಲಿ ಸರತಿಯ ಸಾಲಿನಲ್ಲಿ ನಿಂತಿದ್ದ ವೃದ್ಧರೇ ಹೆಚ್ಚಿನವರಾಗಿದ್ದಾರೆ. ಮುಖ್ಯವಾಗಿ ಗೃಹಿಣಿಯರ ಸಹಿತ ಕೆಲವು ಆತ್ಮಹತ್ಯೆಗಳು ಸಹ ವರದಿಯಾಗಿವೆಯೆಂದು ಅದು ಹೇಳಿದೆ.
ನೋಟು ರದ್ದತಿಯ ಪರಿಣಾಮವಾಗಿ ದೇಶಾದ್ಯಂತ ಆತ್ಮಹತ್ಯೆ, ಹೃದಯಾ ಸ್ತಂಭನ ಹಾಗೂ ಆಸ್ಪತ್ರೆಗಳಲ್ಲಿ ಸೇರಿದಂತೆ ಕನಿಷ್ಠ 42 ಮಂದಿ ಅಸುನೀಗಿದ್ದಾರೆಂದು ಎಎನ್ಐ ಗುರುವಾರ ವರದಿ ಮಾಡಿತ್ತು.





