ಉಜಿರೆ: ಪದವಿ ಪೂರ್ವ ಕಾಲೇಜುಗಳ ರಾಜ್ಯ ಮಟ್ಟದ ಬಾಲಕ ಬಾಲಕಿಯರ ವಾಲಿಬಾಲ್ ಪಂದ್ಯಾಟ

ಬೆಳ್ತಂಗಡಿ,ನ.18; ಸೋಲು-ಗೆಲುವಿನ ಬಗ್ಗೆ ಚಿಂತಿಸದೆ ಕ್ರೀಡಾ ಸ್ಪೂರ್ತಿಯಿಂದ ಸ್ಪರ್ಧೆಯಲ್ಲಿ ಕ್ರೀಡಾಳುಗಳು ಭಾಗವಹಿಸಬೇಕು ಎಂದು ಧರ್ಮಸ್ಥಳದ ಡಿ. ಹರ್ಷೇಂದ್ರ ಕುಮಾರ್ ಹೇಳಿದರು.
ಅವರು ಉಜಿರೆಯಲ್ಲಿ ರತ್ನವರ್ಮ ಹೆಗ್ಗಡೆ ಕ್ರೀಡಾಂಗಣದಲ್ಲಿ ಶುಕ್ರವಾರ ಪದವಿ ಪೂರ್ವ ಕಾಲೇಜುಗಳ ರಾಜ್ಯ ಮಟ್ಟದ ಬಾಲಕ ಬಾಲಕಿಯರ ವಾಲಿಬಾಲ್ ಪಂದ್ಯಾಟವನ್ನು ಉದ್ಘಾಟಿಸಿ ಮಾತನಾಡಿದರು.
ಎಸ್.ಡಿ.ಎಂ. ಕ್ರೀಡಾ ಸಂಘದ ಮೂಲಕ ಪ್ರತಿಭಾವಂತ ಕ್ರೀಡಾಪಟುಗಳಿಗೆ ಉಚಿತ ಊಟ-ವಸತಿಯೊಂದಿಗೆ ಸಮವಸ್ತ್ರ ಹಾಗೂ ತಜ್ಞರಿಂದ ತರಬೇತಿ ನೀಡಿ ಪ್ರೋತ್ಸಾಹಿಸಲಾಗುತ್ತಿದೆ 170 ಕ್ರೀಡಾಪಟುಗಳಿಗೆ ಪ್ರಸಕ್ತ ವರ್ಷ ಕ್ರೀಡಾ ತರಬೇತಿಯೊಂದಿಗೆ ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳಲ್ಲಿ ಉಚಿತ ಶಿಕ್ಷಣ ನೀಡಲಾಗುತ್ತಿದೆ. ಅನೇಕ ರಾಷ್ಟ್ರಮಟ್ಟ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ವಿಜೇತರಾಗಿ ಕೀರ್ತಿ ತಂದಿದ್ದಾರೆ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು.
ಜಿಲ್ಲಾ ಪಂಚಾಯತು ಸದಸ್ಯ ಕೊರಗಪ್ಪನ್ಯಾಕ ಉಜಿರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೀಧರ ಪೂಜಾರಿ ಮತ್ತು ಮಂಗಳೂರಿನ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಕೆ. ಆರ್. ತಿಮ್ಮಯ್ಯ ಶುಭಾಶಂಸನೆ ಮಾಡಿದರು.
ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಬಿ. ಯಶೋವರ್ಮ ಅಧ್ಯಕ್ಷತೆ ವಹಿಸಿದರು.
ಎಸ್.ಡಿ.ಎಂ. ಪದವಿಪೂರ್ವ ಕಾಲೇಜಿನ ಕ್ರೀಡಾ ತಾರೆ ಯಶೋದಾ ಪ್ರತಿಜ್ಞಾ ವಿಧಿ ಬೋಧಿಸಿದರು.
ಎಸ್.ಡಿ.ಎಂ. ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರೊ. ದಿನೇಶ್ ಚೌಟ ಸ್ವಾಗತಿಸಿದರು. ದೈಹಿಕ ಶಿಕ್ಷಣ ನಿರ್ದೇಶಕ ಸಂದೇಶ್ ಪೂಂಜ ಧನ್ಯವಾದವಿತ್ತರು. ಡಾ. ಬಿ.ಎ. ಕುಮಾರ್ ಹೆಗ್ಡೆ ಕಾರ್ಯಕ್ರಮ ನಿರ್ವಹಿಸಿದರು.







