ಪ್ರಧಾನಿ ಮೋದಿಯಿಂದ ಅಮೆರಿಕ ಅನುಕರಣೆ: ಐವನ್ ಲೇವಡಿ

ಮಂಗಳೂರು, ನ.18: ಹೊಸದಾಗಿ ಬಂದಿರುವ 2000 ರೂ. ಮುಖಬೆಲೆಯ ನೋಟು ಮೇಲ್ನೋಟಕ್ಕೆ ಅಮೆರಿಕನ್ ಡಾಲರ್‌ನಂತಿದೆ. ಪ್ರತಿ ವಿಚಾರಗಳಲ್ಲಿಯೂ ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕವನ್ನು ಅನುಕರಣೆ ಮಾಡುತ್ತಿದ್ದಾರೆ ಎಂದು ವಿಧಾನ ಪರಿಷತ್‌ನ ಮುಖ್ಯ ಸಚೇತಕ ಐವನ್ ಡಿಸೋಜಾ ಲೇವಡಿ ಮಾಡಿದ್ದಾರೆ.
ಮನಪಾ ಕಟ್ಟಡದಲ್ಲಿರುವ ತಮ್ಮ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ಜನರತ್ತ ಕೈ ಬೀಸುವುದು, ಮಾತನಾಡುವ ಶೈಲಿಯಲ್ಲಿಯೂ ಅಮೆರಿಕವನ್ನೇ ಅನುಕರಿಸುತ್ತಿದ್ದಾರೆ. ಮೋದಿಯವರ ನಡೆ ಅಮೆರಿಕದ ಅಧ್ಯಕ್ಷ ಟ್ರಂಪ್ ಅವರ ಸರ್ವಾಧಿಕಾರಿ ಧೋರಣೆಯಂತಿದೆ ಎಂದು ಟೀಕಿಸಿದರು.
500, 1000 ರೂ. ನೋಟು ರದ್ದತಿಯಿಂದಾಗಿ ಜನಸಾಮಾನ್ಯರಿಗೆ, ಕೂಲಿ ಕಾರ್ಮಿಕರಿಗೆ ಸಮಸ್ಯೆಯಾಗುತ್ತಿದೆ. ಈಗಾಗಲೇ ಮಹಾರಾಷ್ಟ್ರ ಎಪಿಎಂಸಿ ಚುನಾವಣೆ, ಊಂಛ್‌ನ ಸ್ಥಳೀಯ ಸಂಸ್ಥೆಗಳ ಚುನಾವಣೆ, ಗುಜರಾತ್ ಪುರಸಭೆ ಚುನಾವಣೆಗಳಲ್ಲಿ ಬಿಜೆಪಿ ತೀವ್ರ ಹಿನ್ನಡೆ ಅನುಭವಿಸಿದೆ. ಹೀಗೇ ಮುಂದುವರಿದಲ್ಲಿ ಸ್ವಚ್ಛ ಭಾರತದ ಬದಲಾಗಿ ಸ್ವಚ್ಛ ಬಿಜೆಪಿ ಆಗುವ ದಿನ ದೂರವಿಲ್ಲ ಎಂದರು.
ದೇಶದ ಎಲ್ಲಾ ಸಂಸದರು ಎಟಿಎಂಗಳಿಗೆ ತೆರಳಿ ಜನರಿಗೆ ತೊಂದರೆಯಾಗದಂತೆ ಹಣ ನೀಡಬೇಕು ಎಂದು ಒತ್ತಾಯಿಸಿದ ಅವರು, ಜನರಿಗಾಗುತ್ತಿರುವ ತೊಂದರೆಯನ್ನು ನಿವಾರಿಸಲು ಆಗ್ರಹಿಸಿ ಸೋಮವಾರದಿಂದ ಆರಂಭವಾಗುವ ವಿಧಾನ ಪರಿಷತ್ ಕಲಾಪದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಕಾಂಗ್ರೆಸ್ ಮುಖಂಡರಾದ ಇಬ್ರಾಹಿಂ ಕೋಡಿಜಾಲ್, ನಾಗೇಂದ್ರಕುಮಾರ್, ಅಮೃತ್ ಕದ್ರಿ, ನಝೀರ್ ಬಜಾಲ್ ಮೊದಲಾದವರು ಉಪಸ್ಥಿತರಿದ್ದರು.







