ಸೋದರ ಭಾಷೆಗಳ ಅಭಿವೃದ್ಧಿಯ ಬಗ್ಗೆ ಅರಿತರೆ ಕನ್ನಡದ ಅಭಿವೃದ್ಧಿ ಸಾಧ್ಯ
"ಸೋದರ ಭಾಷೆಗಳು : ನಾಳಿನ ನಿರ್ಮಾಣ" ವಿಚಾರಗೋಷ್ಠಿಯಲ್ಲಿ ಡಾ.ತಮಿಳ್ ಸೆಲ್ವಿ ಅಭಿಪ್ರಾಯ

ಮೂಡುಬಿದಿರೆ (ರತ್ನಾಕರವರ್ಣಿ ವೇದಿಕೆ),ನ.18 : ಕನ್ನಡ ನಾಡಿನ ಸಾಹಿತ್ಯ ಸಂಸ್ಕೃತಿಯನ್ನು ತಿಳಿದುಕೊಳ್ಳುವುದು ಕನ್ನಡಿಗರ ಆದ್ಯ ಕರ್ತವ್ಯ. ನಮ್ಮ ಸಂಸ್ಕೃತಿ ಭಾಷೆಗಳ ನಾಳಿನ ಉಳಿವಿಗೆ ನಾವು ನಮ್ಮ ಸೋದರ ಭಾಷೆಗಳು ಅವುಗಳ ಅಭಿವೃದ್ಧಿಗಾಗಿ ಯಾವ ಕೆಲಸಗಳನ್ನು ಮಾಡುತ್ತಿದ್ದಾರೆ, ಹೇಗೆ ಮಾಡುತ್ತಿದ್ದಾರೆ, ಯಾವ ರೀತಿಯ ಕಲ್ಪನೆಗಳನ್ನು ಹೊಂದಿದ್ದಾರೆಂಬ ಭಾವನೆಗಳನ್ನು ಅರಿತುಕೊಂಡರೆ ಕನ್ನಡ ಭಾಷೆಯ ಅಭಿವೃದ್ಧಿ ಸಾಧ್ಯ ಎಂದು ಡಾ.ತಮಿಳ್ ಸೆಲ್ವಿ ಅಭಿಪ್ರಾಯಪಟ್ಟರು.
ಅವರು ಆಳ್ವಾಸ್ ನುಡಿಸಿರಿಯ ಮೊದಲ ದಿನದ ಮೊದಲ ವಿಚಾರಗೋಷ್ಠಿ "ಸೋದರ ಭಾಷೆಗಳು : ನಾಳಿನ ನಿರ್ಮಾಣ" ಎಂಬ ವಿಷಯದಲ್ಲಿ ತಮಿಳು ಭಾಷೆಯ ಕುರಿತು ಮಾತನಾಡಿದರು. ತಮಿಳುನಾಡಿನಲ್ಲಿ ಮನೆ ಭಾಷೆಗೆ ಹೆಚ್ಚಿನ ಆದ್ಯತೆ ಇದೆ. ತಮಿಳು ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ಸಿಕ್ಕಿದ್ದು ಕಳೆದ 10-15 ವರ್ಷಗಳ ಹಿಂದೆ ಆದರೆ ಈ ಶಾಸ್ತ್ರೀಯ ಸ್ಥಾನಮಾನಕ್ಕಾಗಿ ಸ್ವಾತಂತ್ರ್ಯ ಪೂರ್ವದಲ್ಲಿಯೇ ಚಳವಳಿಯನ್ನು ಮಾಡಿದ್ದರು ಮತ್ತು ಹೋರಾಟದ ಸಿದ್ಧತೆಯನ್ನು ಕಲ್ಪನೆಯೊಳಗೆ ತಂದಿದ್ದರು.
ತಮಿಳಿನ ಸಾಹಿತ್ಯ ಕೃತಿಗಳಲ್ಲಿ ಏನು ಸತ್ವವಿದೆ ಹಾಗೂ ಹೇಗೆ ಭಿನ್ನವಾಗಿದೆ ಎಂಬುದನ್ನು ರಾಷ್ಟ್ರದ ಜನರು ಅರಿಯಲು ತಮಿಳಿನ ಕೃತಿಗಳನ್ನು ಬೇರೆ ಬೇರೆ ಭಾಷೆಗಳಿಗೆ ಅನುವಾದಿಸುವ ಕೆಲಸಗಳು ನಡೆದಿವೆ. ಕನ್ನಡ ಸಾಹಿತ್ಯ ಕೃತಿಗಳನ್ನು ಕನ್ನಡಿಗರು ಮಾತ್ರ ಓದುತ್ತಿದ್ದಾರೆ ಮತ್ತು ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ ಹೊರತು ಬೇರೆ ಭಾಷಿಗರು ಕನ್ನಡದ ಸಾಹಿತ್ಯ ಕೃತಿಗಳನ್ನು ಓದಲು ಅವಕಾಶ ಮಾಡಿಕೊಟ್ಟಿಲ್ಲ. ಕನ್ನಡ ಸಾಹಿತ್ಯಕ್ಕೆ ಶಾಸ್ತ್ರೀಯ ಸ್ಥಾನಮಾನ ಸಿಕ್ಕಿರಬಹುದು ಆದರೆ ಎಷ್ಟು ಜನ ಕನ್ನಡಿಗರು ತಮ್ಮ ಎಷ್ಟು ಕೃತಿಗಳನ್ನು ಬೇರೆ ಭಾಷೆಗಳಿಗೆ ಅನುವಾದಿಸಿದ್ದಾರೆ ಅಥವಾ ಶಾಸ್ತ್ರೀಯ ಸ್ಥಾನಮಾನ ತೆಗೆದುಕೊಂಡ ನಂತರ ಕನ್ನಡ ಭಾಷೆ ಮತ್ತು ಸಾಹಿತ್ಯಕ್ಕಾಗಿ ಯಾವ ಕೆಲಸಗಳನ್ನು ಕೈಗೊಂಡಿದೆ ಎಂದು ಪ್ರಶ್ನಿಸಿದರು.
ತಮಿಳಿನಲ್ಲಿ ಭಾಷೆ ಸಾಹಿತ್ಯ ಸಂಸ್ಕೃತಿಯನ್ನು ಉಳಿಸಿಕೊಳ್ಳಲು ಸರಕಾರಗಳಿಂದಲೇ ಕಡ್ಡಾಯ ಭಾಷೆಗಳ ಕುರಿತು ಸುತ್ತೋಲೆಗಳು ಬರುತ್ತದೆ ಆದರೆ ಕರ್ನಾಟಕದಲ್ಲಿ ಸುತ್ತೋಲೆಗಳು ಬರುವುದೇ ಆಂಗ್ಲಮಾಧ್ಯಮದಲ್ಲಿ ಎಂದು ವಿಷಾಧ ವ್ಯಕ್ತ ಪಡಿಸಿದ ಅವರು ಶಾಲೆಗಳಲ್ಲಿ, ಕಛೇರಿಗಳಲ್ಲಿ, ಸರಕಾರದ ನೆಲೆಗಳಲ್ಲಿ ನಾಡಿನ ಭಾಷೆಯ ಬಗ್ಗೆ ಕಡ್ಡಾಯ ನಿಯಮ ಜಾರಿಗೆ ಬಂದರೆ ಮತ್ತು ತಮಿಳು ಭಾಷೆಗೆ ತಮಿಳುನಾಡಿನಲ್ಲಿ ಸಿಗುತ್ತಿರುವ ಪ್ರೋತ್ಸಾಹ ಕರ್ನಾಟಕದಲ್ಲಿ ಕನ್ನಡಕ್ಕೆ ಸಿಕ್ಕಿದರೆ ಉತ್ತಮ ಕರ್ನಾಟಕ ನಾಳೆಗಳ ನಿರ್ಮಾಣಕ್ಕೆ ಸಹಾಯವಾಗಬಹುದು ಎಂದು ಹೇಳಿದರು.
ಮಲಯಾಳಂ ಭಾಷೆಯ ಬಗ್ಗೆ ಡಾ.ಮೋಹನ ಕುಂಟಾರು ಮಾತನಾಡಿ ಕೇರಳ ರಾಜ್ಯವು ಸಾಕ್ಷರತೆಯನ್ನು ಹೊಂದಿದ ನಾಡು. ಭಾಷೆಗೆ ಕುಂದು ಬರಬಾರದು ಎಂಬ ಹಿನ್ನಲೆಯಲ್ಲಿ ಇಲ್ಲಿ ಖಾಸಗಿ ಶಾಲೆಗಳನ್ನು ತೆರೆಯುವಂತಿಲ್ಲ. ಉದ್ಯೋಗಕ್ಕಾಗಿ ಇಲ್ಲಿ ಇಂಗ್ಲೀಷ್ ಭಾಷೆಯಿದೆ ಹೊರತು ಮನೆ ಭಾಷೆಯಾಗಿ ಮಲಯಾಳಂಕ್ಕೆ ಪ್ರಾಧಾನ್ಯತೆಯನ್ನು ನೀಡಲಾಗುತ್ತಿದೆ. ವಾಚನಾ ಸಂಸ್ಕೃತಿಯ ಪರಂಪರೆ ಇಲ್ಲಿ ಇರುವುದರಿಂದ ಇದು ಭಾಷೆಯ ಬೆಳವಣಿಗೆಗೆ ಕಾರಣವಾಗಿದೆ. ರಾಜ್ಯ ಲೈಬ್ರೆರಿ ಕೌನ್ಸಿಲ್ 7800 ಗ್ರಂಥಾಲಯಗಳ ಮೂಲಕ ಓದುಗರ ವಲಯವನ್ನು ವಿಸ್ತರಿಸುವ ಕೆಲಸಗಳನ್ನು ಮಾಡುತ್ತಿರುವುದು ಕೂಡಾ ಪೂರಕ ವ್ಯವಸ್ಥೆಯಾಗಿದೆ. ಶಾಲಾ ಕಾಲೇಜುಗಳಲ್ಲಿ 5 ದಶಕಗಳಿಂದ ನಡೆಸಿಕೊಂಡು ಬರುತ್ತಿರುವ ಕಲೋತ್ಸವಗಳ ಮೂಲಕ ಕೇರಳದ ಕಲೆಗಳಿಗೆ ವಿಶ್ವ ಮಾನ್ಯತೆ ಸಿಗುವುದಕ್ಕೆ ಕಾರಣವಾಗಿದೆ, ಇಲ್ಲಿ ಪತ್ರಿಕಾ ಮಾಧ್ಯಮಗಳು ಕೂಡಾ ಭಾಷೆಯ ಉಳಿವಿಗಾಗಿ ಶ್ರಮಿಸುತ್ತಿವೆ. ಭಾಷಾ ವಿಚಾರಗಳು ಬಂದಾಗ ಕೇರಳದ ಜನಪ್ರತಿನಿಧಿಗಳು ಪಕ್ಷಭೇಧ ಮರೆತು ಒಂದಾಗುತ್ತಿರುವ ಬಗೆಗಿನ ನಿದರ್ಶನಗಳನ್ನು ನೀಡುವುದರ ಜೊತೆಗೆ ಕರ್ನಾಟಕದಲ್ಲೂ ಇಂತಹ ಪ್ರಯತ್ನಗಳು ಹೆಚ್ಚಾಗಬೇಕಾದ ಅಗತ್ಯವಿದೆ ಎಂದು ಹೇಳಿದರು.
ಪ್ರೊ.ಕಿಕ್ಕೇರಿ ನಾರಾಯಣ್ ಕನ್ನಡದ ಅಭಿವೃದ್ಧಿಯ ಬಗ್ಗೆ ಮಾತನಾಡಿ ಭಾಷೆ ಎಂದರೆ ಬರೇ ಸಾಹಿತ್ಯವಲ್ಲ. ಕೇವಲ ಸಾಹಿತ್ಯದಿಂದ ಮಾತ್ರ ಭಾಷೆ ಅಭಿವೃದ್ಧಿಯಾಗಲು ಸಾಧ್ಯವಿಲ್ಲ. ಬೇರೆ ಭಾಷೆಗೂ ನಮ್ಮ ಭಾಷೆಗಳಿಗೂ ಒಂದಕ್ಕೊಂದು ಸಂಬಂಧವಿದೆ ಎಂಬುದನ್ನು ಮರೆಯಬಾರದು.ಕೊಡುಕೊಳ್ಳುವಿಕೆಗೆ ತೆರೆದುಕೊಳ್ಳದಿದ್ದರೆ ಭಾಷೆಯ ಅಭಿವೃದ್ಧಿ ಸಾಧ್ಯವಿಲ್ಲ ಎಂದು ಹೇಳಿದರು.
ಸಮ್ಮೇಳನಾಧ್ಯಕ್ಷೆ ಡಾ. ಬಿ.ಎನ್. ಸುಮಿತ್ರಾ ಬಾಯಿ ಅಧ್ಯಕ್ಷತೆಯನ್ನು ವಹಿಸಿದ್ದರು. ಉಪನ್ಯಾಸಕ ಉದಯ ಮಂಜುನಾಥ್ ಕಾರ್ಯಕ್ರಮ ನಿರೂಪಿಸಿದರು.







