‘ಸಾವಿರಾರು ಕೋಟಿ ಖರ್ಚಾದರೂ ಅಭಿವೃದ್ಧಿ ಕಾಣದ ದಲಿತರು’
ಭೂ ರಹಿತ ದಲಿತರಿಂದ ಜೈಲ್ ಭರೋ ಚಳವಳಿ

ಬೆಂಗಳೂರು, ನ.18: ಭೂ ರಹಿತ ದಲಿತರಿಗೆ ಭೂಮಿ ಹಾಗೂ ಹಿತ್ತಲುಸಹಿತ ವಸತಿ ಹಕ್ಕಿಗಾಗಿ ಆಗ್ರಹಿಸಿ ಇಂದು ನಗರದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘ ಮತ್ತು ಭೂಮಿ ಮತ್ತು ನಿವೇಶನ ಹೋರಾಟ ಸಮಿತಿಯ ಸಾವಿರಾರು ಕಾರ್ಯಕರ್ತರು ಜೈಲ್ ಭರೋ ಚಳವಳಿ ನಡೆಸಿದರು.
ನಗರದ ಟೌನ್‌ಹಾಲ್‌ನಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಹಮ್ಮಿಕೊಂಡಿದ್ದ ಜೈಲ್ ಭರೋ ಚಳವಳಿಯಲ್ಲಿ ಸಾವಿರಾರು ಮಂದಿ ರೈತರು ಪಾಲ್ಗೊಂಡು ಕೇಂದ್ರ ರಾಜ್ಯ ಸರಕಾರಗಳ ವಿರುದ್ಧ ಘೊಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಕರ್ನಾಟಕ ಪ್ರಾಂತ ರೈತ ಸಂಘದ ಅಧ್ಯಕ್ಷ ಎನ್.ವೆಂಕಟಾಚಲಯ್ಯ ಮಾತನಾಡಿ, ಉಳುವವನಿಗೆ ಭೂಮಿ ಎಂಬ ಘೋಷಣೆಯನ್ನು ಇಂದಿನ ಸರಕಾರಗಳು ಮರೆತಿವೆ. ಭೂ ಮಾಲಕರನ್ನು ಹೊಸ ಬಂಡವಾಳಶಾಹಿಗಳನ್ನಾಗಿ ರೂಪಿಸಲಾಗುತ್ತಿದೆ. ಆದರೆ ದೇಶದಲ್ಲಿ ಶೇ.70ರಷ್ಟು ದಲಿತರಿಗೆ ವಾಸಿಸಲು ಭೂಮಿಯಿಲ್ಲ. ಈ ತಾರತಮ್ಯ ಕುರಿತು ಹಲವು ವರ್ಷಗಳಿಂದ ಹೋರಾಟ ನಡೆಸಿದರು ಯಾವುದೇ ಪ್ರಯೋಜನಕ್ಕೆ ಬಂದಿಲ್ಲ ಎಂದು ಅಸಹಾಯಕತೆ ತೋಡಿಕೊಂಡರು.
ರಾಜ್ಯ ಸರಕಾರ ದಲಿತರ ಅಭಿವೃದ್ಧಿಗೆ ಎಸ್‌ಸಿಪಿ ಟಿಎಸ್‌ಪಿ ಯೋಜನೆ ಅಡಿ ಸಾವಿರಾರು ಕೋಟಿ ರೂಗಳ ಅನುದಾನ ನೀಡಲಾಗಿದೆ ಎಂದು ಬೊಬ್ಬೆ ಹಾಕುತ್ತಿದೆ. ಆದರೆ ಇದುವರೆಗೂ ದಲಿತರ ಅಭಿವೃದ್ಧಿ ಕಾಣಲಿಲ್ಲ. ಬಗರ್ ಹುಕಂ, ಗೋಮಾಳ, ಅರಣ್ಯ ಭೂಮಿಯಲ್ಲಿ ಕೃಷಿ ಮಾಡುತ್ತಿರುವ ಭೂಮಿಯನ್ನು ಸಕ್ರಮಗೊಳಿಸಲು ಸಲ್ಲಿಸಿರುವ ಅರ್ಜಿಗಳು ಮೂಲೆಯಲ್ಲಿ ದೂಳು ಹಿಡಿದಿವೆ. ಇತ್ತ ಒತ್ತುವರಿ ಹೆಸರಿನಲ್ಲಿ ದಲಿತರ ಭೂಮಿಯನ್ನು ಅಕ್ರಮವಾಗಿ ಕಿತ್ತುಕೊಳ್ಳಲಾಗುತ್ತಿದೆ. ಇದೇನಾ ಅಭಿವೃದ್ಧಿ ಎಂದರೆ ಎಂದು ಪ್ರಶ್ನಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ವಾಸುತ್ತಿರುವ ದಲಿತರಿಗೆ ನಾಲ್ಕು ಗುಂಟೆ ಹಿತ್ತಲು ಸಹಿತ ವಸತಿ ಕಲ್ಪಿಸಬೇಕು. ದಲಿತ ನೌಕರರ, ಕಾರ್ಮಿಕರಿಗೆ ವಸತಿ ನಿಲಯಗಳನ್ನು ಕಲ್ಪಿಸಬೇಕು. ಟಿಎಸ್‌ಪಿ ಟಿಎಸ್‌ಪಿ ಯೋಜನೆಯ ಅನುದಾನವನ್ನು ಬಳಿಸಿಕೊಂಡು ಭೂರಹಿತ ದಲಿತರಿಗೆ ಕನಿಷ್ಠ ಐದು ಎಕರೆ ಭೂಮಿಯನ್ನು ಒದಗಿಸಬೇಕು ಎಂದು ಸರಕಾರವನ್ನು ಆಗ್ರಹಿಸಿದರು.
ಸಿಐಟಿಯು ಅಧ್ಯಕ್ಷರು ಎಸ್.ವರಲಕ್ಷ್ಮಿ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರಕಾರಗಳು ಬಹುರಾಷ್ಟ್ರೀಯ ಕಂಪನಿಗಳಿಗೆ ನೀಡಲು ಭೂ ಸ್ವಾಧೀನ ಮಾಡಲಾಗುತ್ತಿದೆ ಎಂದು ದೂರಿದ ಅವರು, ಕಂದಾಯ ಇಲಾಖೆಯ 18 ಲಕ್ಷ ಎಕರೆಯನ್ನು ಅರಣ್ಯ ಇಲಾಖೆಯಿಂದ ಹಿಂಪಡೆದು ಬಡ ಸಾಗುವಳಿದಾರರಿಗೆ ಹಂಚಿಕೆ ಮಾಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯ ಬಳಿಕ ಬೇಡಿಕೆಗಳನ್ನು ಈಡೇರಿಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಈ ವೇಳೆ ಕೃಷಿ ಕೂಲಿಕಾರರ ಸಂಘದ ಪ್ರಧಾನ ಕಾರ್ಯದರ್ಶಿ ಚಂದ್ರಪ್ಪ ಹೊಸ್ಕೇರಾ, ಹಮಾಲಿ ಕಾರ್ಮಿಕರ ಫೆಡರೇಷನ್‌ನ ಅಧ್ಯಕ್ಷ ಕೆ.ಮಹಾಂತೇಶ್ ಸೇರಿದಂತೆ ಇತರರು ಇದ್ದರು.







