ನೋಟು ಅಮಾನ್ಯ: ಗೊಬ್ಬರ ಕೊಳ್ಳಲೂ ಹಣವಿಲ್ಲದೆ ರೈತರ ಪರದಾಟ

ಮಹೊಬಾ (ಉತ್ತರಪ್ರದೇಶ), ನ.18: ನೋಟು ಅಮಾನ್ಯಗೊಳಿಸಿದ ದಿನದಿಂದ ನೋಟು ಬದಲಿಸಲು ಜನರು ಬ್ಯಾಂಕ್ ಎದುರು ಹೆಣಗಾಡುತ್ತಿರುವುದು ಸರ್ವೇಸಾಮಾನ್ಯವಾಗಿದೆ. ಆದರೆ ಉತ್ತರಪ್ರದೇಶದ ಈ ರೈತನೋರ್ವ ಪಡುತ್ತಿರುವ ಪಾಡಂತೂ ಯಾರಿಗೂ ಬೇಡ ಎನ್ನುವಂತಾಗಿದೆ. ಈತನ ಹೆಸರು ಬಿಹಾರಿ ದಾಸ್. ಕಳೆದ ಕೆಲ ದಿನಗಳಿಂದ ಮುಂಜಾನೆ ಎದ್ದು 10 ಕಿ.ಮೀ. ದೂರ ನಡೆದು ಬುಂದೇಲ್‌ಖಂಡ್ ನಗರ ತಲುಪಿ ಅಲ್ಲಿರುವ ಬ್ಯಾಂಕ್ ಎದುರು ಅದಾಗಲೇ ಮಾರುದ್ದ ಬೆಳೆದಿರುವ ಸರತಿ ಸಾಲಿನಲ್ಲಿ ಈತ ನಿಲ್ಲುತ್ತಾನೆ. ಆದರೆ ದುರದೃಷ್ಟವೆಂದರೆ ಪ್ರತೀ ಬಾರಿ ಇನ್ನೇನು ಬ್ಯಾಂಕಿನ ಒಳಗೆ ಪ್ರವೇಶಿಸಲು ಅವಕಾಶ ಸಿಕ್ಕಿತು ಎಂಬಷ್ಟರಲ್ಲಿ - ಹಣ ಖಾಲಿಯಾಯಿತು. ನಾಳೆ ಬನ್ನಿ ಎಂದು ಬ್ಯಾಂಕಿನವರು ಘೋಷಿಸಿ ಬಾಗಿಲು ಮುಚ್ಚಿಬಿಡುತ್ತಾರೆ.
ಇಂದೂ ಹಾಗೆಯೇ ಆಯಿತು. ಬೆಳಿಗ್ಗೆ 10ಕ್ಕೇ ಬಿಹಾರಿ ದಾಸ್ ಎಂದಿನಂತೆ ಬ್ಯಾಂಕ್ ಎದುರು ಹಾಜರಾಗಿದ್ದ. ಅದಾಗಲೇ ಸುಮಾರು 400 ಮಂದಿ ಸರತಿ ಸಾಲಿನಲ್ಲಿದ್ದರು. ಅವರಲ್ಲಿ ಹೆಚ್ಚಿನವರು ಬಡ ರೈತರು. ಬ್ಯಾಂಕ್ ಮ್ಯಾನೇಜರ್ ಬಂದಿದ್ದರೂ ಬ್ಯಾಂಕಿನ ಬಾಗಿಲು ತೆರೆದಿರಲಿಲ್ಲ. ಸರಿ, ಜನರಲ್ಲಿ ಗುಸುಗುಸು ಆರಂಭವಾಯಿತು. ಬ್ಯಾಂಕಿನಲ್ಲಿ ಹಣ ಇಲ್ಲವಂತೆ.. ಎಂದರು ಒಬ್ಬರು. ಉಳಿದವರು ಕಂಗಾಲಾಗಿಬಿಟ್ಟರು.
ನಮಗೇನು ಹಣದ ಅಗತ್ಯವೇ ಇಲ್ಲವೇ ಅಥವಾ ನಾವು ಸುಳ್ಳು ಹೇಳುತ್ತಿದ್ದೇವೆಯೇ. ಒಮ್ಮೆ ಹಳ್ಳಿಯತ್ತ ಬಂದು ನೋಡಿ.. ರೈತರು ಪಡುತ್ತಿರುವ ಬವಣೆಯನ್ನು ಕಣ್ಣಾರೆ ನೋಡಿ.. ಎಂದು ರೈತರು ಆಕ್ರೋಶ ವ್ಯಕ್ತಪಡಿಸತೊಡಗಿದರು.
ಕೆಲವೇ ಕ್ಷಣಗಳಲ್ಲಿ ಇವರ ಶಂಕೆ ನಿಜವಾಯಿತು. ಬ್ಯಾಂಕಿನಲ್ಲಿ ಹಣ ಇಲ್ಲ ಎಂದು ಅಧಿಕಾರಿಗಳು ತಿಳಿಸಿ, ಹೇಗಾದರೂ ಮಾಡಿ ಹಣದ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದರು. ದಿನನಿತ್ಯ 13 ಗಂಟೆ ಡ್ಯೂಟಿ ಮಾಡುತ್ತಿದ್ದೇನೆ. ನನಗೆ ಸಾಧ್ಯವಾದಷ್ಟು ಪ್ರಯತ್ನ ಮಾಡುತ್ತಿದ್ದೇನೆ. ಇದಕ್ಕಿಂತ ಹೆಚ್ಚಿಗೆ ಇನ್ನೇನು ಮಾಡಲು ಸಾಧ್ಯ ಎಂದು ಬ್ಯಾಂಕ್‌ನ ಕ್ಯಾಶಿಯರ್ ವಿಕ್ರಾಂತ್ ದುಬೆ ತಮ್ಮ ಅಸಹಾಯಕತೆ ವ್ಯಕ್ತಪಡಿಸಿದರು.
ಮಧ್ಯಾಹ್ನದ ವೇಳೆಗೆ ನೋಟುಗಳನ್ನು ಹೊತ್ತು ತಂದ ವಾಹನ ಬಂದಾಗ ರೈತರು ಖುಷಿಯಾದರು. ಎಷ್ಟು ಹಣ ಇದೆ ಎಂದು ತಿಳಿದಿಲ್ಲ. ಇದ್ದಷ್ಟನ್ನು ತಲಾ 2 ಸಾವಿರದಂತೆ ಹಂಚಲಾಗುವುದು ಎಂದು ಅಧಿಕಾರಿಗಳು ತಿಳಿಸಿದಾಗ ಬಿಹಾರಿ ದಾಸ್ ದೇವರಿಗೆ ಕೈಮುಗಿದ. ಅಂತೂ ಅಪರಾಹ್ನ 2 ಗಂಟೆ ವೇಳೆಗೆ ಬಿಹಾರಿ ದಾಸನ ಕೈಗೆ 2 ಸಾವಿರ ರೂಪಾಯಿಯ ಒಂದು ನೋಟು ಸಿಕ್ಕಿತು. ಈಗ ಹೊಸದೊಂದು ತಲೆಬಿಸಿ ಆರಂಭವಾಯಿತು. ಈ ಎರಡು ಸಾವಿರ ರೂ. ನೋಟಿಗೆ ಚಿಲ್ಲರೆ ಹಣ ಯಾರು ಕೊಡುತ್ತಾರೆ..?







