ಅಮೆರಿಕ: ಭದ್ರತಾ ಸಲಹೆಗಾರ ಹುದ್ದೆಗೆ ಮೈಕಲ್ ಫ್ಲಿನ್ ?

ವಾಶಿಂಗ್ಟನ್, ನ. 18: ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಮಹತ್ವದ ರಾಷ್ಟ್ರೀಯ ಭದ್ರತಾ ಸಲಹೆಗಾರ ಹುದ್ದೆಯನ್ನು ತನ್ನ ವಿವಾದಾಸ್ಪದ ಪ್ರಚಾರ ಸಲಹಾಕಾರ ಮಾಜಿ ಜನರಲ್ ಮೈಕಲ್ ಫ್ಲಿನ್‌ರಿಗೆ ವಹಿಸಲು ಮುಂದಾಗಿದ್ದಾರೆ ಎಂದು ಅಮೆರಿಕದ ಮಾಧ್ಯಮಗಳು ಗುರುವಾರ ವರದಿ ಮಾಡಿವೆ.
ಸೇನಾ ಗುಪ್ತಚರ ಅಧಿಕಾರಿಯಾಗಿದ್ದ 57 ವರ್ಷದ ಫ್ಲಿನ್ ಅಫ್ಘಾನಿಸ್ತಾನ ಮತ್ತು ಇರಾಕ್‌ಗಳಲ್ಲಿನ ಬಂಡುಕೋರ ಜಾಲಗಳ ವಿರುದ್ಧ ಹೋರಾಡಲು ನೆರವಾಗಿದ್ದರು. ಆ ಕಾರಣಕ್ಕಾಗಿ ಅವರು ಅಮೆರಿಕದ ಜನತೆಯ ಗೌರವಕ್ಕೆ ಪಾತ್ರರಾಗಿದ್ದರು. ಆದರೆ, ಬಳಿಕ ರಿಪಬ್ಲಿಕನ್ ಪಕ್ಷದ ಪ್ರಚಾರದಲ್ಲಿ ತೊಡಗಿಸಿಕೊಂಡಿರುವುದಕ್ಕಾಗಿ ವ್ಯಾಪಕ ಟೀಕೆಗೂ ಅವರು ಗುರಿಯಾಗಿದ್ದರು.
ಚುನಾವಣಾ ಪ್ರಚಾರದ ವೇಳೆ ಅವರು ರಾಷ್ಟ್ರೀಯ ಭದ್ರತಾ ವಿಷಯಗಳ ಕುರಿತಂತೆ ಟ್ರಂಪ್‌ರ ಮಹತ್ವದ ಸಲಹಾಕಾರರಾಗಿದ್ದರು. ಈ ಕೊಡುಗೆಯನ್ನು ಫ್ಲಿನ್ ಒಪ್ಪಿಕೊಂಡಿದ್ದಾರೆಯೇ ಎನ್ನುವುದು ತಕ್ಷಣಕ್ಕೆ ತಿಳಿದುಬಂದಿಲ್ಲ. ರಾಷ್ಟ್ರೀಯ ಭದ್ರತಾ ಸಲಹೆಗಾರನಾಗಿ ಅವರು ವಿದೇಶ ನೀತಿಯ ರೂಪಣೆಯಲ್ಲಿ ಮಹತ್ವದ ಪಾತ್ರ ವಹಿಸಲಿದ್ದಾರೆ ಹಾಗೂ ದೇಶ ಎದುರಿಸುತ್ತಿರುವ ಹಲವಾರು ಭದ್ರತಾ ವಿಷಯಗಳಲ್ಲಿ ಅವರು ತನ್ನ ತೀರ್ಮಾನಗಳನ್ನು ನೀಡಲಿದ್ದಾರೆ.





