ಎಟಿಎಂ ವ್ಯವಸ್ಥೆ ಯಥಾಸ್ಥಿತಿಗೆ ಇನ್ನೂ ಎರಡು ವಾರ?

ಹೊಸದಿಲ್ಲಿ, ನ.18: ಹಣ ಪಡೆಯಲು ಬ್ಯಾಂಕ್ ಮತ್ತು ಎಟಿಎಂ ಕೇಂದ್ರಗಳೆದುರು ಜನರ ಪರದಾಟ ಮುಂದುವರಿದಿರುವಂತೆಯೇ, ದೇಶದ ಎಲ್ಲಾ ಎಟಿಎಂ ವ್ಯವಸ್ಥೆಗಳನ್ನು ಮರುಹೊಂದಿಸುವ ಕಾರ್ಯ ಪೂರ್ಣಗೊಳ್ಳಲು ಇನ್ನೂ ಸುಮಾರು 15 ದಿನ ಬೇಕಾಗಬಹುದು ಎಂದು ಬ್ಯಾಂಕ್‌ನ ಅಧಿಕಾರಿಗಳು ತಿಳಿಸಿದ್ದಾರೆ. ನೋಟು ಅಮಾನ್ಯಗೊಳಿಸಿದ ಬಳಿಕ ಸತತ ಒಂಬತ್ತನೆಯ ದಿನವೂ ನೋಟುಗನ್ನು ಬದಲಾಯಿಸಿಕೊಳ್ಳಲು ಜನರು ಸರತಿ ಸಾಲಿನಲ್ಲಿ ನಿಂತಿರುವ ದೃಶ್ಯ ಸಾಮಾನ್ಯವಾಗಿತ್ತು.
ಈ ಮಧ್ಯೆ ಬಹುತೇಕ ಎಟಿಎಂ ಕೇಂದ್ರಗಳು ಕಾರ್ಯನಿರ್ವಹಿಸಿಲ್ಲ ಮತ್ತು ಕಾರ್ಯ ನಿರ್ವಹಿಸಿದ ಎಟಿಎಂಗಳಲ್ಲೂ ಕೆಲವೇ ಹೊತ್ತಿನಲ್ಲಿ ಹಣ ಬರಿದಾಗಿತ್ತು. ಸಂಸದ್ ಭವನದ ಎಟಿಎಂ ಕೇಂದ್ರ, ವಿತ್ತ ಸಚಿವಾಲಯ ಸೇರಿದಂತೆ ಇತರ ಇಲಾಖೆಗಳ ಬಳಿ ಇರುವ ಎಟಿಎಂ ಕೇಂದ್ರಗಳಲ್ಲೂ ಜನರು ಮಾರುದ್ದದ ಸರತಿ ಸಾಲಿನಲ್ಲಿ ನಿಂತಿರುವ ದೃಶ್ಯ ದೇಶದ ಇತರೆಡೆಯಲ್ಲಿ ತಲೆದೋರಿರುವ ಸಮಸ್ಯೆಗೆ ಕೈಗನ್ನಡಿ ಹಿಡಿದಂತಿತ್ತು.
ಬ್ಯಾಂಕ್ ಅಥವಾ ಎಟಿಎಂ ಕೇಂದ್ರಗಳಲ್ಲಿ 2 ಸಾವಿರದ ನೋಟು ದೊರಕುವ ಕಾರಣ ಇದಕ್ಕೆ ಚಿಲ್ಲರೆ ಪಡೆಯುವುದೇ ದೊಡ್ಡ ಸಮಸ್ಯೆಯಾಗಿಬಿಟ್ಟಿದೆ. ಹಾಲು, ತರಕಾರಿ, ಔಷಧಿ ಖರೀದಿಸಲು ತಾಪತ್ರಯ ಪಡಬೇಕಾಗಿದೆ. ತರಕಾರಿ ಅಂಗಡಿಗಳು, ಸಣ್ಣ ಪುಟ್ಟ ಅಂಗಡಿಗಳು, ಡಾಬಾಗಳು ಇವೆಲ್ಲಾ ನಗದು ರೂಪದಲ್ಲಿ ವ್ಯವಹಾರ ನಡೆಸುವ ಕಾರಣ ಅತೀ ಹೆಚ್ಚು ತೊಂದರೆಗೊಳಗಾಗಿವೆ.ಆಸ್ಪತ್ರೆಗೆ ಚಿಕಿತ್ಸೆಗಾಗಿ ಬಂದ ರೋಗಿಗಳು ಮತ್ತವರ ಕುಟುಂಬದವರು ಕಡಿಮೆ ಮುಖಬೆಲೆಯ ನೋಟುಗಳು ಅಲಭ್ಯವಾಗಿರುವ ಕಾರಣ ಔಷಧಿ ಖರೀದಿಸಲು ಹೆಣಗಾಡುವಂತಾಗಿದೆ.







