ಪ್ಲೆಸಿಸ್ ವಿರುದ್ಧ ಚೆಂಡು ವಿರೂಪ ಪ್ರಕರಣ: ಐಸಿಸಿ

ದುಬೈ, ನ.18: ದಕ್ಷಿಣ ಆಫ್ರಿಕ ನಾಯಕ ಎಫ್‌ಡು ಪ್ಲೆಸಿಸ್ ವಿರುದ್ಧ ಚೆಂಡು ವಿರೂಪಗೊಳಿಸಿದ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ) ಶುಕ್ರವಾರ ಹೇಳಿದೆ.
ಆಸ್ಟ್ರೇಲಿಯ ವಿರುದ್ಧ ಹೊಬರ್ಟ್‌ನಲ್ಲಿ ನಡೆದಿದ್ದ ದ್ವಿತೀಯ ಟೆಸ್ಟ್ ಪಂದ್ಯದ ವೇಳೆ ಎಫ್‌ಡು ಪ್ಲೆಸಿಸ್ ಚೆಂಡನ್ನು ವಿರೂಪಗೊಳಿಸುತ್ತಿರುವ ವೀಡಿಯೊ ತುಣುಕನ್ನು ಪರಿಶೀಲಿಸಿದ ಬಳಿಕ ಮುಂದಿನ ಕ್ರಮದ ಬಗ್ಗೆ ನಿರ್ಧರಿಸಲಾಗುವುದು ಎಂದು ಐಸಿಸಿ ಬುಧವಾರ ಘೋಷಿಸಿತ್ತು.
ಚೆಂಡಿನ ರೂಪವನ್ನು ಕೆಡಿಸಿ ನಿಯಮ 42.3ನ್ನು ಉಲ್ಲಂಘಿಸಿರುವ ಆರೋಪಕ್ಕೆ ಸಂಬಂಧಿಸಿ ಐಸಿಸಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡೇವಿಡ್ ರಿಚರ್ಡ್‌ಸನ್ ಮುಂದಿನ ಕ್ರಮಕೈಗೊಳ್ಳಲಿದ್ದಾರೆ. ಡುಪ್ಲೆಸಿಸ್ ತಾನೇನು ತಪ್ಪು ಮಾಡಿಲ್ಲ ಎಂದು ಹೇಳಿದ್ದಾರೆ. ವಿಚಾರಣೆಯ ವಿವರಗಳನ್ನು ಆದಷ್ಟು ಬೇಗನೆ ಪ್ರಕಟಿಸಲಾಗುವುದು ಎಂದು ಐಸಿಸಿ ಹೇಳಿಕೆಯಲ್ಲಿ ತಿಳಿಸಿದೆ.
ಖಾಯಂ ನಾಯಕ ಎಬಿ ಡಿವಿಲಿಯರ್ಸ್ ಗಾಯಗೊಂಡಿರುವ ಕಾರಣ 32ರ ಪ್ರಾಯದ ಪ್ಲೆಸಿಸ್ ದಕ್ಷಿಣ ಆಫ್ರಿಕದ ಹಂಗಾಮಿ ನಾಯಕನಾಗಿ ತಂಡವನ್ನು ಮುನ್ನಡೆಸುತ್ತಿದ್ದಾರೆ. ಪ್ಲೆಸಿಸ್ ಈ ಹಿಂದೆಯೂ ಚೆಂಡು ವಿರೂಪಗೊಳಿಸಿದ ಆರೋಪ ಎದುರಿಸಿದ್ದರು.
2013ರಲ್ಲಿ ಪಾಕಿಸ್ತಾನ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದ ವೇಳೆ ಚೆಂಡು ವಿರೂಪಗೊಳಿಸಿದ ಪ್ರಕರಣದಲ್ಲಿ ಸಿಲುಕಿದ್ದ ಪ್ಲೆಸಿಸ್‌ಗೆ ಪಂದ್ಯಶುಲ್ಕದಲ್ಲಿ ಶೇ.50ರಷ್ಟು ದಂಡ ವಿಧಿಸಲಾಗಿತ್ತು.
ದುಬೈನಲ್ಲಿ ನಡೆದ ಪಾಕ್ ವಿರುದ್ಧದ ಟೆಸ್ಟ್ ಪಂದ್ಯದ ವೇಳೆ ಪ್ಲೆಸಿಸ್ ಪ್ಯಾಕೆಟ್‌ನ ಜಿಪ್‌ಗೆ ಚೆಂಡನ್ನು ಉಜ್ಜುತ್ತಿದ್ದ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಇದನ್ನು ಗಂಭೀರವಾಗಿ ತೆಗೆದುಕೊಂಡಿದ್ದ ಅಂಪೈರ್‌ಗಳಾದ ಇಯಾನ್ ಗೌಲ್ಡ್ ಹಾಗೂ ರಾಡ್ ಟಕರ್ ಆಫ್ರಿಕ ತಂಡಕ್ಕೆ 5 ರನ್ ದಂಡ ಹಾಕಿ, ಚೆಂಡನ್ನು ಬದಲಿಸಿದ್ದರು. ಹೊಬರ್ಟ್‌ನಲ್ಲಿ ನಡೆದ ಪಂದ್ಯದಲ್ಲಿ ಇನಿಂಗ್ಸ್ ಹಾಗೂ 80 ರನ್‌ಗಳ ಅಂತರದಿಂದ ಜಯ ಸಾಧಿಸಿರುವ ದಕ್ಷಿಣ ಆಫ್ರಿಕ ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನು ಗೆದ್ದುಕೊಂಡಿದೆ.





