ಭಾರತದ ಬ್ಯಾಡ್ಮಿಂಟನ್ ತಂಡದ ಮ್ಯಾನೇಜರ್‌ಗೆ ವೀಸಾ ನಿರಾಕರಿಸಿಲ್ಲ: ಚೀನಾ
ಬೀಜಿಂಗ್, ನ.18: ಅರುಣಾಚಲ ಪ್ರದೇಶ ನಿವಾಸಿಯೆಂಬ ಕಾರಣಕ್ಕೆ ಭಾರತದ ಬ್ಯಾಡ್ಮಿಂಟನ್ ತಂಡದ ಮ್ಯಾನೇಜರ್‌ಗೆ ವೀಸಾ ನಿರಾಕರಿಸಲಾಗಿದೆ ಎಂಬ ಆರೋಪವನ್ನು ಚೀನಾ ಶುಕ್ರವಾರ ನಿರಾಕರಿಸಿದೆ.
ದಕ್ಷಿಣ ಟಿಬೆಟ್‌ನ ಬಮಂಗ್ ಟಾಗೊ ಎನ್ನುವವರು ಸ್ವತಃ ವೀಸಾ ಅರ್ಜಿಯನ್ನು ರದ್ದುಪಡಿಸಿದ್ದರು ಎಂದು ಚೀನಾ ಹೇಳಿದೆ.
ಈಗ ನಡೆಯುತ್ತಿರುವ ಚೀನಾ ಓಪನ್ ಸೂಪರ್ ಸರಣಿ ಬ್ಯಾಡ್ಮಿಂಟನ್ ಟೂರ್ನಮೆಂಟ್‌ನಲ್ಲಿ ಭಾಗವಹಿಸುವ ಉದ್ದೇಶದಿಂದ ಫುಝೌಗೆ ತೆರಳಲು ಅರುಣಾಚಲ ಪ್ರದೇಶ ಬ್ಯಾಡ್ಮಿಂಟನ್ ಸಂಸ್ಥೆಯ ಕಾರ್ಯದರ್ಶಿಯಾಗಿರುವ ಬಮಂಗ್ ಟಾಗೊ ಹೊಸದಿಲ್ಲಿಯಲ್ಲಿರುವ ಚೀನಾದ ರಾಯಭಾರಿ ಕಚೇರಿಯಲ್ಲಿ ವೀಸಾಕ್ಕಾಗಿ ನ.10ರಂದು ಅರ್ಜಿ ಸಲ್ಲಿಸಿದ್ದರು. ಅವರು ಅರುಣಾಚಲ ಪ್ರದೇಶದವರು ಎಂಬ ಕಾರಣಕ್ಕೆ ಚೀನಾದ ರಾಯಭಾರಿ ಕಚೇರಿ ಮರುದಿನವೇ ವೀಸಾ ನೀಡಲು ನಿರಾಕರಿಸಿತ್ತು. ಈ ಸಂಬಂಧ ಟೊಗೊ ವಿದೇಶಾಂಗ ವ್ಯವಹಾರ ಸಚಿವಾಲಯವನ್ನು ಭೇಟಿಯಾಗಿ ದೂರು ನೀಡಿದ್ದರು ಎಂದು ವರದಿಯಾಗಿತ್ತು.
ಭಾರತದಲ್ಲಿರುವ ಚೀನಾದ ರಾಯಭಾರಿ ಕಚೇರಿಗೆ ವ್ಯಕ್ತಿಯೊಬ್ಬ ಈ ಹಿಂದೆ ತೆರಳಿ ವೀಸಾಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ, ಬಳಿಕ ಅವರು ವೀಸಾ ಅರ್ಜಿಯನ್ನು ರದ್ದುಪಡಿಸಿದ್ದರು ಎಂದು ಚೀನಾದ ವಿದೇಶಿ ಸಚಿವಾಲಯದ ವಕ್ತಾರ ಗೆಂಗ್ ಶುಯಾಂಗ್ ಹೇಳಿದ್ದಾರೆ.





