ಹಳೆಯ ನೋಟು ಬದಲಾವಣೆಗೆ ಹೊಸ ದಾರಿ..!

ಬೆಂಗಳೂರು, ನ. 18: ಐದು ನೂರು ರೂ. ಮತ್ತು ಒಂದು ಸಾವಿರ ರೂ. ಮುಖಬೆಲೆಯ ನೋಟು ಚಲಾವಣೆ ರದ್ದು ಮಾಡಿರುವ ಹಿನ್ನೆಲೆಯಲ್ಲಿ ಹಳೆಯ ನೋಟು ಬದಲಾವಣೆಗೆ ಕೆಲವರು ಕೆಎಸ್ಸಾರ್ಟಿಸಿ ಮುಂಗಡ ಟಿಕೆಟ್ ಕಾಯ್ದಿರಿಸುವ ಹೊಸ ದಾರಿಯೊಂದನ್ನು ಕಂಡುಕೊಂಡಿದ್ದಾರೆ.
ಹಳೆಯ ನೋಟುಗಳನ್ನು ನೀಡಿ ಕೆಎಸ್ಸಾರ್ಟಿಸಿ ಮುಂಗಡ ಟಿಕೆಟ್ ಕಾಯ್ದಿರಿಸಿ, ಆ ಬಳಿಕ ಆ ಟಿಕೆಟ್ ರದ್ದುಪಡಿಸಿ ಸಂಸ್ಥೆಯಿಂದ ಹೊಸ ನೋಟುಗಳನ್ನು ಪಡೆಯುತ್ತಿರುವ ದಂಧೆಯೊಂದನ್ನು ಕೆಎಸ್ಸಾರ್ಟಿಸಿ ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ನೋಟುಗಳ ಚಲಾವಣೆ ರದ್ದುಪಡಿಸಿದ ಬಳಿಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳು ಹಳೆಯ ನೋಟುಗಳನ್ನು ಸ್ವೀಕರಿಸುತ್ತಿದೆ.
ಕೆಲವರು ಇದನ್ನು ದುರ್ಬಳಕೆ ಮಾಡಿ ಕೊಳ್ಳುತ್ತಿರುವುದು ಬೆಳಕಿಗೆ ಬಂದಿದೆ ಎಂದು ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಕುಮಾರ್ ಕಟಾರಿಯಾ, ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಇಂತಹ ಪ್ರಕರಣಗಳ ಬಗ್ಗೆ ಸೂಕ್ತ ನಿಗಾ ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಸಾಮಾನ್ಯ ಬಸ್‌ಗಳಿಗೆ 10,000 ರೂ. ಮತ್ತು ಹವಾನಿಯಂತ್ರಿತ ಬಸ್‌ಗಳಿಗೆ 23,000 ರೂ.ಗಳಷ್ಟು ಕೆಎಸ್ಸಾರ್ಟಿಸಿ ಇಲಾಖೆಯ ಬಸ್ಸುಗಳಲ್ಲಿ ಮುಂಗಡ ಟಿಕೆಟ್ ಕಾಯ್ದಿರಿಸಲು ಅವಕಾಶವಿದೆ. ಹಳೆಯ ನೋಟುಗಳನ್ನು ನೀಡಿ ಟಿಕೆಟ್ ಕಾಯ್ದಿರಿಸಿ, ಅನಂತರ ರದ್ದುಪಡಿಸಿದ 180 ಪ್ರಕರಣಗಳು ಬೆಳಕಿಗೆ ಬಂದಿವೆ ಎಂದು ಗೊತ್ತಾಗಿದೆ.
ಚೆಕ್ ಮತ್ತು ಡಿಡಿ ನೀಡಿ ಮುಂಗಡ ಟಿಕೆಟ್ ಕಾಯ್ದಿರಿಸಿದ ಪ್ರಕರಣಗಳನ್ನು ಹೊರತುಪಡಿಸಿ, ಹೆಚ್ಚಿನ ಮೊತ್ತದ ನಗದು ನೀಡಿ ಟಿಕೆಟ್ ಕಾಯ್ದಿರಿಸಿ, ಅನಂತರ ರದ್ದುಪಡಿಸಿರುವ ಬಗ್ಗೆ ಪರಿಶೀಲನೆ ನಡೆಸಲು ಕೆಎಸ್ಸಾರ್ಟಿಸಿ ಸಿಬ್ಬಂದಿಗೆ ಸೂಚಿಸಲಾಗಿದೆ ಎಂದು ಹೇಳಲಾಗಿದೆ.







