ಪ್ರಥಮ ಟೆಸ್ಟ್: ಪಾಕಿಸ್ತಾನ ಅಲ್ಪ ಮೊತ್ತಕ್ಕೆ ಆಲೌಟ್
ಮೊದಲ ಪಂದ್ಯದಲ್ಲೇ ಮಿಂಚಿದ ಗ್ರಾಂಡ್‌ಹೊಮೆ

ಕ್ರೈಸ್ಟ್‌ಚರ್ಚ್, ನ.18: ಬೌಲರ್‌ಗಳ ಪ್ರಾಬಲ್ಯಕ್ಕೆ ಸಾಕ್ಷಿಯಾದ ನ್ಯೂಝಿಲೆಂಡ್ ಹಾಗೂ ಪಾಕಿಸ್ತಾನ ನಡುವೆ ಇಲ್ಲಿ ಶುಕ್ರವಾರ ಆರಂಭವಾದ ಪ್ರಥಮ ಟೆಸ್ಟ್‌ನಲ್ಲಿ ಆತಿಥೇಯ ತಂಡದ ಇಬ್ಬರು ಆಟಗಾರರು ಚೊಚ್ಚಲ ಪಂದ್ಯದಲ್ಲೇ ಮಿಂಚಿದರು.
ಬೌಲರ್ ಕಾಲಿನ್ ಡಿ ಗ್ರಾಂಡ್‌ಹೊಮೆ 41 ರನ್‌ಗೆ 6 ವಿಕೆಟ್ ಕಬಳಿಸಿ ಚೊಚ್ಚಲ ಪಂದ್ಯವನ್ನು ಸ್ಮರಣೀಯವಾಗಿಸಿಕೊಂಡರು. ಆರಂಭಿಕ ಆಟಗಾರ ಜೀತ್ ರಾವಲ್ ಮೊದಲ ಪಂದ್ಯದಲ್ಲೇ ಅಜೇಯ ಅರ್ಧಶತಕ(55) ಬಾರಿಸಿ ಗಮನ ಸೆಳೆದರು.
ಕಿವೀಸ್-ಪಾಕ್‌ನ ಮೊದಲ ದಿನದಾಟ ಮಳೆಗಾಹುತಿಯಾಗಿತ್ತು. 2ನೆ ದಿನವಾದ ಶುಕ್ರವಾರ ಪಾಕಿಸ್ತಾನ ಮೊದಲು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟಿತು. ಬೌಲರ್ ಸ್ನೇಹಿ ಪಿಚ್‌ನಲ್ಲಿ ಉಭಯ ತಂಡಗಳ 13 ವಿಕೆಟ್‌ಗಳು ಪತನಗೊಂಡಿದ್ದು 237 ರನ್ ದಾಖಲಾದವು. ಝಿಂಬಾಬ್ವೆ ಸಂಜಾತ ಗ್ರಾಂಡ್‌ಹೊಮೆ ಪಾದಾರ್ಪಣೆ ಪಂದ್ಯದಲ್ಲಿ 6 ವಿಕೆಟ್‌ಗಳ ಗೊಂಚಲು ಪಡೆದು ಹೊಸ ದಾಖಲೆ ಬರೆದರು.
ಕಿವೀಸ್ ಬೌಲಿಂಗ್ ದಾಳಿಗೆ ತತ್ತರಿಸಿದ ಪಾಕಿಸ್ತಾನ ಮೊದಲ ಇನಿಂಗ್ಸ್‌ನಲ್ಲಿ 133 ರನ್‌ಗೆ ಆಲೌಟಾಯಿತು. ಪಾಕಿಸ್ತಾನವನ್ನು 50ನೆ ಟೆಸ್ಟ್‌ನಲ್ಲಿ ನಾಯಕನಾಗಿ ಮುನ್ನಡೆಸಿದ ಮಿಸ್ಬಾವುಲ್ ಹಕ್(31) ಮಾತ್ರ ಕಿವೀಸ್‌ನ ದಾಳಿಯನ್ನು ಎದುರಿಸಿದರು.
ಮೊದಲ ಇನಿಂಗ್ಸ್ ಆರಂಭಿಸಿರುವ ಕಿವೀಸ್ ದಿನದಾಟದಂತ್ಯಕ್ಕೆ 36 ಓವರ್‌ಗಳಲ್ಲಿ 3 ವಿಕೆಟ್‌ಗಳ ನಷ್ಟಕ್ಕೆ 104 ರನ್ ಗಳಿಸಿದೆ. 40 ರನ್‌ಗೆ 3 ವಿಕೆಟ್ ಕಳೆದುಕೊಂಡಿದ್ದ ಕಿವೀಸ್ ಕಳಪೆ ಆರಂಭ ಪಡೆದಿತ್ತು. ಮಾರ್ಟಿನ್ ಗಪ್ಟಿಲ್ ಬದಲಿಗೆ ಇನಿಂಗ್ಸ್ ಆರಂಭಿಸಿದ ಭಾರತ ಮೂಲದ ಜೀತ್ ರಾವಲ್(ಅಜೇಯ 55, 108 ಎಸೆತ, 7 ಬೌಂಡರಿ) ಹಾಗೂ ನಿಕೊಲಸ್(ಅಜೇಯ 29)4ನೆ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 64 ರನ್ ಸೇರಿಸಿ ತಂಡವನ್ನು ಆಧರಿಸಿದರು.
ಕ್ರೈಸ್ಟ್‌ಚರ್ಚ್‌ನಲ್ಲಿ ಶ್ರೇಷ್ಠ ಬೌಲಿಂಗ್ ಸಂಘಟಿಸಿದ ಗ್ರಾಂಡ್‌ಹೊಮೆ ತಮ್ಮದೇ ದೇಶದ ಮಾಜಿ ಲೆಗ್-ಸ್ಪಿನ್ನರ್ ಅಲೆಕ್ಸ್ ಮೊರ್ 1951ರಲ್ಲಿ ಕ್ರೈಸ್ಟ್‌ಚರ್ಚ್‌ನಲ್ಲಿ ಇಂಗ್ಲೆಂಡ್‌ನ ವಿರುದ್ಧ ದಾಖಲಿಸಿದ್ದ ಶ್ರೇಷ್ಠ ಬೌಲಿಂಗ್(6-155) ದಾಖಲೆಯನ್ನು ಮುರಿದರು. ಚೊಚ್ಚಲ ಪಂದ್ಯದಲ್ಲಿ 5 ವಿಕೆಟ್ ಗೊಂಚಲು ಪಡೆದ 8ನೆ ಆಟಗಾರ ಗ್ರಾಂಡ್‌ಹೊಮೆ.
ಝಿಂಬಾಬ್ವೆ ಮೂಲದ ಗ್ರಾಂಡ್‌ಹೊಮೆ 2006ರಲ್ಲಿ ನ್ಯೂಝಿಲೆಂಡ್‌ಗೆ ವಲಸೆ ಬಂದಿದ್ದರು. ಸೀಮಿತ ಓವರ್ ಕ್ರಿಕೆಟ್‌ನಲ್ಲಿ ಆಕ್ರಮಣಕಾರಿ ಅಗ್ರಕ್ರಮಾಂಕದ ಬ್ಯಾಟ್ಸ್‌ಮನ್ ಆಗಿ ಗುರುತಿಸಿಕೊಂಡಿದ್ದರು. 2012ರಲ್ಲಿ ತನ್ನ ದೇಶದ ವಿರುದ್ಧವೇ ಕಿವೀಸ್ ಪರ ಮೊದಲ ಅಂತಾರಾಷ್ಟ್ರೀಯ ಪಂದ್ಯ ಆಡಿದರು.
ಈವರೆಗೆ 3 ಟ್ವೆಂಟಿ-20 ಪಂದ್ಯಗಳನ್ನು ಆಡಿರುವ ಅವರು ಕೇವಲ 13 ರನ್ ಗಳಿಸಿದ್ದಾರೆ. ದೇಶೀಯ ಕ್ರಿಕೆಟ್‌ನಲ್ಲಿ ನೀಡಿದ ಉತ್ತಮ ಪ್ರದರ್ಶನದ ನೆರವಿನಿಂದ ಗ್ರಾಂಡ್‌ಹೊಮೆ ನ್ಯೂಝಿಲೆಂಡ್‌ನ ಟೆಸ್ಟ್ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದರು.
ಸಂಕ್ಷಿಪ್ತ ಸ್ಕೋರ್
ಪಾಕಿಸ್ತಾನ ಪ್ರಥಮ ಇನಿಂಗ್ಸ್: 133 ರನ್‌ಗೆ ಆಲೌಟ್
(ಮಿಸ್ಬಾವುಲ್ ಹಕ್ 31, ಸಮಿ ಅಸ್ಲಮ್ 19, ಅಸದ್ ಶಫೀಕ್ 16, ಗ್ರಾಂಡ್‌ಹೊಮೆ 6-41, ಸೌಥಿ 2-20, ಬೌಲ್ಟ್ 2-39)
ನ್ಯೂಝಿಲೆಂಡ್ ಪ್ರಥಮ ಇನಿಂಗ್ಸ್: 36 ಓವರ್‌ಗಳಲ್ಲಿ 104/3
(ಜೀತ್ ರಾವಲ್ ಅಜೇಯ 55, ನಿಕೊಲಸ್ ಅಜೇಯ 29, ಮುಹಮ್ಮದ್ ಆಮಿರ್ 1-19)







