ಮುಂಬೈ ಇಂಡಿಯನ್ಸ್‌ಗೆ ಜಯವರ್ಧನೆ ಕೋಚ್

ಮುಂಬೈ, ನ.18: ಶ್ರೀಲಂಕಾದ ಮಾಜಿ ನಾಯಕ ಮಹೇಲ ಜಯವರ್ಧನೆ ಇಂಡಿಯನ್ ಪ್ರೀಮಿಯರ್ ಲೀಗ್‌ನ ಮುಂಬೈ ಇಂಡಿಯನ್ಸ್ ತಂಡದ ಮುಖ್ಯ ಕೋಚ್ ಆಗಿ ನೇಮಕಗೊಂಡಿದ್ದಾರೆ.
ಕಳೆದ ಎರಡು ವರ್ಷಗಳಿಂದ ಮುಂಬೈ ತಂಡದ ಕೋಚ್ ಆಗಿದ್ದ ಆಸ್ಟ್ರೇಲಿಯದ ಮಾಜಿ ನಾಯಕ ರಿಕಿ ಪಾಂಟಿಂಗ್ ಒಪ್ಪಂದ ಅವಧಿ ಕೊನೆಗೊಂಡ ಹಿನ್ನೆಲೆಯಲ್ಲಿ ಜಯವರ್ಧನೆ ನೂತನ ಕೋಚ್ ಆಗಿ ಆಯ್ಕೆಯಾಗಿದ್ದಾರೆ.
ಮುಂಬರುವ 2017ರ ಆವೃತ್ತಿಯ ಐಪಿಎಲ್‌ನಲ್ಲಿ ಜಯವರ್ಧನೆ ಮುಂಬೈ ಇಂಡಿಯನ್ಸ್‌ನ ಕೋಚ್ ಆಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಮುಂಬೈ ಇಂಡಿಯನ್ಸ್ ತಂಡದ ಮಾಲಕಿ ನೀತಾ ಅಂಬಾನಿ ಹೇಳಿದ್ದಾರೆ.
ಜಯವರ್ಧನೆ ಶ್ರೀಲಂಕಾ ಕಂಡ ಅತ್ಯಂತ ಯಶಸ್ವಿ ಆಟಗಾರ ಹಾಗೂ ನಾಯಕ. ಜಯವರ್ಧನೆ ನಾಯಕತ್ವದಲ್ಲಿ ಶ್ರೀಲಂಕಾ 2014ರ ಐಸಿಸಿ ಟ್ವೆಂಟಿ-20 ವಿಶ್ವಕಪ್‌ನ್ನು ಜಯಿಸಿತ್ತು.
ಕೋಚ್ ಆಗಿ ಆಯ್ಕೆಯಾಗಿರುವುದಕ್ಕೆ ಸಂತೋಷ ವ್ಯಕ್ತಪಡಿಸಿರುವ ಜಯವರ್ಧನೆ,‘‘ ಪ್ರತಿಭಾವಂತ ತಂಡದೊಂದಿಗೆ ಕೆಲಸ ಮಾಡಲು ಎದುರು ನೋಡುತ್ತಿರುವೆ. ಎರಡು ಬಾರಿ ಐಪಿಎಲ್ ಚಾಂಪಿಯನ್ ಆಗಿರುವ ಮುಂಬೈ ತಂಡದ ಮಾಲಕರು ಹಾಗೂ ಸಿಬ್ಬಂದಿ ವರ್ಗ ತಂಡವನ್ನು ಶಕ್ತಿಶಾಲಿಗೊಳಿಸಲು ನೆರವು ನೀಡುವ ವಿಶ್ವಾಸದಲ್ಲಿರುವೆ’’ಎಂದು ಹೇಳಿದರು.







