ತಮಗೆ ಕಿಡ್ನಿ ನೀಡಲು ಮುಂದೆ ಬಂದ ಮುಸ್ಲಿಮ್ ವ್ಯಕ್ತಿಗೆ ಸುಷ್ಮಾ ಅವರ ಪ್ರತಿಕ್ರಿಯೆ ಏನು ಗೊತ್ತೆ?

ಹೊಸದಿಲ್ಲಿ,ನ.18: ‘‘ಮೂತ್ರಪಿಂಡಕ್ಕೆ ಯಾವುದೇ ಧರ್ಮದ ಹಣೆಪಟ್ಟಿ ಇಲ್ಲ ’’ ಇದು ಮೂತ್ರಪಿಂಡ ವೈಫಲ್ಯದಿಂದಾಗಿ ಇಲ್ಲಿಯ ಏಮ್ಸ್ ಆಸ್ಪತ್ರೆಗೆ ದಾಖಲಾಗಿರುವ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರು ತನ್ನ ಮೂತ್ರಪಿಂಡವನ್ನು ದಾನ ಮಾಡುವ ಕೊಡುಗೆಯನ್ನು ಮುಂದಿರಿಸಿರುವ ಮುಸ್ಲಿಮ್ ವ್ಯಕ್ತಿಗೆ ಆಭಾರವನ್ನು ಸೂಚಿಸಿ ಶುಕ್ರವಾರ ಮಾಡಿರುವ ಟ್ವೀಟ್.
ತನ್ನ ಮೂತ್ರಪಿಂಡ ವೈಫಲ್ಯದ ವಿಷಯವನ್ನು ಸುಷ್ಮಾ ಬುಧವಾರ ಟ್ವಿಟರ್‌ನಲ್ಲಿ ಬಹಿರಂಗಗೊಳಿಸಿದಾಗಿನಿಂದ ಹಲವಾರು ಜನರಿಂದ ತಮ್ಮ ಮೂತ್ರಪಿಂಡ ನೀಡುವ ಕೊಡುಗೆಗಳು ಅವರಿಗೆ ಹರಿದು ಬರುತ್ತಲೇ ಇವೆ.
ಸೋದರರೇ,ನಿಮಗೆ ತುಂಬ ಕೃತಜ್ಞತೆಗಳು. ಮೂತ್ರಪಿಂಡ ಯಾವುದೇ ಧಾರ್ಮಿಕ ಹಣೆಪಟ್ಟಿ ಹೊಂದಿರುವುದಿಲ್ಲ ಎನ್ನುವುದು ನನಗೆ ಖಚಿತವಿದೆ ಎಂದು 64ರ ಹರೆಯದ ಹಿರಿಯ ಸಚಿವೆ ಟ್ವೀಟಿಸಿದ್ದಾರೆ.
ಉತ್ತರ ಪ್ರದೇಶದ ನಿವಾಸಿ ಮುಜೀಬ್ ಅನ್ಸಾರಿ ಎಂಬ ವ್ಯಕ್ತಿಯ ಟ್ವೀಟ್‌ಗೆ ಪ್ರತಿಕ್ರಿಯಿಸಿ ಸುಷ್ಮಾ ಈ ಮಾತನ್ನು ಹೇಳಿದ್ದಾರೆ. ಅವರಿಗೆ ತನ್ನ ಮೂತ್ರಪಿಂಡವನ್ನು ನೀಡುವ ಕೊಡುಗೆಯನ್ನು ಮುಂದಿರಿಸಿದ್ದ ಅನ್ಸಾರಿ ಜೊತೆಗೆ,ತಾನು ಬಿಎಸ್‌ಪಿ ಕಾರ್ಯಕರ್ತನಾಗಿದ್ದೇನೆ ಮತ್ತು ಮುಸ್ಲಿಮ್ ಆಗಿದ್ದೇನೆ ಎಂದೂ ತಿಳಿಸಿದ್ದರು.
‘‘ಸುಷ್ಮಾ ಸ್ವರಾಜ್ ಮೇಡಂ,ನಾನು ಬಿಎಸ್‌ಪಿ ಬೆಂಬಲಿಗ ಮತ್ತು ಮುಸ್ಲಿಮ್. ಆದರೆ ನಾನು ನನ್ನ ಮೂತ್ರಪಿಂಡವನ್ನು ನಿಮಗೆ ದಾನ ಮಾಡಲು ಬಯಸಿದ್ದೇನೆ. ನೀವು ನನ್ನ ತಾಯಿ ಇದ್ದಂತೆ,ಅಲ್ಲಾಹನು ನಿಮ್ಮನ್ನು ಆಶೀರ್ವದಿಸಲಿ ’’ ಎಂದು ಅನ್ಸಾರಿ ಟ್ವೀಟ್ ಮಾಡಿದ್ದರು.
ನಿಯಾಮತ್ ಅಲಿ ಶೇಖ್,ಜಾನ್ ಶಾ ಮತ್ತಿತರರೂ ಸುಷ್ಮಾಗೆ ಮೂತ್ರಪಿಂಡ ದಾನದ ಕೊಡುಗೆಯನ್ನು ಮುಂದಿರಿಸಿ ಟ್ವೀಟಿಸಿದ್ದಾರೆ.







