ಮನಪಾ: ಪ್ರೀಮಿಯಂ ಎಫ್‌ಎಆರ್‌ನಡಿ ಕಾಮಗಾರಿಗೆ ಅನುಮೋದನೆ
107.68 ಕೋ.ರೂ. ವೆಚ್ಚ: ವಿಪಕ್ಷ ಆಕ್ಷೇಪ
ಮಂಗಳೂರು, ನ.18: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಪ್ರೀಮಿಯಂ ಎಫ್‌ಎಆರ್‌ನಡಿ 107.68 ಕೋಟಿ ರೂ. ವೆಚ್ಚದಲ್ಲಿ ವಿವಿಧ ವಾರ್ಡ್‌ಗಳಲ್ಲಿ ರಸ್ತೆ ಕಾಮಗಾರಿಗಳನ್ನು ಹಮ್ಮಿಕೊಳ್ಳಲು ವಿಪಕ್ಷದ ಆಕ್ಷೇಪದ ನಡುವೆ ಇಂದು ಅನುಮೋದನೆ ನೀಡಲಾಯಿತು. ಮೇಯರ್ ಹರಿನಾಥ್ ಅಧ್ಯಕ್ಷತೆಯಲ್ಲಿ ಮನಪಾ ಸಭಾಂಗಣದಲ್ಲಿ ನಡೆದ ವಿಶೇಷ ಸಭೆಯಲ್ಲಿ ವಿಸ್ತೃತ ಚರ್ಚೆ, ಆಕ್ಷೇಪ, ವಾದ-ಪ್ರತಿವಾದಗಳ ನಡುವೆ ಪ್ರೀಮಿಯಂ ಎಫ್‌ಎಆರ್‌ನ ವಿವಿಧ ಕಾಮಗಾರಿಗಳ ಕ್ರಿಯಾ ಯೋಜನೆಯಲ್ಲಿ ಬದಲಾವಣೆ ಇದ್ದಲ್ಲಿ ಮೇಯರ್‌ಗೆ ಅಧಿಕಾರ ನೀಡಿ, ವಿಪಕ್ಷದ ಆಕ್ಷೇಪ ದಾಖಲಿಸಿಕೊಂಡು ಅನುಮೋದಿಸಲು ನಿರ್ಧರಿಸಲಾಯಿತು. ಸಭೆ ಆರಂಭಗೊಳ್ಳುತ್ತಿರುವಂತೆಯೇ, ಕ್ರಿಯಾ ಯೋಜನೆ ಮಂಜೂರಾತಿಗೆ ಸದನದ ಒಪ್ಪಿಗೆ ಕೇಳುತ್ತಿದ್ದಂತೆ ಮಧ್ಯ ಪ್ರವೇಶಿಸಿದ ಪ್ರತಿಪಕ್ಷದ ನಾಯಕಿ ರೂಪಾ ಡಿ. ಬಂಗೇರ, ಅಭಿವೃದ್ಧಿ ಕಾಮಗಾರಿ ಪರಿಶೀಲನಾ ಸಭೆ ಕೇವಲ ಕಾಟಾಚಾರಕ್ಕೆ ಮಾತ್ರ ನಡೆಯುತ್ತಿದೆ. ಅಜೆಂಡಾಕ್ಕೆ ಪೂರಕವಾದ ಯಾವುದೇ ಚರ್ಚೆ ನಡೆಯುತ್ತಿಲ್ಲ. ಪ್ರೀಮಿಯಂ ಎ್ಎಆರ್‌ನಿಂದ ಸಂಗ್ರಹಿಸಿದ 130 ಕೋ.ರೂ. ಪಾಲಿಕೆಯ ಬ್ಯಾಂಕ್ ಖಾತೆಯಲ್ಲಿ ಇದೆ. ಈ ಹಣವನ್ನು ವೃತ್ತ ನಿರ್ಮಾಣಕ್ಕೆ ಬಳಸಲಾಗುತ್ತಿದೆ. ಚುನಾವಣೆಯ ದೃಷ್ಟಿಯನ್ನಿಟ್ಟುಕೊಂಡು ಕಾಂಕ್ರಿಟೀಕರಣ ನಡೆಸಲಾಗುತ್ತಿದೆ ಎಂದು ಆಕ್ಷೇಪಿಸಿದರು. ಸರಕಾರದ ಕಾನೂನಿನ ತೊಡಕಿನಿಂದ ಪ್ರೀಮಿಯಂ ಎ್ಎಆರ್ ಹಣ ಬಳಕೆಗೆ ವಿಳಂಬವಾಗಿದೆ. ಪ್ರೀಮಿಯಂ ಎ್ಎಆರ್ ಹಣವನ್ನು ುಟ್‌ಪಾತ್, ಚರಂಡಿ ಮತ್ತು ಅಗಲೀಕರಿಸಿದ ರಸ್ತೆಗೆ ಮಾತ್ರ ಬಳಸಲಾಗುತ್ತಿದೆ ಎಂದು ಕಾಂಗ್ರೆಸ್ ಸದಸ್ಯ ಮಹಾಬಲ ಮಾರ್ಲ ಸ್ಪಷ್ಟೀಕರಿಸಲೆತ್ನಿಸಿದರು. ಬಿಜೆಪಿಯ ಕೆ. ಮಧುಕಿರಣ್ ಮಾತನಾಡಿ, ಸರಕಾರದ ಮಾರ್ಗಸೂಚಿಯ ಬಗ್ಗೆ ಸದನಕ್ಕೆ ಮಾಹಿತಿ ನೀಡದೆ ಸರಕಾರದ ನಿಯಮಾವಳಿ ಉಲ್ಲಂಘಿಸಲಾಗುತ್ತಿದೆ. ಕಾವೂರು- ಗಾಂಧಿನಗರ ರಸ್ತೆಗೆ ಪ್ರೀಮಿಯಂ ಇಟ್ಟಿಲ್ಲ ಎಂದು ಆಕ್ಷೇಪಿಸಿದರು. ಪಾಲಿಕೆ ಆಯುಕ್ತ ಮುಹಮ್ಮದ್ ನಝೀರ್ ಮಾತನಾಡಿ, ರಾಜ್ಯ ಸರಕಾರ ಈಗಾಗಲೇ ಸುತ್ತೋಲೆ ಹೊರಡಿಸಿದ್ದು, ಅದರಂತೆ ಕ್ರಿಯಾ ಯೋಜನೆ ತಯಾರಿಸಲಾಗಿದೆ. ಸುತ್ತೋಲೆಯ ಯಾವುದೇ ಅಂಶದ ಉಲ್ಲಂಘನೆಯಾಗಿಲ್ಲ ಎಂದರು.
ಆದರೆ ಕ್ರಿಯಾಯೋಜನೆಯಲ್ಲಿ, ಈಗಾಗಲೇ ಅಭಿವೃದ್ಧಿ ಆದ ರಸ್ತೆಗಳಿಗೂ ಹಣ ಇಡಲಾಗಿದೆ. ಅಲ್ಲದೆ, ಸರಕಾರಿ ಸುತ್ತೋಲೆಯಂತೆ ರಸ್ತೆ ವಿಸ್ತರಣೆ ಹೊರತುಪಡಿಸಿ ಇತರ ಕಾಮಗಾರಿಗಳಿಗೆ ಅವಕಾಶವಿಲ್ಲ. ಹಾಗಿದ್ದರೂ ಅವಕಾಶ ನೀಡುವ ಮೂಲಕ ಸುತ್ತೋಲೆಯನ್ನು ಉಲ್ಲಂಘಿಸಲಾಗಿದೆ ಎಂದು ಪ್ರೇಮಾನಂದ ಶೆಟ್ಟಿ ದೂರಿದರು. ಕಾರ್ಯಸೂಚಿಯಲ್ಲಿ ಎಲ್ಲಿಂದ ಎಷ್ಟು ಪ್ರೀಮಿಯರ್ ಎಫ್‌ಎಆರ್ ಹಣ ಸಂಗ್ರಹಿಸಲಾಗಿದೆ, ಆ ಹಣದಲ್ಲಿ ಯಾವ ರಸ್ತೆಗೆ ಎಷ್ಟು ಹಣ ನಿಗದಿಪಡಿಸಲಾಗಿದೆ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ನೀಡಲಾಗಿಲ್ಲ. ಇದರಿಂದಾಗಿ ಕ್ರಿಯಾ ಯೋಜನೆಯನ್ನು ಪುನರ್‌ಪರಿಶೀಲಿಸುವ ಅಗತ್ಯ ಎಂದು ಸುಧೀರ್ ಶೆಟ್ಟಿ ಒತ್ತಾಯಿಸಿದರು.
ಚರ್ಚೆಯಲ್ಲಿ ಜೆಡಿಎಸ್ ಸದಸ್ಯರಾದ ಅಬ್ದುಲ್ ಅಝೀಝ್ ಕುದ್ರೋಳಿ ಹಾಗೂ ರಮೀಝಾ ಬಾನು ದನಿಗೂಡಿಸಿದರು. 56 ರಸ್ತೆಗಳು 15 ವೃತ್ತಗಳು ಸೇರಿದಂತೆ ಒಟ್ಟು 75 ಕಾಮಗಾರಿಗಳಿಗೆ ಕ್ರಿಯಾ ಯೋಜನೆ ತಯಾರಿಸಲಾಗಿದೆ. ಕೆಲವು ಕಡೆ ರಸ್ತೆ ಫುಟ್‌ಪಾತ್, ಮಳೆ ನೀರು ಚರಂಡಿ ಅಭಿವೃದ್ಧಿಗೆ ಹಣವನ್ನು ನಿಗದಿಪಡಿಸಲಾಗಿದೆ ಎಂದು ಆಯುಕ್ತರು ತಿಳಿಸಿದರು.
ಈ ಬಗ್ಗೆ ಕೆಲ ಹೊತ್ತು ಆಡಳಿತ ಹಾಗೂ ವಿಪಕ್ಷ ಸದಸ್ಯರ ನಡುವೆ ವಾಗ್ವಾದ ನಡೆದು, ಕೊನೆಗೆ ವಿಪಕ್ಷದ ಆಕ್ಷೇಪದ ನಡುವೆ ಕ್ರಿಯಾಯೋಜನೆಗೆ ಅನುಮೋದನೆ ನೀಡಲಾಯಿತು. ಉಪ ಮೇಯರ್ ಸುಮಿತ್ರಾ ಕೆ., ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಕವಿತಾ ಸನಿಲ್, ಅಪ್ಪಿಲತಾ, ಲ್ಯಾನ್ಸಿ ಲೋಟ್ ಪಿಂಟೊ, ಬಶೀರ್ ಅಹ್ಮದ್ ಉಪಸ್ಥಿತರಿದ್ದರು.







