ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿಗೆ ಅರ್ಜಿ ಆಹ್ವಾನ
ಉಡುಪಿ, ನ.18: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ 2015-16ನೆ ಸಾಲಿಗೆ ನೀಡಲಾಗುವ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿಗಾಗಿ ಉಡುಪಿ ಜಿಲ್ಲೆಯಿಂದ ಕಳೆದ 5 ವರ್ಷಗಳಿಂದ ಮಹಿಳಾ ಅಭಿವೃದ್ಧಿ ಕ್ಷೇತ್ರದಲ್ಲಿ ಅವಿರತವಾಗಿ ಸೇವೆ ಸಲ್ಲಿಸುತ್ತಿರುವ ಅರ್ಹ ಸ್ವಯಂ ಸೇವಾ ಸಂಸ್ಥೆಗಳು ಹಾಗೂ ಅರ್ಹ ವ್ಯಕ್ತಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಕ್ರೀಡೆ, ಕಲೆ, ಸಾಹಿತ್ಯ ಹಾಗೂ ಶಿಕ್ಷಣ ಕ್ಷೇತ್ರಗಳಲ್ಲಿ ಅತ್ಯುತ್ತಮ ಸೇವೆ ಸಲ್ಲಿಸುತ್ತಿರುವ ಹಾಗೂ ವೀರ ಮಹಿಳೆ ಪ್ರಶಸ್ತಿಗೆ ಅರ್ಹತೆ ಹೊಂದಿರುವ ಮಹಿಳೆಯರಿಂದ ಪ್ರಸ್ತಾವನೆಗಳನ್ನು ನಿಗದಿತ ನಮೂನೆಯಲ್ಲಿ ಆಹ್ವಾನಿಸಲಾಗಿದೆ.
ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿಗೆ ಪ್ರಸ್ತಾವನೆ ಸಲ್ಲಿಸುವ ಸ್ವಯಂ ಸೇವಾ ಸಂಸ್ಥೆಗಳು ಹಾಗೂ ವ್ಯಕ್ತಿಗಳು ಮಹಿಳೆಯರ ಅಭಿವೃದ್ಧಿಗಾಗಿ ಕನಿಷ್ಠ 5 ವರ್ಷಗಳ ಸೇವೆ ಸಲ್ಲಿಸಿರಬೇಕು. ವೀರ ಮಹಿಳೆ ಪ್ರಶಸ್ತಿಗೆ ಪ್ರಸ್ತಾವನೆ ಸಲ್ಲಿಸುವ ಮಹಿಳೆಯರು 18ರಿಂದ 45 ವರ್ಷ ವಯಸ್ಸಿನೊಳಗಿನವರಾಗಿದ್ದು ಆಪತ್ಕಾಲದಲ್ಲಿದ್ದ ಮತ್ತೊಬ್ಬ ವ್ಯಕ್ತಿಯ ಜೀವ ಕಾಪಾಡುವಲ್ಲಿ ಅಥವಾ ಪ್ರಾಣ ರಕ್ಷಿಸುವಲ್ಲಿ ಜೀವದ ಹಂಗುತೊರೆದು ಧೈರ್ಯ/ಸಾಹಸ ಪ್ರದರ್ಶಿಸಿದವರಾಗಿರಬೇಕು. ಈ ಸಾಹಸ 2015ರ ಜ.1ರಿಂದ ಡಿ.31ರೊಳಗೆ ನಡೆದಿರಬೇಕು. ಪ್ರಸ್ತಾವನೆಗಳನ್ನು ಜಿಲ್ಲಾ ಉಪನಿರ್ದೇಶಕರಿಗೆ ಸಲ್ಲಿಸಲು ನ.30 ಕೊನೆಯ ದಿನವಾಗಿದೆ. ಆಸಕ್ತ ಮಹಿಳೆಯರು ಅರ್ಜಿ ನಮೂನೆ ಹಾಗೂ ಹೆಚ್ಚಿನ ವಿವರಗಳಿಗೆ ಉಪನಿರ್ದೇಶಕರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ರಜತಾದ್ರಿ, ‘ಬಿ’ ಬ್ಲಾಕ್, ಕೊಠಡಿ ಸಂಖ್ಯೆ 204, ಮೊದಲನೆ ಮಹಡಿ, ಮಣಿಪಾಲ (ದೂ.:0820-2574928) ಇವರನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.







