ಕೇರಳ: ಶಾಲೆಗಳಲ್ಲಿ ಪ್ಲಾಸ್ಟಿಕ್ ನಿಷೇಧ

ತಿರುವನಂತಪುರಂ,ನ. 19: ಶಾಲೆಗಳು ಸಹಿತ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧೀನದ ಎಲ್ಲ ಸಂಸ್ಥೆಗಳಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಲಾಗಿದೆ ಎಂದು ವರದಿಯಾಗಿದೆ. ಸಾರ್ವಜನಿಕ ವಿದ್ಯಾಭ್ಯಾಸ ಸಂರಕ್ಷಣ ಯಜ್ಞ ಯೋಜನೆಯಡಿಯಲ್ಲಿ ಗ್ರೀನ್ ಪ್ರೊಟೊಕಾಲ್ ಪಾಲಿಸುವ ತೀರ್ಮಾನದನ್ವಯ ಪ್ಲಾಸ್ಟಿಕ್ ನಿಷೇಧವನ್ನು ಜಾರಿಗೆ ತರಲಾಗುತ್ತಿದೆ. ಪ್ಲಾಸ್ಟಿಕ್ ಉಪಯೋಗದ ಬ್ಯಾನರ್, ಪತಾಕೆಗಳನ್ನು ಇನ್ನು ಬಳಸುವಂತಿಲ್ಲ.
ಸಭೆಗಳಲ್ಲಿ ಕುಡಿಯುವ ನೀರನ್ನು ಪ್ಲಾಸ್ಟಿಕ್ ಗ್ಲಾಸ್‌ನಲ್ಲಿ ನೀಡುವಂತಿಲ್ಲ. ಸ್ಟೀಲ್, ಗಾಜಿನ ಗ್ಲಾಸ್‌ಗಳನ್ನು ಮಾತ್ರವೇ ಬಳಸಬೇಕು. ಸಾರ್ವಜನಿಕ ವೇದಿಕೆಯಲ್ಲಿ ಅತಿಥಿಗಳಿಗೆ ಆಹಾರವನ್ನು ವಿತರಿಸಬಾರದು. ಅತಿಥಿಗಳನ್ನು ಸ್ವಾಗತಿಸುವಾಗ ಸ್ವಾಗತಕೋರುವ ಬುಕ್ಕೆಗಳು ಪ್ಲಾಸ್ಟಿಕ್‌ನಿಂದ ನಿರ್ಮಿಸಿದ್ದಾಗಿರಬಾರದು. ಅತಿಥಿಗಳಿಗೆ ಹೂ, ಸಣ್ಣ ಪುಸ್ತಕಗಳನ್ನೊ ನೀಡಿ ಖರ್ಚು ಕಡಿಮೆ ಮಾಡಬಹುದು.
ಮಕ್ಕಳನ್ನು ಸಾಲಾಗಿ ನಿಲ್ಲಿಸಿ ಅತಿಥಿಗಳನ್ನು ಸ್ವಾಗತಿಸುವಂತಿಲ್ಲ. ಅತಿಥಿ ಸತ್ಕಾರಗಳು ನಡೆಯುವಾಗ ಮಾರ್ಕೆಟ್‌ನಲ್ಲಿರುವ ಪೇಪರ್ ಗ್ಲಾಸ್ ಉಪಯೋಗಿಸಿದರೂ ಪ್ಲಾಸ್ಟಿಕ್ ಮುಕ್ತ ಆಗಲು ಸಾಧ್ಯವಿಲ್ಲ. ಪ್ಲಾಸ್ಟಿಕ್ ಆವರಣದೊಂದಿಗೆ ಪೇಪರ್ ಗ್ಲಾಸ್‌ಗಳು ತಯಾರಾಗುತ್ತಿವೆ ಎಂದು ವರದಿ ತಿಳಿಸಿದೆ.





