ಹುಬ್ಬಳ್ಳಿ: ಹೋಟೆಲು ಮತ್ತು ಉಪಾಹಾರ ಮ೦ದಿರಗಳ ಸ೦ಘದ ರಾಜ್ಯಮಟ್ಟದ ಸಮ್ಮೇಳನ

ಹುಬ್ಬಳ್ಳಿ, ನ.19: ಕರ್ನಾಟಕ ಪ್ರದೇಶ ಹೋಟೆಲು ಮತ್ತು ಉಪಾಹಾರ ಮ೦ದಿರಗಳ ಸ೦ಘದ (ಕೆ.ಪಿ.ಎಚ್.ಆರ್.ಎ) 17ನೆ ರಾಜ್ಯಮಟ್ಟದ ಸಮ್ಮೇಳನವನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹುಬ್ಬಳ್ಳಿಯಲ್ಲಿಂದು ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಕಳೆದ 62 ವರ್ಷಗಳಿಂದ ನಿಮ್ಮ ವೃತ್ತಿಯ ಜೊತೆಗೆ ಸಾಮಾಜಿಕ, ಶೈಕ್ಷಣಿಕ ಮತ್ತು ಧಾರ್ಮಿಕ ಕ್ಷೇತ್ರಗಳಲ್ಲಿ ನಿಮ್ಮ ಈ ಸಂಘಟನೆಯ ಮೂಲಕ ಸಮಾಜಕ್ಕೆ ಸೇವೆ ಸಲ್ಲಿಸುತ್ತಾ ಕಾರ್ಯನಿರ್ವಹಿಸುತ್ತಿರುವುದು ಸ್ತುತ್ಯರ್ಹ. ಕರ್ನಾಟಕ ರಾಜ್ಯಾದ್ಯಂತ ಸರಿಸುಮಾರು 60,000 ಹೋಟೆಲುಗಳಲ್ಲಿ 25 ಲಕ್ಷಕ್ಕೂ ಅಧಿಕ ಜನರಿಗೆ ಉದ್ಯೋಗ ನೀಡಿರುವ ಈ ಉದ್ಯಮ ನಮ್ಮ ರಾಜ್ಯದ ಪಾಲಿಗೆ ಹೆಮ್ಮೆಯ ವಿಚಾರ. ಆಹಾರ ತಯಾರಿಕೆಯಲ್ಲಿ ಹೆಚ್ಚಿತ್ತಿರುವ ಕೃತಕ, ರಾಸಾಯನಿಕ, ಹಾನಿಕಾರಕ ವಸ್ತುಗಳ ಬಳಕೆಗೆ ಕಡಿವಾಣ, ಸ್ವಚ್ಛತೆಯ ಕಡೆಗೆ ಪ್ರಾಥಮಿಕ ಆದ್ಯತೆ, ಆಧುನಿಕ ತಂತ್ರಜ್ಞಾನ ಪದ್ದತಿಗಳ ಅಳವಡಿಕೆ, ಗ್ರಾಹಕರೊಂದಿಗೆ ಎಲ್ಲ ಸಿಬ್ಬಂದಿ, ನೌಕರರ ನಡವಳಿಕೆಯಲ್ಲಿ ಸೌಹಾರ್ದ ಕಾಯ್ದುಕೊಳ್ಳುವುದೇ ಮೊದಲಾದವುಗಳ ಬಗ್ಗೆ ಹೆಚ್ಚಿನ ಗಮನವಿರಲಿ. ಹಸಿದ ಹೊಟ್ಟೆಗೆ ಅನ್ನ ನೀಡುವ ಜೊತೆಗೆ ಆರೋಗ್ಯವನ್ನು ನೀಡುವುದು ನಿಮ್ಮ ಹೊಣೆಗಾರಿಕೆ. ಅದನ್ನು ಶ್ರದ್ಧೆಯಿಂದ ನಿರ್ವಹಿಸುವ ವಿಶ್ವಾಸವನ್ನು ಜನರಲ್ಲಿ ಮೂಡಿಸಲು ಯಶಸ್ವಿಯಾಗಿದ್ದೀರಿ ಎಂದು ಶ್ಲಾಘಿಸಿದರು.





