ಕೇರಳ: ಹಣವಿಲ್ಲ,ಕೆಲಸವೂ ಇಲ್ಲ, ಹೊರರಾಜ್ಯದವರು ಹೊರಟಿದ್ದಾರೆ, ಊರಿಗೆ

ಕೊಚ್ಚಿ,ನವೆಂಬರ್ 19: ಹಣವೂ ಕೆಲಸವೂ ಇಲ್ಲದೆ ಕೇರಳದಲ್ಲಿ ಕೆಲಸಮಾಡುತ್ತಿದ್ದ ಹೊರರಾಜ್ಯದ ಕಾರ್ಮಿಕರ ಒಂದು ವಿಭಾಗ ಊರಿಗೆ ಹೊರಟಿದೆ. ಪರಿಸ್ಥಿತಿ ಸರಿಯಾದ ಮೇಲೆ ಊರಿಂದ ಮರಳುವ ಚಿಂತನೆ ಇವರದೆಂದು ವರದಿಯೊಂದು ತಿಳಿಸಿದೆ. ನೋಟು ಅಮಾನ್ಯಗೊಳಿಸಿದ ಕ್ರಮದಿಂದಾಗಿ ಕೇರಳದ ಕಟ್ಟಡನಿರ್ಮಾಣ ಕ್ಷೇತ್ರ ಮತ್ತು ಇತರ ಕಂಪೆನಿಗಳು ಕೆಲಸವನ್ನು ಸ್ಥಗಿತಗೊಳಿಸಿವೆ. ಇದರಿಂದಾಗಿ ಹಲವಾರು ಕಾರ್ಮಿಕರು ತಮ್ಮೂರಿಗೆ ಅನಿವಾರ್ಯವಾಗಿ ತೆರಳುತ್ತಿದ್ದಾರೆ.
ಎರ್ನಾಕುಲಂ ರೈಲ್ವೆ ಸ್ಟೇಶನ್‌ನಲ್ಲಿ ಊರಿಗಾಗಿ ರೈಲು ಟಿಕೆಟ್ ಬುಕ್ ಮಾಡಲು ಹೊರರಾಜ್ಯದ ಕಾರ್ಮಿಕರ ದಟ್ಟಣೆ ನಿರ್ಮಾಣವಾಗಿದೆ. ಆದರೆ ಊರಿಗೆ ಹೋಗುವ ದೀರ್ಘದೂರ ರೈಲುಗಳಲ್ಲಿ ಕೆಲವು ದಿವಸಗಳ ವರೆಗೆ ಟಿಕೆಟ್ ಲಭ್ಯವಿಲ್ಲದೆ ಇವರು ಕಂಗೆಟ್ಟಿದ್ದಾರೆ. ಕೇರಳದಲ್ಲಿ ಪಶ್ಚಿಮಬಂಗಾಲ, ಅಸ್ಸಾಂ, ಬಿಹಾರದ ಕಾರ್ಮಿಕರು ಹೆಚ್ಚು ಇದ್ದಾರೆ. ಇಲ್ಲಿಗೆ ಹೋಗುವ ರೈಲುಗಳಲ್ಲಿ ಸೀಟು ಬುಕ್ ಮಾಡಲು ಭಾರೀ ಜನದಟ್ಟಣೆ ಇದೆ. ಡಿಸೆಂಬರ್ 15ರವರೆಗೂ ಸೀಟು ಲಭಿಸುವುದು ಕಷ್ಟ. ವೈಟಿಂಗ್ ಲೀಸ್ಟ್ 200ಕ್ಕಿಂತ ಮೇಲ್ಪಟ್ಟು ಇದೆ.
500,1000ರೂಪಾಯಿ ನೋಟುಗಳನ್ನು ಹಿಂಪಡೆದದ್ದರಿಂದ ಅತ್ಯಂತ ಸಂಕಷ್ಟ ಕಟ್ಟಡ ನಿರ್ಮಾಣ ಕ್ಷೇತ್ರ ಎದುರಿಸುತ್ತಿದೆ ಎಂದು ವರದಿ ತಿಳಿಸಿದೆ.





