ಐಆರ್‌ಆಫ್ ನಿಷೇಧಕ್ಕೆ ಎಸ್‌ಡಿಪಿಐ ಖಂಡನೆ
ಬೆಂಗಳೂರು, ನ.19: ಎನ್‌ಡಿಎ ಮೈತ್ರಿಕೂಟ ಸರಕಾರವು ಇಸ್ಲಾಮಿಕ್ ರಿಸರ್ಚ್ ಫೌಂಡೇಶನ್ (ಐಆರ್‌ಎಫ್) ಸಂಸ್ಥೆಯ ಮೇಲೆ ನಿಷೇಧ ಹೇರುವ ಮೂಲಕ ಮುಸ್ಲಿಮರ ಸಂವಿಧಾನ ಬದ್ಧ ಹಕ್ಕನ್ನು ಕಸಿದುಕೊಂಡಿದೆ ಎಂದು ಎಸ್‌ಡಿಪಿಐ ರಾಷ್ಟ್ರೀಯ ಅಧ್ಯಕ್ಷ ಎ. ಸಯೀದ್ ಆರೋಪಿಸಿದ್ದಾರೆ.
ಐಆರ್‌ಎಫ್ ಸಂಸ್ಥೆಯ ಚಟುವಟಿಕೆಗಳು ಯಾವುದೇ ರೀತಿಯಲ್ಲಿ ಕಾನೂನು ಬಾಹಿರ ಮತ್ತು ದೇಶ ವಿರೋಧಿಯಾಗಿರಲಿಲ್ಲ. ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರ ಕಾನೂನು ಬಾಹಿರವಾಗಿ ಯುಎಪಿಎ ಕಾಯ್ದೆಯಡಿ ಈ ಸಂಸ್ಥೆಯನ್ನು ನಿಷೇಧಿಸಿರುವುದರ ಹಿಂದೆ ಮುಸ್ಲಿಮರ ಧಾರ್ಮಿಕ ಹಕ್ಕುಗಳನ್ನು ಕಸಿದುಕೊಳ್ಳುವ ಉದ್ದೇಶ ಹೊಂದಿದೆ. ಸುಮಾರು 25 ವರ್ಷದಿಂದ ಈ ಸಂಸ್ಥೆಯು ಅತ್ಯಂತ ವ್ಯವಸ್ಥಿತವಾಗಿ, ಕಾನೂನುಬದ್ಧವಾಗಿ, ಶಾಂತಿ ಸಾರುವ ಇಸ್ಲಾಮ್ ಧರ್ಮದ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬಂದಿವೆ. ದೇಶದಲ್ಲಿ ಅಸಹಿಷ್ಣುತೆಯ ವಾತಾವರಣ ಸೃಷ್ಟಿಸುತ್ತಿರುವ ಸಂಘ ಪರಿವಾರದ ವಿರುದ್ಧ ಕಾನೂನು ಕ್ರಮ ಜರುಗಿಸದ ಕೇಂದ್ರ ಸರಕಾರ ಮುಸ್ಲಿಮ್ ವಿದ್ವಾಂಸರ ಧ್ವನಿಯನ್ನು ಅಡಗಿಸುವ ನಿಟ್ಟಿನಲ್ಲಿ ಕಾನೂನುಬಾಹಿರ ಕ್ರಮಗಳನ್ನು ಕೈಗೊಳ್ಳುತ್ತಿದೆ. ಕೋಮುವಾದಿ ತತ್ವವನ್ನು ಬಿತ್ತಿ ಮತಗಳನ್ನು ಪಡೆಯುವುದು ಬಿಜೆಪಿಯ ಮುಖ್ಯ ಗುರಿಯಾಗಿರುತ್ತದೆ. ಕೇಂದ್ರ ಸರಕಾರ ದಮನಿತರ ಪರವಾಗಿರುವುವವರನ್ನು ಯುಎಪಿಎ ಎಂಬ ಕರಾಳ ಕಾನೂನು ಉಪಯೋಗಿಸಿಕೊಂಡು ಜೈಲಿಗೆ ಹಾಕುವ ಮೂಲಕ ದಮನಿತರ ಧ್ವನಿಯನ್ನು ಅಡಗಿಸುವ ಮತ್ತು ನಿಷೇಧಿಸುವ ಪ್ರಯತ್ನ ಮಾಡುತ್ತಿದೆ ಎಂದು ಎ.ಸಯೀದ್ ಆರೋಪಿಸಿದ್ದಾರೆ.





