ಹೊಸ ನೋಟುಗಳಲ್ಲಿ ದೇವನಾಗರಿ ಲಿಪಿ : ಸಿಪಿಐ ನಾಯಕ ಸುಪ್ರೀಂ ಕೋರ್ಟ್‌ಗೆ

ಹೊಸದಿಲ್ಲಿ, ನ.19: ಹೊಸ ರೂ. 2 ಸಾವಿರ ಹಾಗೂ 500ತ ನೋಟುಗಳ ವಿನ್ಯಾಸದಲ್ಲಿ ದೇವನಾಗರಿ ಲಿಪಿಯನ್ನು ಅಳವಡಿಸಿರುವ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಸಿಪಿಐ ನಾಯಕರೊಬ್ಬರು ಸುಪ್ರೀಂ ಕೋರ್ಟ್‌ನ ಕದ ತಟ್ಟಿದ್ದಾರೆ.
ದೇವನಾಗರಿ ಲಿಪಿಯು ಸಂವಿಧಾನದ 343(1)ನೆ ಪರಿಚ್ಚೇದದ ಉಲ್ಲಂಘನೆಯಾಗಿದೆಯೆಂದು ಅವರು ಪ್ರತಿಪಾದಿಸಿದ್ದಾರೆ.
ಈ ಪರಿಚ್ಛೇದವು ಒಕ್ಕೂಟದ ಅಧಿಕೃತ ಭಾಷೆಗೆ ಸಂಬಂಧಿಸಿದುದಾಗಿದೆ. ಸಿಪಿಐ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಬಿನೊಯ್ ವಿಸ್ವಂ ಶುಕ್ರವಾರ ಪರಿಚ್ಛೇದ 32ರನ್ವಯ ಈ ಅರ್ಜಿ ಸಲ್ಲಿಸಿದ್ದಾರೆ. ಕೇಂದ್ರ ಸರಕಾರದ ನೋಟು ರದ್ದತಿ ನಿರ್ಧಾರದ ವಿರುದ್ಧ ದಾಖಲಾಗಿರುವ ಇತರ ಅರ್ಜಿಗಳ ಜೊತೆಯಲ್ಲೇ, ನ.25ರಂದು ಸುಪ್ರೀಂ ಕೋರ್ಟ್ ಅದರ ವಿಚಾರಣೆ ನಡೆಸುವ ನಿರೀಕ್ಷೆಯಿದೆ.
ಬ್ಯಾಂಕ್ ನೋಟು ರಾಷ್ಟ್ರದ ಆರ್ಥಿಕತೆಯ ಗುರುತಾಗಿರುತ್ತದೆ. ಶಾಸನ ಸಭೆಗಳಲ್ಲಿ ಈ ಕುರಿತು ಚರ್ಚೆಗಳನ್ನು ನಡೆಸಿದ ಬಳಿಕ, ನೋಟುಗಳಲ್ಲಿ ಬಳಸುವ ಅಂಕೆಗಳು ಅಂತಾರಾಷ್ಟ್ರೀಯ ಮಾದರಿಯದಾಗಿರಬೇಕು ಎಂದು ನಿರ್ಧರಿಸಲಾಗಿದೆ. ಆದುದರಿಂದಲೇ ಈ ಪರಿಚ್ಛೇದ ಈಗಿನ ರೂಪದಲ್ಲಿದೆಯೆಂದು ವಿಸ್ವಂ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.
ರೂ. 2000 ಹಾಗೂ 500ರ ನೋಟುಗಳಲ್ಲಿ ನೀರಿಗೆ ಬಿದ್ದರೆ ಬಣ್ಣ ಬಿಡುವ ಹಾಗೂ ಅನೇಕ ದೇಶಗಳ ಕರೆನ್ಸಿಗಳನ್ನು ಹೋಲುವ ಇತ್ಯಾದಿ ಹಲವು ಕೊರತೆಗಳಿವೆಯೆಂದು ಅವರು ಉಲ್ಲೇಖಿಸಿದ್ದಾರೆ. ಆದಾಗ್ಯೂ, ಸಂವಿಧಾನವನ್ನು ಅವು ಉ್ಲಂಘಿಸಿರುವುದು ಹೆಚ್ಚು ಕಳವಳಕಾರಿಯಾಗಿದೆಯೆಂದು ವಿಸ್ವಂ ಹೇಳಿದ್ದಾರೆ.
ಅಧಿಕೃತ ಭಾಷೆಗಳಿಗೆ ಸಂಬಂಧಿಸಿದ ಸ್ಥಿತಿಯನ್ನು ಬದಲಾಯಿಸಲು ಕಾಯ್ದೆ ಅಗತ್ಯವೆಂದು 343ನೆ ವಿಧಿಯ ಪ್ರಸ್ತಾವಗಳು ಹೇಳುತ್ತವೆ. ಅಧಿಕೃತ ಭಾಷೆಗಳ ಕಾಯ್ದೆ-1960 ಅಂಕೆಗಳ ಬಳಕೆಯಲ್ಲಿ ಯಾವುದೇ ಬದಲಾವಣೆಗೆ ಅವಕಾಶ ನೀಡುವುದಿಲ್ಲವೆಂದು ವಿಸ್ವಂ ತಿಳಿಸಿದ್ದಾರೆ.







