ಮಹಿಳೆಯರ ಸ್ವಸಹಾಯ ಸಂಘಗಳಿಗೆ ಬಡ್ಡಿ ರಹಿತ ಸಾಲ: ಸಿಎಂ ಘೋಷಣೆ
ಇಂದಿರಾ ಗಾಂಧಿ ಜನ್ಮ ಶತಮಾನೋತ್ಸವ ಸಮಾರಂಭಕ್ಕೆ ಚಾಲನೆ

ಮಂಗಳೂರು, ನ.19: ಇಂದಿರಾ ಗಾಂಧಿ ದೇಶದ ದೀನ ದಲಿತರ ಸಾಮಾಜಿಕ, ಆರ್ಥಿಕ, ಸಶಕ್ತತೆಗೆ ಶ್ರಮಿಸಿದ ಉಕ್ಕಿನ ಮಹಿಳೆ. ಅವರ 100ನೆ ಜನ್ಮ ಶತಮಾನೋತ್ಸವದ ಸಂದರ್ಭದಲ್ಲಿ ರಾಜ್ಯದ ಸ್ವ ಸಹಾಯ ಸಂಘದ ಮಹಿಳೆಯರಿಗೆ ಬಡ್ಡಿ ರಹಿತ ಸಾಲ ನೀಡುವುದಾಗಿ ಸಿದ್ದರಾಮಯ್ಯ ಇಂದು ಘೋಷಿಸಿದರು. ರೈತರ ಸಾಲದಲ್ಲೂ ಶೇ.50ರಷ್ಟು ಸಾಲವನ್ನು ಕೇಂದ್ರ ಸರಕಾರ ಮನ್ನಾ ಮಾಡಿದರೆ ಉಳಿದ ಅರ್ಧಭಾಗವನ್ನು ರಾಜ್ಯ ಸರಕಾರ ಮನ್ನಾ ಮಾಡಲು ಸಿದ್ಧವಿದೆ ಎಂದು ಸಿದ್ದರಾಮಯ್ಯ ಘೋಷಿಸಿದರು.
ನಗರದ ನೆಹರೂ ಮೈದಾನದಲ್ಲಿ ಸ್ಥಾಪಿಸಲಾದ ನೆಹರೂ ಪ್ರತಿಮೆಯನ್ನು ಉದ್ಘಾಟಿಸಿದ ಬಳಿಕ ರಾಜ್ಯ ಕಾಂಗ್ರೆಸ್ ಹಾಗೂ ಜಿಲ್ಲಾ ಕಾಂಗ್ರೆಸ್ ವತಿಯಿಂದ ಹಮ್ಮಿಕೊಂಡ ಇಂದಿರಾ ಗಾಂಧಿ ಜನ್ಮಶತಾಬ್ಧಿ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ 45 ಸಾವಿರ ಕೋಟಿ ರೂ. ರೈತರ ಸಾಲವಿದೆ. ಕಾಂಗ್ರೆಸ್ ಹೋರಾಟ, ಚಳವಳಿಯ ಮೂಲಕ ಬೆಳೆದು ಬಂದ ಪಕ್ಷ. ದೇಶದಲ್ಲಿ ಬದಲಾವಣೆಯಾಗಬೇಕು, ಅಧಿಕಾರ ಸಂಪತ್ತು ಹಂಚಿಕೆಯಾಗಬೇಕು ಎಂದು ಬಯಸಿದ ಇಂದಿರಾ ಗಾಂಧಿ ಇಪ್ಪತ್ತು ಅಂಶಗಳ ಕಾರ್ಯಕ್ರಮ,ಅಲ್ಪ ಸಂಖ್ಯಾತರ ಅಭಿವೃದ್ಧಿಗೆ 15 ಅಂಶಗಳ ಕಾರ್ಯಕ್ರಮಗಳನ್ನು, ಬ್ಯಾಂಕುಗಳ ರಾಷ್ಟ್ರೀಕರಣದ ಮೂಲಕ ದೇಶದ ಬಡವರಿಗೆ ಸ್ವಾಭಿಮಾನದ ಬದುಕು ನೀಡುವ ಕಾರ್ಯಕ್ರಮಗಳನ್ನು ನೀಡಿದವರು. ರಾಜ್ಯದಲ್ಲಿ ದೇವರಾಜ ಅರಸು ಈ ಕಾರ್ಯಕ್ರಮವನ್ನು ಸಮರ್ಪಕವಾಗಿ ಜಾರಿಗೆ ತಂದವರು. ಪ್ರಸಕ್ತ ರಾಜ್ಯ ಸರಕಾರ ಇಂದಿರಾ ಗಾಂಧಿಯವರು ತೋರಿದ ಅಭಿವೃದ್ಧಿ ಕಾರ್ಯಕ್ರಮಗಳ ಹಾದಿಯಲ್ಲಿ ಸಾಗುತ್ತಿದೆ. ಎಲ್ಲಾ ಜಾತಿ,ಧರ್ಮದ ಜನರಿಗೂ ಸಾಮಾಜಿಕ ಹಾಗೂ ಆರ್ಥಿಕ ಸ್ವಾತಂತ್ರ ದೊರೆಯಬೇಕು ಎನ್ನುವುದು ಸರಕಾರದ ನಿಲುವಾಗಿದೆ. ಬಿಜೆಪಿ ರೈತರ ಬಗ್ಗೆ ಚಿಂತನೆ ನಡೆಸುತ್ತಿಲ್ಲಎಂದು ಸಿದ್ದರಾಮಯ್ಯ ತಿಳಿಸಿದರು.
ನೋಟು ಅಮಾನ್ಯ: ತುಘಲಕ್ ದರ್ಬಾರ್
ಕಪ್ಪು ಹಣದ ಕುಳಗಳ ನಿದ್ದೆ ಗೆಡಿಸುತ್ತೇವೆ ಎಂದ ಮೋದಿ ಬಡವರ ನಿದ್ದೆಗೆಡಿಸಿದ್ದಾರೆ ಎಂದು ಸಿದ್ದರಾಮಯ್ಯ ಇದೊಂದು ತುಘಲಕ್ ಸರಕಾರದ ದರ್ಬಾರ್ ಎಂದು ಟೀಕಿಸಿದ್ದಾರೆ. ನೋಟು ಅಮಾನ್ಯಗೊಳಿಸುವ ಕೆಲಸ ಈ ಹಿಂದೆಯೂ ನಡೆದಿದೆ. ಆದರೆ ಜನರನ್ನು ತೊಂದರೆಗೀಡು ಮಾಡಲಿಲ್ಲ. ಕಪ್ಪು ಹಣ ಸಂಗ್ರಹವನ್ನು ತಡೆಯುವ ಯೋಜನೆಗೆ ಕಾಂಗ್ರೆಸ್‌ನ ವಿರೊಧವಿಲ್ಲ. ಆದರೆ ಯಾವುದೇ ಪೂರ್ವ ತಯಾರಿಯಿಲ್ಲದೆ ನೋಟಿನ ಚಲಾವಣೆ ರದ್ದು ಮಾಡಿರುವುದು ಸರಿಯಾದ ಕ್ರಮವಲ್ಲ ಎಂದು ಸಿದ್ದರಾಮಯ್ಯ ಟೀಕಿಸಿದರು.
2,000 ನೋಟಿನ ಚಲಾವಣೆಗೆ ಬವಣೆ
ಸರಕಾರ 1,000 ಹಾಗೂ 500 ರೂ.ನೋಟನ್ನು ರದ್ದು ಪಡಿಸಿದ ಬಳಿಕ 2,000 ರೂ.ನ ನೋಟನ್ನು ಬಿಡುಗಡೆ ಮಾಡಿದೆ. ಇದರಿಂದ ಬಡವರು ಸಂಕಷ್ಟಕ್ಕೀಡಾಗಿದ್ದಾರೆ. ನಾನು ಕೂಡಾ 2,000 ರೂ.ನ ಹೊಸ ನೋಟನ್ನು ಪಡೆದು ತೊಂದರೆಗೊಳಗಾಗಿದ್ದೇನೆ. ಇಂದಿರಾ ಗಾಂಧಿ ಈ ದೇಶ ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಲು ಕಾರಣರಾರು. ಆದರೆ ಮೋದಿ ಈ ದೇಶದ ಜನ ತಮ್ಮ ಹಣ ಪಡೆಯಲು ಎಟಿಎಂಗಳ ಮುಂದೆ ಸರತಿ ಸಾಲಿನಲ್ಲಿ ನಿಲ್ಲುವಂತೆ ಮಾಡಿದ್ದಾರೆ ಎಂದು ಟೀಕಿಸಿದರು.
ಕರಾವಳಿಯಲ್ಲಿ ಕೋಮುಶಕ್ತಿಗಳ ದುಷ್ಕೃತ್ಯಗಳನ್ನು ತಡೆಯಲು ಕಾಂಗ್ರೆಸ್ ಸಾಮರಸ್ಯದ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದರು.
ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಉದ್ಘಾಟನಾ ಕಾರ್ಯಕ್ರಮದಲ್ಲಿ ಇಂದಿರಾ ಗಾಂಧಿ ಯೋಜನೆಯ ನಾಲ್ವರು ಫಲಾನುಭವಿಗಳನ್ನು ವೇದಿಕೆಗೆ ಆಹ್ವಾನಿಸಿ ದೀಪ ಬೆಳಗಿಸಲಾಯಿತು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ.ರಮಾನಾಥ ರೈ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರಕಾರದ ಸಾಧನೆ ಇಂದಿರಾ ಗಾಂಧಿ ಕೈಗೊಂಡ 'ಉಳುವವನೆ ಹೊಲದೊಡೆಯ' ನೀತಿಯ ಫಲಾನುಭವಿಗಳ ಬಗ್ಗೆ ವಿವರಿಸಿ ಸಮಾರಂಭಕ್ಕೆ ಸ್ವಾಗತಿಸಿದರು.
ರಾಜ್ಯ ಆರೋಗ್ಯ ಸಚಿವ ಯು.ಟಿ.ಖಾದರ್, ಸಚಿವ ಕೆ.ಎಚ್.ಪಾಟೀಲ್, ಅರಕಲ ಗೋಡು ಮಂಜು, ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ಬೆಂಗಳೂರು ಮೇಯರ್ ಪದ್ಮಾವತಿ, ಮಂಗಳೂರು ಮೇಯರ್ ಹರಿನಾಥ್, ಮಾಜಿ ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ, ಮಾಜಿ ಸಚಿವೆ ಮೋಟಮ್ಮ, ಬಿ.ಕೆ.ಚಂದ್ರಶೇಖರ್, ಶಾಸಕರಾದ ವಸಂತ ಬಂಗೇರ, ಅಭಯ ಚಂದ್ರ ಜೈನ್, ಜೆ.ಆರ್.ಲೋಬೊ, ಮೊಯ್ದಿನ್ ಬಾವ, ಐವನ್ ಡಿಸೋಜ, ಕಾಂಗ್ರೆಸ್ ಮುಖಂಡರಾದ ಎಸ್.ವಿಶ್ವನಾಥ್, ಪಿ.ವಿ.ಮೋಹನ್, ಮಮತಾ ಗಟ್ಟಿ, ಮಂಜುನಾಥ ಭಂಡಾರಿ ಮೊದಲಾದವರು ಉಪಸ್ಥಿತರಿದ್ದರು.







