ನೋಟು ಬದಲಿಸಲು ಸಾಧ್ಯವಾಗದ ಹತಾಶೆ: ಹೃದಯಾಘಾತದಿಂದ ಇಬ್ಬರ ಸಾವು

ಉತ್ತರಪ್ರದೇಶ, ನ.19: ನೋಟು ಬದಲಾಯಿಸಲು ಸಾಕಷ್ಟು ಹೆಣಗಾಡಿದರೂ ಸಾಧ್ಯವಾಗದ ಅಸಹಾಯಕತೆ, ಹತಾಶೆ ಮತ್ತು ಆಘಾತದಿಂದ ಪ್ರತ್ಯೇಕ ಘಟನೆಗಳಲ್ಲಿ ಇಬ್ಬರು ಹೃದಯಘಾತಕ್ಕೆ ಒಳಗಾಗಿ ಮೃತಪಟ್ಟ ಘಟನೆ ರಾಜ್ಯದ ಅಲಿಗಢ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ನಾಗ್ಲ ಮಾನ್‌ಸಿಂಗ್ ಪ್ರದೇಶದ ನಿವಾಸಿ , 50ರ ಹರೆಯದ ಬಾಬು ಲಾಲ್ ಎಂಬವರ ಮಗಳ ಮದುವೆ ನ.26ರಂದು ನಡೆಯಲಿತ್ತು. ತಮ್ಮಲ್ಲಿದ್ದ ಅಮಾನ್ಯಗೊಂಡ ನೋಟುಗಳನ್ನು ಬದಲಿಸಿ ಮದುವೆ ಖರ್ಚಿಗೆ ಹಣ ಹೊಂದಿಸಲು ನಿರ್ಧರಿಸಿದ್ದ ಇವರು ಕಳೆದ ಮೂರು ದಿನಗಳಿಂದ ಹಲವಾರು ಬ್ಯಾಂಕ್‌ಗಳಿಗೆ ಅಲೆದಾಡಿದರೂ ಹಣ ಹೊಂದಿಸಲಾಗಿಲ್ಲ. ಶುಕ್ರವಾರ ಬ್ಯಾಂಕ್ ಒಂದರಿಂದ ವಾಪಾಸು ಬಂದವರೇ ಎದೆನೋವೆಂದು ತಿಳಿಸಿದಾಗ ಅವರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅದಾಗಲೇ ಬಾಬುಲಾಲ್ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದರು.
ಇನ್ನೊಂದು ಘಟನೆಯಲ್ಲಿ ಜಮಾಲ್‌ಪುರ ಪ್ರದೇಶದ ಮುಹಮ್ಮದ್ ಇದ್ರೀಸ್(45ವರ್ಷ) ತಮ್ಮಲ್ಲಿರುವ ಹಳೆಯ ಕರೆನ್ಸಿ ನೋಟುಗಳನ್ನು ಬದಲಾಯಿಸಿಕೊಳ್ಳಲು ಬ್ಯಾಂಕ್‌ಗೆ ಹೋಗುತ್ತಿದ್ದ ಸಂದರ್ಭ ಹೃದಯಾಘಾತದಿಂದ ಮೃತಪಟ್ಟರು ಎನ್ನಲಾಗಿದೆ. ಇವರು ಯಾವುದೇ ಬ್ಯಾಂಕ್‌ನಲ್ಲಿ ಖಾತೆ ಹೊಂದಿರಲಿಲ್ಲ. ಕಳೆದ ನಾಲ್ಕು ದಿನಗಳಿಂದ ನೋಟು ಬದಲಿಸಿಕೊಳ್ಳಲು ಸ್ಥಳೀಯ ಬ್ಯಾಂಕ್‌ನಲ್ಲಿ ಪ್ರಯತ್ನಿಸಿ ಹತಾಶನಾಗಿದ್ದ. ಇದೇ ಆಘಾತದಿಂದ ಹೃದಯಾಘಾತ ಸಂಭವಿಸಿದೆ ಎಂದು ಮನೆಯವರು ಆರೋಪಿಸಿದ್ದಾರೆ.







