ಮದುವೆಗೆ ಹೆಚ್ಚಿನ ಹಣ ಪಡೆಯುವ ಅವಕಾಶ
ಆರ್‌ಬಿಐ ಸೂಚನೆಗೆ ಕಾಯುತ್ತಿರುವ ಬ್ಯಾಂಕ್‌ಗಳು

ಹೊಸದಿಲ್ಲಿ, ನ.19: ಮದುವೆಯ ಸಂದರ್ಭ ಬ್ಯಾಂಕಿನಿಂದ 2.5 ಲಕ್ಷದಷ್ಟು ಹಣ ಹಿಂಪಡೆಯಲು ಅವಕಾಶ ಮಾಡಿಕೊಡಲಾಗಿದೆ ಎಂದು ಕೇಂದ್ರ ಸರಕಾರ ಈ ವಾರದ ಆರಂಭದಲ್ಲಿ ಹೇಳಿದ್ದರೂ, ಬ್ಯಾಂಕ್‌ಗಳಲ್ಲಿ ಈ ಸೌಲಭ್ಯ ಇನ್ನೂ ಜಾರಿಗೆ ಬಂದಿಲ್ಲ. ರಿಸರ್ವ್ ಬ್ಯಾಂಕಿನಿಂದ ಮಾರ್ಗಸೂಚಿ ಪತ್ರ ದೊರಕದೆ , ಮದುವೆ ಸಂದರ್ಭ ವಧು/ವರರ ಕುಟುಂಬಕ್ಕೆ 2.5 ಲಕ್ಷ ರೂ. ನೀಡಲು ಅಸಾಧ್ಯವಾಗಿದೆ. ಆರ್‌ಬಿಐಯ ನಿರ್ದೇಶನಕ್ಕಾಗಿ ಕಾಯುತ್ತಿದ್ದೇವೆ ಎಂದು ಪಂಜಾಬ್ ನ್ಯಾಷನಲ್ ಬ್ಯಾಂಕ್‌ನ ನಿರ್ದೇಶಕಿ ಉಷಾ ಅನಂತಸುಬ್ರಮಣಿಯನ್ ತಿಳಿಸಿದ್ದಾರೆ.
ಸೋಮವಾರ ಆರ್‌ಬಿಐಯಿಂದ ನಿರ್ದೇಶನ ಬರಬಹುದು ಮತ್ತು ಮಂಗಳವಾರದಿಂ ಬ್ಯಾಂಕ್‌ಗಳು ಹಣ ವಿತರಿಸಬಹುದು ಎಂಬ ನಿರೀಕ್ಷೆಯಿದೆ. ವಧುವಿನ ಕುಟುಂಬದವರು 2.5 ಲಕ್ಷ, ವರನ ಕುಟುಂಬದವರು 2.5 ಲಕ್ಷ ಪಡೆಯುವ ಅವಕಾಶವಿದೆ ಎಂದವರು ತಿಳಿಸಿದ್ದಾರೆ. ಬ್ಯಾಂಕಿನ 9 ಸಾವಿರ ಎಟಿಎಂಗಳ ಪೈಕಿ 2 ಸಾವಿರ ಎಟಿಎಂಗಳನ್ನು ಮರುಹೊಂದಿಸುವ ಕಾರ್ಯ ಪೂರ್ಣಗೊಂಡಿದೆ. ಮುಂದಿನ ವಾರ ಇನ್ನಷ್ಟು ಎಟಿಎಂಗಳನ್ನು ಮರುಹೊಂದಿಸಲಾಗುವುದು ಎಂದರು. ಬ್ಯಾಂಕ್‌ಗಳಲ್ಲಿ ಕಡಿಮೆ ದರದ ಠೇವಣಿಯ ಹೆಚ್ಚಳದಿಂದ ಬಡ್ಡಿದರ ಕಡಿಮೆಯಾಗುವ ಸಾಧ್ಯತೆಯ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಾವು ಪರಿಸ್ಥಿತಿಯನ್ನು ಪರಾಮರ್ಶಿಸುತ್ತಿದ್ದೇವೆ. ನಿರಖು ಠೇವಣಿ(ಫಿಕ್ಸೆಡ್ ಡಿಪಾಸಿಟ್) ಬಡ್ಡಿದರದಲ್ಲಿ ಕಡಿತವಾಗುವ ಸಂಭವವಿದೆ ಎಂದು ತಿಳಿಸಿದರು. ಸರಕಾರ ನೋಟು ಅಮಾನ್ಯ ನಿರ್ಧಾರ ಪ್ರಕಟಿಸಿದ ಬಳಿಕ ಬ್ಯಾಂಕ್‌ಗಳಲ್ಲಿ 47 ಸಾವಿರ ಕೋಟಿ ರೂ. ಠೇವಣಿ ಜಮೆಯಾಗಿದೆ.







