ಆಜಾದ್ ಹೇಳಿಕೆ ಸಮರ್ಥಿಸಿದ ಶಿವಸೇನೆ

ಮುಂಬೈ, ನ.19: ನೋಟು ಅಮಾನ್ಯ ಕ್ರಮದ ಪರಿಣಾಮ ದೇಶದಲ್ಲಿ ಸಂಭವಿಸಿದ ಸಾವು ಹಾಗೂ ಕಾಶ್ಮೀರದ ಉರಿ ಪ್ರಾಂತ್ಯದಲ್ಲಿ ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ ಮೃತಪಟ್ಟವರ ಮಧ್ಯೆ ಹೋಲಿಕೆ ಮಾಡುವ ರೀತಿಯಲ್ಲಿ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಮುಖಂಡ ಗುಲಾಂ ನಬಿ ಆಜಾದ್ ಅವರ ಹೇಳಿಕೆಯನ್ನು ಶಿವಸೇನೆ ಸಮರ್ಥಿಸಿಕೊಂಡಿದೆ. ಕ್ಷಮೆ ಕೇಳಿದೊಡನೆ ಸತ್ಯವನ್ನು ಬದಲಾಯಿಸಲಾಗದು ಎಂದು ತಿಳಿಸಿದೆ.
ಆಜಾದ್ ಹೇಳಿಕೆಯನ್ನು ತೀವ್ರವಾಗಿ ಟೀಕಿಸಿದ್ದ ಬಿಜೆಪಿ, ತಕ್ಷಣ ಅವರು ಕ್ಷಮೆ ಯಾಚಿಸಬೇಕೆಂದು ಆಗ್ರಹಿಸಿತ್ತು. ಆದರೆ ರಾಜ್ಯಸಭೆಯಲ್ಲಿ ವಿಪಕ್ಷ ನಾಯಕರಾಗಿರುವ ಆಜಾದ್ ಕ್ಷಮೆ ಯಾಚಿಸಲು ನಿರಾಕರಿಸಿದ್ದರು.
ಆಜಾದ್ ಕ್ಷಮೆ ಕೋರಿದಾಕ್ಷಣ ಸತ್ಯ ಬದಲಾಗುತ್ತದೆಯೇ ಎಂದು ಶಿವಸೇನೆಯ ಮುಖವಾಣಿ ‘ಸಾಮ್ನಾ’ದ ಸಂಪಾದಕೀಯ ಬರಹದಲ್ಲಿ ಕೇಳಲಾಗಿದೆ. ಉರಿ ದಾಳಿಯಲ್ಲಿ 20 ಯೋಧರು ಹುತಾತ್ಮರಾದರು. ನೋಟು ಅಮಾನ್ಯಗೊಳಿಸಿದ ಕಾರಣದಿಂದ 40 ದೇಶಭಕ್ತರು (ನೋಟು ಬದಲಿಸಿಕೊಳ್ಳಲು ಬ್ಯಾಂಕ್ ಎದುರು ಕ್ಯೂ ನಿಂತು ಬಸವಳಿದು) ಸಾವನ್ನಪ್ಪಿದರು. ಎರಡೂ ಘಟನೆಗಳಲ್ಲಿ ವ್ಯತ್ಯಾಸ ಇರುವುದು ಆಕ್ರಮಣ ನಡೆಸಿದವರ ವಿಷಯದಲ್ಲಿ. ಉರಿ ದಾಳಿಯ ಹಿಂದೆ ಪಾಕಿಸ್ತಾನ ಇತ್ತು. ಆದರೆ ನೋಟು ಅಮಾನ್ಯಗೊಳಿಸಿದ ವಿಷಯದಲ್ಲಿ ಆದ ಪ್ರಾಣನಷ್ಟದ ಹಿಂದೆ ನಮ್ಮದೇ ಆಡಳಿ ಪಕ್ಷದವರು ಇದ್ದಾರೆ ಎಂದು ಬಿಜೆಪಿ ನೇತೃತ್ವದ ಕೇಂದ್ರ ಸರಕಾರದ ಅಂಗ ಪಕ್ಷವಾಗಿರುವ ಶಿವಸೇನೆ ಹೇಳಿದೆ. ಹಣದುಬ್ಬರ, ಆರ್ಥಿಕ ಕುಸಿತ ಅಥವಾ ನಿರುದ್ಯೋಗದ ಕಾರಣ ಸತ್ತವರ ಸಂಖ್ಯೆ 40 ಲಕ್ಷ ತಲುಪಿದರೂ ಇವರೆಲ್ಲಾ ದೇಶಪ್ರೇಮಿಗಳು ಎಂದು ಈ ಸರಕಾರ ಹೇಳಬಹುದು.ಇದೇ ಸ್ಥಿತಿಯಲ್ಲಿ ಮುಂದುವರಿದರೆ ಇಡೀ ದೇಶವನ್ನು ಹುತಾತ್ಮ ರಾಷ್ಟ್ರ ಎಂದು ಕರೆಯುವ ದಿನ ಬರಬಹುದು ಎಂದು ಶಿವಸೇನೆ ತಿಳಿಸಿದೆ. ನೋಟು ಅಮಾನ್ಯಗೊಳಿಸಿರುವ ಕೇಂದ್ರ ಸರಕಾರದ ಕ್ರಮವನ್ನು ಶಿವಸೇನೆ ವಿರೋಧಿಸಿದ್ದು, ಕೇಂದ್ರದ ನಿರ್ಧಾರವನ್ನು ಖಂಡಿಸಿ ದಿಲ್ಲಿಯಲ್ಲಿ ಕೆಲವು ವಿಪಕ್ಷಗಳು ನಡೆಸುತ್ತಿರುವ ಪ್ರತಿಭಟನೆಗೆ ಕೈಜೋಡಿಸಿದೆ.







