ನೋಟು ಅಮಾನ್ಯದಿಂದ ದೀರ್ಘಾವಧಿ ಪರಿಣಾಮ : ಚಿದಂಬರಂ

ಮುಂಬೈ, ನ.19: ನೋಟು ಅಮಾನ್ಯಗೊಳಿಸುವ ನಿರ್ಧಾರದ ಬಗ್ಗೆ ಸೂಕ್ತ ಚಿಂತನೆ ನಡೆಸಿರಲಿಲ್ಲ ಎಂದಿರುವ ಮಾಜಿ ವಿತ್ತ ಸಚಿವ ಪಿ.ಚಿದಂಬರಂ, ಇದರ ಪರಿಣಾಮ ನಿರೀಕ್ಷೆಗೂ ಮೀರಿ ದೀರ್ಘ ಕಾಲೀನವಾಗಿದೆ ಎಂದಿದ್ಧಾರೆ. ಇಂತಹ ಪ್ರಮುಖ ನಿರ್ಧಾರ ಕೈಗೊಳ್ಳುವ ಮೊದಲು ಸರಕಾರ ಪ್ರಧಾನ ಆರ್ಥಿಕ ಸಲಹೆಗಾರರ ಜೊತೆ ಸಮಾಲೋಚಿಸಿರಲಿಲ್ಲವೇ ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
2016ರ ಮಾರ್ಚ್ 31ರ ವೇಳೆ ದೇಶದಲ್ಲಿ 16.24 ಲಕ್ಷ ಕೋಟಿ ಮೊತ್ತದ ಬ್ಯಾಂಕ್ ನೋಟುಗಳು ಚಲಾವಣೆಯಲ್ಲಿದ್ದವು ಎಂದು ರಿಸರ್ವ್ ಬ್ಯಾಂಕ್‌ನ ವಾರ್ಷಿಕ ವರದಿಯಲ್ಲಿ ತಿಳಿಸಲಾಗಿದೆ. ಇದರಲ್ಲಿ ಶೇ.86ರಷ್ಟು 500 ಮತ್ತು 1000 ರೂ. ಮುಖಬೆಲೆಯ ನೋಟುಗಳಾಗಿದ್ದು ಇದನ್ನು ನ.8ರಂದು ಕೇಂದ್ರ ಸರಕಾರ ಅಮಾನ್ಯಗೊಳಿಸಿತ್ತು.
ನೋಟು ಅಮಾನ್ಯ ನಿರ್ಧಾರದಿಂದ ಉಂಟಾದ ಪ್ರಥಮ ಪರಿಣಾಮವೆಂದರೆ ಚಲಾವಣೆಯಲ್ಲಿರುವ ಶೇ.86ರಷ್ಟು ಬ್ಯಾಂಕ್ ನೋಟುಗಳನ್ನು ರದ್ದು ಪಡಿಸಿರುವುದು. ಈ ಪರಿಣಾಮ ಕೆಲವು ವಾರ ಇರುತ್ತದೆ. ಬಳಿಕ ದ್ವಿತೀಯ ಪರಿಣಾಮದ ಸರದಿ ಎಂದು ಚಿದಂಬರಂ ಹೇಳಿದರು. ಸರಕಾರದಲ್ಲಿರುವ ಏಕೈಕ ಆರ್ಥಿಕ ತಜ್ಞ ಡಾ. ಅರವಿಂದ ಸುಬ್ರಮಣಿಯನ್ ಅವರೊಡನೆ ಸಮಾಲೋಚಿಸಿಲ್ಲ ಎಂಬುದು ನನ್ನ ಅನಿಸಿಕೆಯಾಗಿದೆ ಎಂದರು.





