ದೇಶದ ವಿವಿಗಳ ಶಿಕ್ಷಣ ಗುಣಮಟ್ಟ ನಿರೀಕ್ಷಿತ ಮಟ್ಟದಲ್ಲಿಲ್ಲ: ಸಹಸ್ರಬುದ್ಧೆ

ಮಣಿಪಾಲ, ನ.19: ಕಳೆದೆರಡು ದಶಕಗಳಲ್ಲಿ ಭಾರತದಲ್ಲಿ ಕಾಲೇಜು ಹಾಗೂ ವಿವಿಗಳ ಸಂಖ್ಯೆಯಲ್ಲಿ ಭಾರೀ ಹೆಚ್ಚಳವಾದರೂ, ಕೆಲವೊಂದು ವಿವಿಗಳನ್ನು ಹೊರತು ಪಡಿಸಿ ಉಳಿದಂತೆ ಹೆಚ್ಚಿನ ವಿಶ್ವವಿದ್ಯಾಲಯಗಳ ಶೈಕ್ಷಣಿಕ ಗುಣಮಟ್ಟ ನಿರೀಕ್ಷೆಗಿಂತ ತೀರಾ ಕೆಳಮಟ್ಟದಲ್ಲಿದೆ ಎಂದು ಹೊಸದಿಲ್ಲಿಯ ಎಐಸಿಟಿಇಯ ಅಧ್ಯಕ್ಷ ಡಾ.ಅನಿಲ್ ದತ್ತಾತ್ರೇಯ ಸಹಸ್ರಬುದ್ಧೆ ಅಭಿಪ್ರಾಯ ಪಟ್ಟಿದ್ದಾರೆ.
ಮಣಿಪಾಲದ ಕೆಎಂಸಿ ಗ್ರೀನ್ಸ್‌ನಲ್ಲಿ ಇಂದು ಸಂಜೆ ನಡೆದ ಮಣಿಪಾಲ ವಿವಿಯ 23ನೆ ಘಟಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಡಾ. ಸಹಸ್ರಬುದ್ಧೆ ಘಟಿಕೋತ್ಸವ ಭಾಷಣದಲ್ಲಿ ಮಾತನಾಡುತಿದ್ದರು.
ಭಾರತದಲ್ಲಿಂದು 40,000ಕ್ಕೂ ಅಧಿಕ ಸರಕಾರಿ ಹಾಗೂ ಖಾಸಗಿ ಕಾಲೇಜುಗಳಿವೆ. ಅದೇ ರೀತಿ 780ಕ್ಕೂ ಅಧಿಕ ವಿವಿಗಳಿವೆ. ಇವುಗಳಲ್ಲಿ 45 ವೈದ್ಯಕೀಯ ವಿವಿ ಹಾಗೂ 90 ತಾಂತ್ರಿಕ ವಿವಿಗಳಿವೆ. ಇದರಿಂದ ಉನ್ನತ ಶಿಕ್ಷಣ ಜನಸಾಮಾನ್ಯರಿಗೂ ಸಿಗುವಂತಾಗಿದೆ. ಉನ್ನತ ಶಿಕ್ಷಣ ಪಡೆಯುವವರ ಪ್ರಮಾಣ ಈಗ ಶೇ.24.3 (34.2 ಮಿಲಿಯನ್ ವಿದ್ಯಾರ್ಥಿಗಳು) ಇದೆ. ಆದರೆ ಶೈಕ್ಷಣಿಕ ಗುಣಮಟ್ಟ ಮಾತ್ರ ಈಗಲೂ ತೀರಾ ಕೆಳಮಟ್ಟದಲ್ಲಿರುವುದು ಚಿಂತೆಗೆ ಕಾರಣವಾಗಿದೆ.
ವಿವಿಗಳು, ಕಾಲೇಜುಗಳು ಹೆಚ್ಚಾದಂತೆ ಶಿಕ್ಷಣದ ಗುಣಮಟ್ಟ ಹೆಚ್ಚುತ್ತಿಲ್ಲ. ನೆಸ್ಸ್‌ಕಾಮ್, ಸಿಐಏ ಹಾಗೂ ಎಫ್‌ಐಸಿಸಿಐನಂಥ ಕೈಗಾರಿಕಾ ಮಂಡಳಿಗಳು ಉದ್ಯೋಗಕ್ಕೆ ಯೋಗ್ಯರಾದ ಪದವೀಧರರು ಸಿಗದ ಕುರಿತು ಆಕ್ರೋಶ ವ್ಯಕ್ತಪಡಿಸುತ್ತಿವೆ. ಹೀಗಾಗಿ ಪದವೀಧರರಲ್ಲಿ ನಿರುದ್ಯೋಗವೂ ಹೆಚ್ಚಾಗುತ್ತಿದೆ. ಇಂದಿನ ವಿದ್ಯಾರ್ಥಿಗಳಲ್ಲಿ ಹಲವು ಕೊರತೆಗಳನ್ನು ಅವು ಬೊಟ್ಟುಮಾಡುತ್ತಿವೆ ಎಂದರು.
ವಿಶ್ವದ ಅಗ್ರ ರ್ಯಾಂಕಿಂಗ್ ವಿವಿಗಳಲ್ಲಿ ನಮ್ಮ ಯಾವುದೇ ವಿವಿ ಸ್ಥಾನ ಪಡೆಯುತ್ತಿಲ್ಲ. ವಿಶ್ವದ ಅಗ್ರ 100 ವಿವಿಗಳಲ್ಲಿ ನಮ್ಮ 10ರಿಂದ 20 ವಿವಿಗಳು ಸ್ಥಾನ ಪಡೆಯುವಂತೆ ನಾವು ಕಾರ್ಯಯೋಜನೆಯನ್ನು ರೂಪಿಸಬೇಕು. ಇದಕ್ಕಾಗಿ ಗುಣಮಟ್ಟದ ಹೆಚ್ಚಳಕ್ಕೆ ಕಾರ್ಯತಂತ್ರವನ್ನು ಯೋಜಿಸಬೇಕು. ಈ ನಿಟ್ಟಿನಲ್ಲಿ ರಾಷ್ಟ್ರೀಯ ವಿದ್ಯಾಸಂಸ್ಥೆಗಳ ರ್ಯಾಂಕಿಂಗ್‌ನ್ನು ರೂಪಿಸಲಾಗುತ್ತಿದೆ ಎಂದು ಡಾ.ಸಹಸ್ರಬುದ್ಧೆ ತಿಳಿಸಿದರು.
ಇದಕ್ಕಾಗಿ ಸಂಶೋಧನೆಗೆ ಹೆಚ್ಚಿನ ಒತ್ತು ನೀಡಬೇಕಿದೆ. ಕಳೆದ ವರ್ಷ 21,830 ಮಂದಿ ಪಿಎಚ್‌ಡಿ ಪದವಿ ಪಡೆದಿದ್ದರೆ, 1,17,301 ಮಂದಿ ಸಂಶೋಧನೆಗೆ ಹೆಸರು ನೊಂದಾಯಿಸಿಕೊಂಡಿದ್ದಾರೆ. ಸಂಶೋಧನೆ, ಮಾಸ್ಟರ್ಸ್ ಹಾಗೂ ಪಿಎಚ್‌ಡಿಗೆ ವಿಶೇಷ ಒತ್ತು ನೀಡಿ ವಿಶ್ವ ಮಟ್ಟದ ಕಾಲೇಜುಗಳ ಸ್ಥಾಪನೆಗೆ ಮುಂದಾಗಬೇಕು ಎಂದರು.
ಎಐಸಿಟಿಇ, ವಿದ್ಯಾರ್ಥಿಗಳ ಸಬಲೀಕರಣ, ಸವಾಲುಗಳನ್ನು ಎದುರಿಸಲು ಎಂಎಚ್‌ಆರ್‌ಡಿ, ಐ4ಸಿ ಹಾಗೂ ಕೇಂದ್ರ ಸರಕಾರದ ವಿವಿಧ ಇಲಾಖೆಗಳೊಂದಿಗೆ ಸೇರಿ ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್‌ನ್ನು ಪ್ರಾರಂಭಿಸಿದೆ. ಇದು ದೇಶದ ಹಲವು ಸಮಸ್ಯೆಗಳಿಗೆ ಪರಿಹಾರವನ್ನು ನೀಡುವ ಸಾಧ್ಯತೆ ಇದೆ. ಇದರೊಂದಿಗೆ ತಾಂತ್ರಿಕ ಕಾಲೇಜುಗಳಲ್ಲಿ ಸ್ಟಾರ್ಟ್‌ಅಪ್ ಸಂಸ್ಕೃತಿ ಬೆಳೆಸಲು ಎಐಸಿಟಿಇ ಕಾರ್ಯಕ್ರಮ ರೂಪಿಸಿದ್ದು, ದೇಶದ ರಾಷ್ಟ್ರಪತಿ ಗಳು ಮೂರು ದಿನಗಳ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ ಎಂದರು.
ಮಣಿಪಾಲ ವಿವಿಯ ಎಂಐಟಿ ಹಳೆವಿದ್ಯಾರ್ಥಿಯಾಗಿರುವ, ನೋಕಿಯಾ ಕಂಪೆನಿಯ ಹಳೆವಿದ್ಯಾರ್ಥಿ ರಾಜೀವ್ ಸೂರಿ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು. ಘಟಕೋತ್ಸದಲ್ಲಿ 1000ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಮಣಿಪಾಲ ವಿವಿ ಪ್ರೊ ಚಾನ್ಸಲರ್ ಡಾ.ಎಚ್.ಎಸ್. ಬಲ್ಲಾಳ್ ಘಟಕೋತ್ಸವಕ್ಕೆ ಚಾಲನೆ ನೀಡಿದರೆ, ಪ್ರೊ.ವೈಸ್ ಚಾನ್ಸಲರ್ ಡಾ.ವಿ.ಸುರೇಂದ್ರ ಶೆಟ್ಟಿ ಅತಿಥಿಗಳನ್ನು ಸ್ವಾಗತಿಸಿದರು. ಕುಲಪತಿ ಡಾ.ಎಚ್. ವಿನೋದ್ ಭಟ್ ಮಣಿಪಾಲ ವಿವಿಯ ಪಕ್ಷಿನೋಟವನ್ನು ನೀಡಿದರು.
ಎಂಐಟಿಯ ನಿರ್ದೇಶಕ ಡಾ.ಜಿ.ಕೆ.ಪ್ರಭು ಹಾಗೂ ಡಾ.ಕೆ. ರಾಮನಾರಾಯಣ್ ಅವರು ಅತಿಥಿಗಳನ್ನು ಪರಿಚಯಿಸಿದರೆ, ಡಾ.ಬಲ್ಲಾಳ್ , ರಾಜೀವ್ ಸೂರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಿದರು. ಡಾ.ವಿನೋದ್ ಥಾಮಸ್ ಪದವೀಧರರ ವಿವರಗಳನ್ನು ನೀಡಿದರು. ರಿಜಿಸ್ಟ್ರಾರ್ ಡಾ.ನಾರಾಯಣ ಸಭಾಹಿತ್ ವಂದಿಸಿ ಡಾ.ಅಪರ್ಣ ರಘು ಕಾರ್ಯಕ್ರಮ ನಿರೂಪಿಸಿದರು.







