ತ್ರಿಕೋನ ಏಕದಿನ ಸರಣಿ: ವೆಸ್ಟ್‌ಇಂಡೀಸ್-ಝಿಂಬಾಬ್ವೆ ಪಂದ್ಯ ಟೈ
ಉಭಯ ತಂಡಗಳ ಪ್ರದರ್ಶನದಲ್ಲೂ ಸಾಮ್ಯತೆ!

ಬುಲಾವಯೊ, ನ.19: ವೆಸ್ಟ್‌ಇಂಡೀಸ್ ಹಾಗೂ ಆತಿಥೇಯ ಝಿಂಬಾಬ್ವೆ ನಡುವೆ ಶನಿವಾರ ಇಲ್ಲಿ ನಡೆದ ತ್ರಿಕೋನ ಏಕದಿನ ಸರಣಿಯ ಮೂರನೆ ಪಂದ್ಯ ಟೈನಲ್ಲಿ ಕೊನೆಗೊಂಡಿದೆ.
ಮೊದಲು ಬ್ಯಾಟಿಂಗ್ ಮಾಡಿದ್ದ ಝಿಂಬಾಬ್ವೆ ನಿಗದಿತ 50 ಓವರ್‌ಗಳಲ್ಲಿ 257 ರನ್ ಗಳಿಸಿ ಆಲೌಟಾಯಿತು. ಎರ್ವಿನ್(92) ಹಾಗೂ ಸಿಕಂದರ್ ರಾಜಾ(77) ಆತಿಥೇಯರಿಗೆ ಆಸರೆಯಾದರು.
ಗೆಲ್ಲಲು 258 ರನ್ ಗುರಿ ಪಡೆದ ವಿಂಡಿಸ್ 50 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 257 ರನ್ ಗಳಿಸಿ ಪಂದ್ಯವನ್ನು ಟೈಗೊಳಿಸಿತು.
ವಿಕೆಟ್‌ಕೀಪರ್ ಹೋಪ್(101) ಹಾಗೂ ಆರಂಭಿಕ ಆಟಗಾರ ಬ್ರಾತ್‌ವೈಟ್(78) ವಿಂಡೀಸ್ ಟೈ ಸಾಧಿಸುವಲ್ಲಿ ಪ್ರಮುಖ ಕಾಣಿಕೆ ನೀಡಿದರು.
ಝಿಂಬಾಬ್ವೆ ಪರ ಟಿರಿಪಾನೊ(2-26) ಹಾಗೂ ವಿಲಿಯಮ್ಸ್(2-52) ತಲಾ 2 ವಿಕೆಟ್ ಪಡೆದರು. ಶತಕ ಬಾರಿಸಿದ ಹೋಪ್ ಪಂದ್ಯಶ್ರೇಷ್ಠ ಪ್ರಶಸ್ತಿ ಸ್ವೀಕರಿಸಿದರು.
ಪಂದ್ಯದಲ್ಲಿ ಟೈ ಸಾಧಿಸಿರುವ ಉಭಯ ತಂಡಗಳ ಪ್ರದರ್ಶನದಲ್ಲೂ ಸಾಮ್ಯತೆ ಕಂಡು ಬಂದಿತ್ತು. ಎರಡೂ ತಂಡಗಳು ಆರಂಭಿಕ ಬ್ಯಾಟ್ಸ್‌ಮನ್‌ಗಳನ್ನು ಬೇಗನೆ ಕಳೆದುಕೊಂಡವು. 3ನೆ ವಿಕೆಟ್‌ನಲ್ಲಿ ಎರಡೂ ತಂಡಗಳು ಶತಕದ ಜೊತೆಯಾಟ ನಡೆಸಿದವು. ಝಿಂಬಾಬ್ವೆ ಪರ ಎರ್ವಿನ್-ಸಿಕಂದರ್ ಜೋಡಿ 144 ರನ್ ಸೇರಿಸಿದರೆ, ವಿಂಡೀಸ್‌ನ ಪರ ಬ್ರಾತ್‌ವೈಟ್ ಹಾಗೂ ಹೋಪ್ 162 ರನ್ ಸೇರಿಸಿದರು.
ವಿಂಡೀಸ್‌ಗೆ 5 ಎಸೆತಗಳಲ್ಲಿ 3 ರನ್ ಅಗತ್ಯವಿದ್ದಾಗ ಕಾರ್ಲಸ್ ಬ್ರಾತ್‌ವೈಟ್ ಔಟಾಗಿದ್ದು ಪಂದ್ಯದ ಟರ್ನಿಂಗ್ ಪಾಯಿಂಟ್ ಆಗಿತ್ತು.







