ಬ್ರಾಡ್ ಫಿಟ್‌ನೆಸ್ ವರದಿಯ ನಿರೀಕ್ಷೆಯಲ್ಲಿ ಇಂಗ್ಲೆಂಡ್

ವಿಶಾಖಪಟ್ಟಣ, ನ.19: ಭಾರತ ವಿರುದ್ಧ ವಿಶಾಖಪಟ್ಟಣದಲ್ಲಿ ನಡೆಯುತ್ತಿರುವ ದ್ವಿತೀಯ ಟೆಸ್ಟ್‌ನ ವೇಳೆ ಬಲಗಾಲಿನ ಸ್ಕಾನಿಂಗ್‌ಗೆ ಒಳಗಾಗಿರುವ ವೇಗದ ಬೌಲರ್ ಸ್ಟುವರ್ಟ್ ಬ್ರಾಡ್‌ರ ಫಿಟ್‌ನೆಸ್ ವರದಿಗಾಗಿ ಇಂಗ್ಲೆಂಡ್ ತಂಡ ಆತಂಕದಿಂದ ಕಾಯುತ್ತಿದೆ.
ಬ್ರಾಡ್ ಎರಡನೆ ಟೆಸ್ಟ್‌ನ ಮೊದಲ ದಿನ ಮಣಿಕಟ್ಟು ಹಾಗೂ ಕಾಲಿನ ನೋವಿನ ಕಾರಣದಿಂದ ಮೈದಾನದಿಂದ ಹೊರ ನಡೆದಿದ್ದರು. ಶುಕ್ರವಾರ ಎರಡನೆ ಹೊಸ ಚೆಂಡಿನಲ್ಲಿ ಕೇವಲ 5 ಓವರ್ ಬೌಲಿಂಗ್ ಮಾಡಿದ್ದರು. ಆದರೆ, ಇದೀಗ ವೈದ್ಯಕೀಯ ತಂಡ ಬ್ರಾಡ್‌ರ ಗಾಯವನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ.
ಬ್ರಾಡ್ ಸ್ಕಾನಿಂಗ್‌ಗೆ ಒಳಪಟ್ಟಿದ್ದು, ಅಗತ್ಯವಿದ್ದರೆ ಮಾತ್ರ ಎರಡನೆ ಇನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡುತ್ತಾರೆ. 2ನೆ ಟೆಸ್ಟ್‌ನ ಉಳಿದ ದಿನ ಬ್ರಾಡ್ ಲಭ್ಯವಿರುತ್ತಾರೊ ಇಲ್ಲವೋ ಎಂದು ಈಗಲೇ ಹೇಳಲು ಸಾಧ್ಯವಿಲ್ಲ ಎಂದು ಇಂಗ್ಲೆಂಡ್‌ನ ಅಧಿಕಾರಿಗಳು ತಿಳಿಸಿದ್ದಾರೆ.
ಬ್ರಾಡ್ ಎರಡನೆ ಟೆಸ್ಟ್‌ನಲ್ಲಿ ಮೊದಲ ಇನಿಂಗ್ಸ್‌ನ 2ನೆ ಓವರ್‌ನಲ್ಲಿ ಭಾರತದ ಆರಂಭಿಕ ಆಟಗಾರ ಲೋಕೇಶ್ ರಾಹುಲ್‌ರನ್ನು ಶೂನ್ಯಕ್ಕೆ ಔಟ್ ಮಾಡಿದ್ದರು. ಆದರೆ, ಅವರಿಗೆ ಗಾಯದ ಸಮಸ್ಯೆಯನ್ನು ಎದುರಿಸಿದ್ದರು.
ಈಗಾಗಲೇ ಪ್ರಮುಖ ವೇಗದ ಬೌಲರ್ ಕ್ರಿಸ್ ವೋಕ್ಸ್ ಸೇವೆಯಿಂದ ವಂಚಿತವಾಗಿರುವ ಇಂಗ್ಲೆಂಡ್‌ಗೆ ಬ್ರಾಡ್ ಗಾಯಗೊಂಡಿರುವುದು ತಲೆನೋವಾಗಿ ಪರಿಣಮಿಸಿದೆ. ವೋಕ್ಸ್ ಮಂಡಿನೋವಿನಿಂದ ಬಳಲುತ್ತಿದ್ದು, ಅವರ ಬದಲಿಗೆ ತಂಡದಲ್ಲಿ ಸ್ಥಾನ ಪಡೆದಿರುವ ಜೇಮ್ಸ್ ಆ್ಯಂಡರ್ಸನ್ ಕೂಡ ಭುಜನೋವಿನಿಂದ ಚೇತರಿಸಿಕೊಳ್ಳುತ್ತಿದ್ದಾರೆ.
ಭಾರತ ವಿರುದ್ಧ ಐದು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿರುವ ಇಂಗ್ಲೆಂಡ್ ತಂಡದ ಮೀಸಲು ಬೌಲರ್‌ಗಳಾಗಿ ಸ್ಟೀವನ್ ಫಿನ್ ಹಾಗೂ ಜಾಕ್ ಬಾಲ್ ತಂಡದಲ್ಲಿದ್ದಾರೆ.







