ಮೊದಲ ಟೆಸ್ಟ್: ಗೆಲುವಿನತ್ತ ನ್ಯೂಝಿಲೆಂಡ್
ವಾಗ್ನರ್‌ಗೆ 100ನೆ ವಿಕೆಟ್ ಸಂಭ್ರಮ

ಕ್ರೈಸ್ಟ್‌ಚರ್ಚ್, ನ.19: ಪಾಕಿಸ್ತಾನ ತಂಡವನ್ನು ಎರಡನೆ ಇನಿಂಗ್ಸ್‌ನಲ್ಲೂ ಬೆಂಬಿಡದೇ ಕಾಡಿದ ಕಿವೀಸ್ ಪಡೆ ಮೊದಲ ಟೆಸ್ಟ್ ಪಂದ್ಯವನ್ನು ಗೆದ್ದುಕೊಳ್ಳುವತ್ತ ದಿಟ್ಟ ಹೆಜ್ಜೆ ಇಟ್ಟಿದೆ.
ಪಂದ್ಯದ ಮೂರನೆ ದಿನವಾದ ಶನಿವಾರ ನ್ಯೂಝಿಲೆಂಡ್‌ನ ವೇಗದ ಬೌಲರ್‌ಗಳಾದ ಟ್ರೆಂಟ್ ಬೌಲ್ಟ್ ಹಾಗೂ ನೀಲ್ ವಾಗ್ನರ್ ದಾಳಿಗೆ ಸಿಲುಕಿದ ಪ್ರವಾಸಿ ಪಾಕ್ ತಂಡ ದಿನದಾಟದಂತ್ಯಕ್ಕೆ 129 ರನ್‌ಗೆ 7 ವಿಕೆಟ್‌ಗಳನ್ನು ಕಳೆದುಕೊಂಡಿದೆ. ಕೇವಲ 62 ರನ್ ಮುನ್ನಡೆಯಲ್ಲಿದೆ. ಸೊಹೈಲ್ ಖಾನ್(22) ಹಾಗೂ ಅಸದ್ ಶಫೀಕ್(6) ಕ್ರೀಸ್ ಕಾಯ್ದುಕೊಂಡಿದ್ದಾರೆ.
ಮೂರನೆ ದಿನದಾಟದಲ್ಲಿ ಒಟ್ಟು 14 ವಿಕೆಟ್‌ಗಳು ಪತನಗೊಂಡಿದೆ. ಉಭಯ ತಂಡಗಳ ತಲಾ ಏಳು ವಿಕೆಟ್‌ಗಳು ಉರುಳಿವೆ. ಬೌಲ್ಟ್ 18 ರನ್‌ಗೆ 3 ವಿಕೆಟ್‌ಗಳನ್ನು ಕಬಳಿಸಿದರೆ, ವಾಗ್ನರ್ 21 ರನ್ ನೀಡಿ ಎರಡು ವಿಕೆಟ್ ಉರುಳಿಸಿದರು. ಪಾಕ್ ಕೊನೆಯ ಸೆಶನ್‌ನಲ್ಲಿ ಆರು ವಿಕೆಟ್‌ಗಳನ್ನು ಕಳೆದುಕೊಂಡಿತು.
ಸಮಿ ಅಸ್ಲಮ್(7) ವಿಕೆಟ್ ಉರುಳಿಸಿದ ಕಿವೀಸ್‌ನ ಮೊದಲ ಇನಿಂಗ್ಸ್‌ನ ಹೀರೋ ಗ್ರಾಂಡ್‌ಹೊಮೆ ಪಾಕ್ ಪತನಕ್ಕೆ ನಾಂದಿ ಹಾಡಿದರು. ಅಝರ್ ಅಲಿ(31) ಹಾಗೂ ಬಾಬರ್ ಆಝಂ(29)2ನೆ ವಿಕೆಟ್‌ಗೆ 37 ರನ್ ಸೇರಿಸಿ ತಂಡವನ್ನು ಆಧರಿಸುವ ಯತ್ನ ನಡೆಸಿದರು.
ವಾಗ್ನರ್‌ಗೆ 100 ವಿಕೆಟ್: 29 ರನ್ ಗಳಿಸಿದ ಆಝಂ ವಿಕೆಟ್ ಪಡೆದ ವಾಗ್ನರ್ ತನ್ನ 26ನೆ ಟೆಸ್ಟ್ ಪಂದ್ಯದಲ್ಲಿ 100ನೆ ಟೆಸ್ಟ್ ವಿಕೆಟ್ ಪೂರೈಸಿದರು. ರಿಚರ್ಡ್ ಹ್ಯಾಡ್ಲಿ(25 ಪಂದ್ಯಗಳು) ಬಳಿಕ ಅತ್ಯಂತ ವೇಗವಾಗಿ 100 ವಿಕೆಟ್ ಪಡೆದ ಕಿವೀಸ್‌ನ ಎರಡನೆ ಬೌಲರ್ ಎಂಬ ಕೀರ್ತಿಗೆ ಭಾಜನರಾದರು.
ಕೇವಲ 8 ಎಸೆತಗಳನ್ನು ಎದುರಿಸಿದ ಯೂನಿಸ್ ಖಾನ್(1) ವಾಗ್ನರ್‌ಗೆ ಎರಡನೆ ಬಲಿಯಾದರು. ಆಗ ಪಾಕ್ ಸ್ಕೋರ್ 64 ರನ್‌ಗೆ 3 ವಿಕೆಟ್.
ಪಾಕಿಸ್ತಾನದ ನಾಯಕ ಮಿಸ್ಬಾವುಲ್ ಹಕ್ ವೇಗಿ ಟಿಮ್ ಸೌಥಿ ಸತತ ಎಸೆತಗಳಲ್ಲಿ ಬೌಂಡರಿ ಹಾಗೂ ಸಿಕ್ಸರ್ ಸಿಡಿಸಿದರು. ಆದರೆ, ಮುಂದಿನ ಎಸೆತದಲ್ಲಿ ಔಟಾದರು. 173 ಎಸೆತಗಳನ್ನು ಎದುರಿಸಿದ ಆರಂಭಿಕ ಆಟಗಾರ ಅಝರ್ ಅಲಿ ವಿಕೆಟ್ ಪಡೆದ ಬೌಲ್ಟ್ ಪಾಕ್‌ಗೆ ಮತ್ತೊಂದು ಆಘಾತ ನೀಡಿದರು. ಸುಮಾರು 4 ಗಂಟೆಗೂ ಅಧಿಕ ಸಮಯ ಕ್ರೀಸ್‌ನಲ್ಲಿದ್ದ ಅಲಿ ಕೇವಲ 31 ರನ್ ಗಳಿಸಿದ್ದರು.
ಸರ್ಫರಾಝ್ ಅಹ್ಮದ್(2) ಹಾಗೂ ಮುಹಮ್ಮದ್ ಆಮಿರ್(6) ವಿಕೆಟ್ ಉರುಳಿಸಿದ ಬೌಲ್ಟ್ ಒಟ್ಟು 4 ವಿಕೆಟ್‌ಗಳನ್ನು ತನ್ನದಾಗಿಸಿಕೊಂಡರು.
ನ್ಯೂಝಿಲೆಂಡ್ 200 ರನ್: ಇದಕ್ಕೆ ಮೊದಲು 3 ವಿಕೆಟ್ ನಷ್ಟಕ್ಕೆ 104 ರನ್‌ನಿಂದ ಮೊದಲ ಇನಿಂಗ್ಸ್ ಮುಂದುವರಿಸಿದ ನ್ಯೂಝಿಲೆಂಡ್ 59.5 ಓವರ್‌ಗಳಲ್ಲಿ 200 ರನ್‌ಗೆ ಆಲೌಟಾಯಿತು. ಕೇವಲ 96 ರನ್ ಗಳಿಸುವಷ್ಟರಲ್ಲಿ ಕೊನೆಯ ಏಳು ವಿಕೆಟ್‌ಗಳನ್ನು ಕಳೆದುಕೊಂಡಿತು.
ಜೀತ್ ರಾವಲ್ ಹಾಗೂ ಹೆನ್ರಿ ನಿಕೊಲಸ್ ಕ್ರಮವಾಗಿ 55 ಹಾಗೂ 29 ರನ್‌ನೊಂದಿಗೆ ಬ್ಯಾಟಿಂಗ್ ಮುಂದುವರಿಸಿದರು. ರಾವಲ್ ನಿನ್ನೆಯ ಮೊತ್ತಕ್ಕೆ ಒಂದೂ ರನ್ ಸೇರಿಸದೇ ಔಟಾದರು. ನಿಕೊಲಸ್ ನಿನ್ನೆಯ ಸ್ಕೋರ್‌ಗೆ ಒಂದು ರನ್ ಸೇರಿಸಿ ಔಟಾದರು.
ಚೊಚ್ಚಲ ಟೆಸ್ಟ್‌ನಲ್ಲಿ ಬೌಲಿಂಗ್‌ನಲ್ಲಿ ಮಿಂಚಿದ್ದ ಡಿ ಗ್ರಾಂಡ್‌ಹೊಮೆ 37 ಎಸೆತಗಳಲ್ಲಿ 6 ಬೌಂಡರಿಗಳ ಸಹಿತ 29 ರನ್ ಗಳಿಸಿ ಗಮನ ಸೆಳೆದರು. ಬಾಲಂಗೋಚಿಗಳಾದ ಟಿಮ್ ಸೌಥಿ(22) ಹಾಗೂ ವಾಗ್ನೆರ್(21) ಉಪಯುಕ್ತ ಕೊಡುಗೆ ನೀಡಿ ತಂಡ ಬರೋಬ್ಬರಿ 200 ರನ್ ಗಳಿಸಲು ನೆರವಾದರು.
ಪಾಕಿಸ್ತಾನದ ಬೌಲಿಂಗ್ ವಿಭಾಗದಲ್ಲಿ ವೇಗದ ಬೌಲರ್ ರಾಹತ್ ಅಲಿ(3-43) ಯಶಸ್ವಿ ಬೌಲರ್ ಎನಿಸಿಕೊಂಡರು. ಮುಹಮ್ಮದ್ ಆಮಿರ್(3-43) ಹಾಗೂ ಸೊಹೈಲ್ ಖಾನ್(3-78) ತಲಾ ಮೂರು ವಿಕೆಟ್ ಕಬಳಿಸಿದರು.
ಸಂಕ್ಷಿಪ್ತ ಸ್ಕೋರ್ ವಿವರ
ಪಾಕಿಸ್ತಾನ ಪ್ರಥಮ ಇನಿಂಗ್ಸ್: 133 ರನ್
ನ್ಯೂಝಿಲೆಂಡ್ ಪ್ರಥಮ ಇನಿಂಗ್ಸ್: 200 ರನ್
(ಜೀತ್ ರಾವಲ್ 55,ನಿಕೊಲಸ್ 30, ರಾಹತ್ ಅಲಿ 4-62, ಆಮಿರ್ 3-43, ಖಾನ್ 3-78)
ಪಾಕಿಸ್ತಾನ ದ್ವಿತೀಯ ಇನಿಂಗ್ಸ್: 129/7
(ಅಝರ್ ಅಲಿ 31, ಬಾಬರ್ ಆಝಂ 29, ಸೊಹೈಲ್ ಖಾನ್ ಅಜೇಯ 22, ಬೌಲ್ಟ್ 3-18, ವಾಗ್ನೆರ್ 2-21)







