ವಿದ್ಯುತ್ ತಂತಿ ತಗಲಿ ವ್ಯಕ್ತಿ ಮೃತ್ಯು
ಮೂಡಿಗೆರೆ, ನ.19: ಕುಂದೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕಾರ್ಲಗದ್ದೆ ಗ್ರಾಮದಲ್ಲಿ ಕಾಡು ಹಂದಿಗಾಗಿ ತಾನೇ ಹರಿಸಿದ್ದ ವಿದ್ಯುತ್‌ಗೆ ವ್ಯಕ್ತಿಯೋರ್ವ ಬಲಿಯಾದ ಘಟನೆ ನಡೆದಿದೆ. ಸಾಂಟು(60) ಎಂಬವರೇ ಬಲಿಯಾದ ವ್ಯಕ್ತಿ. ಭದ್ರಾನದಿಯ ಉಪನದಿ ಉಲಿಗೆ ಹಳ್ಳದ ಸಮೀಪವಿರುವ ತನ್ನ ಭತ್ತದ ಗದ್ದೆಗೆ ಕಾಡುಹಂದಿಗಳು ದಾಳಿ ಇಡುತ್ತಿದ್ದುದನ್ನು ಗಮನಿಸಿದ ಸಾಂಟು ಎಂಬವರು ಶುಕ್ರವಾರ ಹಗಲು ಹೊತ್ತಿನಲ್ಲಿ ಪಾಳು ಬಿಟ್ಟಿದ್ದ ಭತ್ತದ ಗದ್ದೆಗೆ ತೆರಳಿ ಸುಮಾರು 50 ಅಡಿಗಳಷ್ಟು ಉದ್ದದ ತಂತಿಯನ್ನು ಹಾಯಿಸಿದ್ದರು. ರಾತ್ರಿ 9 ಗಂಟೆ ಸಮಯದಲ್ಲಿ ತನ್ನದೆ ಸ್ಕೂಟರ್‌ನಲ್ಲಿ ತೆರಳಿದ್ದರು. ಪಂಪ್‌ಸೆಟ್‌ಗೆ ಅಳವಡಿಸಿದ್ದ ಸಂಪರ್ಕದಿಂದ ಗದ್ದೆಯಲ್ಲಿ ಹಾಕಿದ್ದ ತಂತಿಗೆ ವಿದ್ಯುತ್ ಹರಿಸಿ ವಾಪಸಾಗುವ ಮಾರ್ಗದಲ್ಲಿ ಗದ್ದೆಯ ಬದುವನ್ನು ದಾಟುವಾಗ ಕಾಲಿನ ಬೆರಳು ವಿದ್ಯುತ್ ತಂತಿಗೆ ತಗುಲಿತ್ತು. ಶಾಕ್‌ಗೊಳಗಾದ ಅವರು ನೀರಿನ ಮೇಲೆ ಬಿದ್ದು, ವಿದ್ಯುತ್ ಪಸರಿಸಿ ಮೃತಪಟ್ಟಿದ್ದಾರೆ. ಶನಿವಾರ ಬೆಳಗ್ಗೆ 9 ಗಂಟೆಗೆ ಮನೆ ಮಂದಿ ಸ್ಕೂಟರ್ ನಿಂತಿದ್ದ ಜಾಗವನ್ನು ಗುರುತಿಸಿ ಪರಿಶೀಲಿಸಿದಾಗ ಮೃತಪಟ್ಟಿರುವುದು ಕಂಡು ಬಂದಿದೆ. ಈ ಸಂಬಂಧ ಆಲ್ದೂರು ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸ್ಥಳಕ್ಕೆ ಪ್ರಭಾರಿ ಪಿಎಸ್ಸೈ ಬಸವರಾಜು, ಮೆಸ್ಕಾ ಜೆಇ ಸಚಿನ್, ಸ್ಥಳ ಪರಿಶೀಲನೆ ನಡೆಸಿ ವಿದ್ಯುತ್ ಉಪಕರಣಗಳನ್ನು ವಶಪಡಿಸಿಕೊಂಡಿದ್ದಾರೆ.





