ಸಾಲಬಾಧೆ: ರೈತ ಆತ್ಮಹತ್ಯೆ
ಸೊರಬ, ನ. 19: ಸಾಲಬಾಧೆ ತಾಳಲಾರದೇ ರೈತನೋರ್ವ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಘಟನೆ ತಾಲೂಕಿನ ಕುಪ್ಪಗಡ್ಡೆ ಹೋಬಳಿಯ ಕುಮ್ಮೂರು ಗ್ರಾಮದಲ್ಲಿ ನಡೆದಿದೆ.ಕುಮ್ಮೂರು ಗ್ರಾಮದ ಗಂಟೆ ಬಂಗಾರಪ್ಪ(60) ಬಿನ್ ಕರಿಯಪ್ಪಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಈತ ಕುಮ್ಮೂರು ಗ್ರಾಮದ ಸರ್ವೇ ನಂ. 1
4ರಲ್ಲಿ 2 ಎಕರೆ 20 ಗುಂಡೆ ತರಿ ಹಾಗೂ ಸರ್ವೇ ನಂ. 74ರಲ್ಲಿ 2 ಎಕರೆ ಖುಷ್ಕಿ ಜಮೀನು ಹೊಂದಿದ್ದ. ಜಮೀನು ಅಭಿವೃದ್ಧಿಗಾಗಿ ಹಾಗೂ ಕೃಷಿಗಾಗಿ ಉದ್ರಿ ಗ್ರಾಮದ ರಾಷ್ಟ್ರೀಕೃತ ಬ್ಯಾಂಕ್‌ವೊಂದರಲ್ಲಿ ಕಳೆದ ನಾಲ್ಕು ವರ್ಷಗಳ ಹಿಂದೆ 1.5 ಲಕ್ಷ ರೂ. ಸಾಲ ಮಾಡಿ ಸುಸ್ತಿದಾರನಾಗಿದ್ದ. ಮಳೆ ಇಲ್ಲದೇ ಬೆಳೆದ ಬೆಳೆ ಸರಿಯಾಗಿ ಬಾರದೇ ಸಾಲಕ್ಕೆ ಹೆದರಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಸೊರಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರಿದಿದೆ. ತಹಶೀಲ್ದಾರ್ ಎಲ್.ಬಿ. ಚಂದ್ರಶೇಖರ್, ಸಹಾಯಕ ಕೃಷಿ ಅಧಿಕಾರಿ ಜಿ. ಮಂಜುಳಾ, ಗ್ರೇಡ್-2 ತಹಶೀಲ್ದಾರ್ ಅಂಬಾಜಿ, ರಾಜಸ್ವ ನಿರೀಕ್ಷಕ ಶಾಂತಕುಮಾರ್, ಗ್ರಾಮ ಲೆಕ್ಕಿಗ ಮುತ್ತುಕುಮಾರ್ ಸ್ಥಳಕ್ಕೆ ಭೇಟಿ ನೀಡಿದರು.





