ದಾವಣಗೆರೆ: ರೈತರ ಸಾಲಮನ್ನಾಕ್ಕೆ ರಾಜ್ಯ ಕಬ್ಬು ಬೆಳೆಗಾರರ ಸಂಘ ಒತ್ತಾಯ
ದಾವಣಗೆರೆ, ನ.19: ರೈತರ ಸಾಲ ಮನ್ನಾ ವಿಚಾರದಲ್ಲಿ ಕೇಂದ್ರದ ಕಡೆಗೆ ಕೈ ತೋರಿಸುವ ಬದಲು ತನ್ನ ವ್ಯಾಪ್ತಿಯಲ್ಲಿ ಬರುವ ಸಹಕಾರ ಸಂಘಗಳಲ್ಲಿ ರೈತರು ಡೆದಿರುವ ಬೆಳೆಸಾಲವನ್ನು ಮೊದಲು ಮನ್ನಾ ಮಾಡಬೇಕೆಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾ
ರ್ ರಾಜ್ಯ ಸರಕಾರಕ್ಕೆ ಒತ್ತಾಯಿಸಿದ್ದಾರೆ. ಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸಕ್ತ ಸಾಲಿನಲ್ಲಿ ಕಬ್ಬಿಗೆ ದರ ನಿಗದಿಗೊಳಿಸುವ ಕುರಿತು ಸಕ್ಕರೆ ಸಚಿವರು ಗೊಂದಲದ ಹೇಳಿಕೆ ನೀಡುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಸರ್ಕಾರ ಕೂಡಲೇ ಪ್ರತಿಟನ್ ಕಬ್ಬಿಗೆ 3 ಸಾವಿರ ರು. ದರ ನಿಗದಿಗೊಳಿಸಬೇಕೆಂದು ಆಗ್ರಹಿಸಿ ಸಂಘದ ವತಿಯಿಂದ ನ. 21 ರಂದು ಬೆಳಗಾವಿಯ ಸುವರ್ಣ ಸೌಧ ಮುತ್ತಿಗೆ ಮತ್ತು ಜಾಗಟೆ ಚಳುವಳಿ ಹಮಿ್ಮಕೊಳ್ಳಲಾಗಿದೆ ಎಂದು ತಿಳಿಸಿದರು.
ಪ್ರಸ್ತುತ ಮಾರುಕಟ್ಟೆಯಲ್ಲಿ ಪ್ರತಿಕ್ವಿಂಟಲ್ ಸಕ್ಕರೆ ಬೆಲೆ 4 ಸಾವಿರ ರು. ಇದೆ. ಆದರೆ, ಕಬ್ಬಿನ ಬೆಲೆ ಮಾತ್ರ ಸರ್ಕಾರ ಗಣನೀಯವಾಗಿ ಇಳಿಕೆ ಮಾಡು ತ್ತಿದ್ದು, ಈ ಬಗ್ಗೆ ಸಾಕಷ್ಟು ಸಂಶಯಗಳು ವ್ಯಕ್ತವಾಗಿವೆ. ರಾಜ್ಯದ ಕೆಲ ಸಕ್ಕರೆ ಕಾರ್ಖಾನೆಗಳು ಕಬ್ಬು ಖರೀದಿಸಲು ಪೈಪೋಟಿ ದರ ನಿಗದಿ ಮಾಡುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಬೆಳಗಾವಿಯಲ್ಲಿ 2600 ರು. ಬಾಗಲಕೊಟೆಯಲ್ಲಿ 2500 ರು. ವಿಜಾಪು ರಲ್ಲಿ 2300 ರು. ಗಳನ್ನು ಕಟಾವು, ಕೂಲಿ, ಸಾಗಾಣಿಕೆ ವೆಚ್ಚ ಹೊರತುಪಡಿಸಿ ಮೊದಲ ಕಂತು ನೀಡುವುದಾಗಿ ಪ್ರಕಟಿಸಿವೆ.ಆದರೆ ಸಕ್ಕರೆ ಸಚಿವರು 9.5 ಇಳುವರಿಗೆ 2300 ರು. ದರ ಪ್ರಕಟಿಸಿರುವುದು ಗೊಂದಲದ ಸಂದೇಶವಾಗಿದೆ ಎಂದು ಆರೋಪಿಸಿದರು. ಈ ಎಲ್ಲ ಗೊಂದಲ ನಿವಾರಿಸಿ ಪ್ರಸಕ್ತ ಸಾಲಿಗೆ ಪ್ರತಿಟನ್ ಕಬ್ಬಿಗೆ 3000 ರು. ದರ ನಿಗದಿಪಡಿಸಬೇಕು. ಸತತ ಮೂರು ವರ್ಷ ಗಳಿಂದಲೂ ಬರಗಾಲಕ್ಕೆ ಸಿಲುಕಿರುವ ರಾಜ್ಯದ ರೈತರ ಆತ್ಮಹತ್ಯೆ ತಡೆಯಲು ಸಾಲಮನ್ನಾ ಘೋಷಣೆಯನ್ನು ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದಲ್ಲಿಯೇ ಮಾಡಬೇಕೆಂದು ಆಗ್ರಹಿಸಿದರು. ಕೊಳವೆ ಬಾವಿ ಕೊರೆಸುವ ವಿಚಾರದಲ್ಲಿ ಸರ್ಕಾರ ವಿಧಿಸಿರುವ ನಿಯಮ ಸಡಿಲಗೊಳಿಸಿ ಹಳೆಯ ಬೋರ್‌ವೆಲ್ ಪುನಶ್ಚೇತನಕ್ಕೆ ಅವಕಾಶ ಮಾಡಿಕೊಡಬೇಕು ಮತ್ತು ಒಣಗುತ್ತಿರುವ ಬೆಳೆ ಉಳಿಸಿಕೊಳ್ಳಲು ಹೊಸ ಕೊಳವೆ ಬಾವಿ ಕೊರೆಸಲು ಅವಕಾಶ ಮಾಡಿಕೊಡಬೇಕೆಂದು ಮನವಿ ಮಾಡಿದರು.
ಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ತೇಜಸ್ವಿ ಪಟೇಲ್, ರೈತ ಮುಖಂಡ ವರಕೋಡು ಕೃಷ್ಣಗೌಡ, ಅಂಜನಪ್ಪ ಪೂಜಾರ್ ಮತ್ತಿತರರಿದ್ದರು.





